ADVERTISEMENT

ಬಾಗೇಪಲ್ಲಿ | ಮನ ಸೆಳೆಯುವ ಮಿಟ್ಟೇಮರಿ ಮಾದರಿ ಅಂಗನವಾಡಿ ಕೇಂದ್ರ

ಪಿ.ಎಸ್.ರಾಜೇಶ್
Published 5 ಆಗಸ್ಟ್ 2024, 6:14 IST
Last Updated 5 ಆಗಸ್ಟ್ 2024, 6:14 IST
ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿ ಹೋಬಳಿ ಕೇಂದ್ರದ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆ ಎಂ.ಎನ್.ಸಾವಿತ್ರಮ್ಮ ಆಟಿಕೆ, ಬೊಂಬೆಗಳ ಮೂಲಕ ಆಟದ ಜೊತೆ ಪಾಠ ಕಲಿಸುತ್ತಿರುವುದು
ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿ ಹೋಬಳಿ ಕೇಂದ್ರದ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆ ಎಂ.ಎನ್.ಸಾವಿತ್ರಮ್ಮ ಆಟಿಕೆ, ಬೊಂಬೆಗಳ ಮೂಲಕ ಆಟದ ಜೊತೆ ಪಾಠ ಕಲಿಸುತ್ತಿರುವುದು   

ಮಿಟ್ಟೇಮರಿ(ಬಾಗೇಪಲ್ಲಿ): ತಾಲ್ಲೂಕಿನ ಮಿಟ್ಟೇಮರಿ ಹೋಬಳಿ ಕೇಂದ್ರದ ಅಂಗನವಾಡಿ ಕೇಂದ್ರ 1ರ ಕಾರ್ಯಕರ್ತೆ ಎಂ.ಎನ್.ಸಾವಿತ್ರಮ್ಮ ಸರ್ಕಾರಿ ಅನುದಾನಗಳ ಜೊತೆಗೆ, ವೈಯಕ್ತಿಕವಾಗಿ ₹10ಸಾವಿರ ಖರ್ಚು ಮಾಡಿ ಕೇಂದ್ರದ ಮಕ್ಕಳಿಗೆ ವಿವಿಧ ಆಟಿಕೆಗಳನ್ನು ಖರೀದಿ ಮಾಡಿ ಮಾದರಿ ಕೇಂದ್ರವನ್ನಾಗಿ ಮಾಡಿದ್ದಾರೆ.

ಗ್ರಾಮ ಪಂಚಾಯಿತಿ ಕಚೇರಿಯ ಆವರಣದಲ್ಲಿ ಅಂಗನವಾಡಿ ಕೇಂದ್ರ 1 ಇದೆ. ಕೇಂದ್ರದಲ್ಲಿ 46 ಚಿಣ್ಣರು ಇದ್ದಾರೆ. ಗ್ರಾಮದಲ್ಲಿನ ಹಳೇ ಅಂಗನವಾಡಿ ಕೇಂದ್ರಕ್ಕೆ ಬೆಂಗಳೂರಿನ ಯುನಿಟೈಡ್ ವೇ ಕಂಪನಿ ಸುಣ್ಣ, ಬಣ್ಣ ಮಾಡಿಸಿದ್ದಾರೆ. ವೈವಿಧ್ಯಮಯ ಬಣ್ಣಗಳಿಂದ ಗೋಡೆ ಶೃಂಗಾರ ಮಾಡಲಾಗಿದೆ. ಕೇಂದ್ರದ ಒಳಗೆ, ಹೊರಗಡೆ ಗೋಡೆಗಳ ಮೇಲೆ ಪ್ರಾಣಿ, ಪಕ್ಷಿಗಳು, ಪ್ರಾಕೃತಿಕ ಚಿತ್ರ ಬಿಡಿಸಲಾಗಿದೆ. ಅಕ್ಷರ, ಅಂಕಿ, ಕಾಗುಣಿತ ಸೇರಿದಂತೆ ವಿವಿಧ ಮಾಹಿತಿ ಬರೆಸಿದ್ದಾರೆ.

ಅಂಗನವಾಡಿ ಕೇಂದ್ರದ ಮುಂದೆ ಸುಂದರವಾದ ಉದ್ಯಾನ ಮಾಡಲಾಗಿದೆ. ಉದ್ಯಾನದಲ್ಲಿ ಬಣ್ಣ ಬಣ್ಣದ ಹೂವುಗಳು ಜನರನ್ನು ಹಾಗೂ ಮಕ್ಕಳನ್ನು ಕೈ ಬೀಸಿ ಕರೆಯುತ್ತಿದೆ. ಅಂಗನವಾಡಿ ಕಾರ್ಯಕರ್ತೆ ಸಾವಿತ್ರಮ್ಮ ಕಳೆದ 35ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ADVERTISEMENT

ಇವರ ಸೇವೆ ಗುರುತಿಸಿ ಸಮಗ್ರ ಬಾಲವಿಜ್ಞಾನ ಯೋಜನೆಯಡಿ ‘ಉತ್ತಮ ಅಂಗನವಾಡಿ ಕಾರ್ಯಕರ್ತೆ’ ಪ್ರಶಸ್ತಿ, ರಾಜ್ಯ ಮಕ್ಕಳ ಹಕ್ಕುಗಳ ಕಾರ್ಯಕ್ರಮದ ತರಬೇತಿಯ ಪ್ರಶಸ್ತಿ, ಕನ್ನಡ ರಾಜ್ಯೋತ್ಸವದ ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಸಿರಿಧಾನ್ಯದ ಜ್ಞಾನ ರಾಯಭಾರಿ ಪ್ರಶಸ್ತಿ, ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಂಸನಾ ಪತ್ರ ಪಡೆದಿದ್ದಾರೆ.

‘ಮಿಟ್ಟೇಮರಿ ಅಂಗನವಾಡಿ ಕೇಂದ್ರ ಆಕರ್ಷಣೀಯವಾಗಿದೆ. ಮಕ್ಕಳ ಕಲಿಕೆಗೆ ಉತ್ತಮವಾಗಿದೆ. ಅಂಗನವಾಡಿ ಕಾರ್ಯಕರ್ತೆಯ ಶ್ರಮದಿಂದ ಕಲಿಕೆಗೆ ಪೂರಕವಾದ ವಾತಾವರಣ ಮಾಡಿಸಿದ್ದಾರೆ’ ಎಂದು ಕೇಂದ್ರ ಪೋಷಕಿ ಶಿಲ್ಪ ಹೇಳಿದರು.

‘ಚಿಣ್ಣರಿಗೆ ಆಟದ ಜೊತೆಗೆ ಪಾಠ ಹೇಳಿಕೊಡುತ್ತಿದ್ದೇವೆ. ಮಕ್ಕಳ ಕಲಿಕೆಗೆ ಪೂರಕವಾದ ಆಟಿಕೆ, ಬೊಂಬೆ ಬಳಕೆ ಮಾಡಲಾಗುತ್ತದೆ. ಎಲ್‌ಕೆಜಿ, ಯುಕೆಜಿಯ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರದಲ್ಲಿ ಮಾಡಬೇಕು. ದಾನಿಗಳ, ಅಧಿಕಾರಿಗಳ, ಜನಪ್ರತಿನಿಧಿಗಳ ಸಹಕಾರ ಇದೆ’ ಎಂದು ಅಂಗನವಾಡಿ ಕಾರ್ಯಕರ್ತೆ ಎಂ.ಎನ್.ಸಾವಿತ್ರಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಾಲ್ಲೂಕಿನ ಕೆಲ ಅಂಗನವಾಡಿ ಕೇಂದ್ರಗಳನ್ನು ಆಕರ್ಷಣೀಯ ರೀತಿಯಲ್ಲಿ ಕಟ್ಟಡ, ಗೋಡೆಬರಹ ಮಾಡಿಸಲಾಗಿದೆ. ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಸೇರಿಸಿ, ಸರ್ಕಾರದ ಯೋಜನೆ ಪಡೆದುಕೊಳ್ಳಬೇಕು’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಚಂದ್ರ ‘ಪ್ರಜಾವಾಣಿ’ ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.