ADVERTISEMENT

ಬಾಗೇಪಲ್ಲಿ | ನೀರು, ರಸ್ತೆ ಕಲ್ಪಿಸುವಂತೆ ಪ್ರತಿಭಟನೆ

ಶ್ರೀರಾಮರೆಡ್ಡಿ ಬಡಾವಣೆ ನಿವಾಸಿಗಳಿಂದ ತಾಲ್ಲೂಕು ಕಚೇರಿ ಮುಂದೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:59 IST
Last Updated 18 ಸೆಪ್ಟೆಂಬರ್ 2025, 4:59 IST
ಬಾಗೇಪಲ್ಲಿ ತಾಲ್ಲೂಕು ಕಚೇರಿ ಮುಂದೆ ಶ್ರೀರಾಮರೆಡ್ಡಿ ಬಡಾವಣೆ ನಿವಾಸಿಗಳು ಪ್ರತಿಭಟನೆ ಮಾಡಿದರು
ಬಾಗೇಪಲ್ಲಿ ತಾಲ್ಲೂಕು ಕಚೇರಿ ಮುಂದೆ ಶ್ರೀರಾಮರೆಡ್ಡಿ ಬಡಾವಣೆ ನಿವಾಸಿಗಳು ಪ್ರತಿಭಟನೆ ಮಾಡಿದರು   

ಬಾಗೇಪಲ್ಲಿ: ತೀಮಾಕಲಪಲ್ಲಿ ಕ್ರಾಸ್ ಬಳಿಯ ಶ್ರೀರಾಮರೆಡ್ಡಿ ಬಡಾವಣೆಯಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕ, ಚರಂಡಿ, ಸೇತುವೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಬುಧವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಸಂತೆಮೈದಾನ ರಸ್ತೆಯಲ್ಲಿನ ಚಿತ್ರಾವತಿ ಸೇತುವೆಯಿಂದ ಡಿವಿಜಿ ಮುಖ್ಯರಸ್ತೆ ಮೂಲಕ ತಾಲ್ಲೂಕು ಕಚೇರಿವರೆಗೆ ನಿವಾಸಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಮಿತಿ ಅಧ್ಯಕ್ಷ ಕೆ.ಮುನಿಯಪ್ಪ ಮಾತನಾಡಿ, 2007-08ರಲ್ಲಿ ಪುರಸಭೆಯಿಂದ ಬಾಗೇಪಲ್ಲಿಯಲ್ಲಿ ನಿವೇಶನ ರಚನೆ ಮಾಡಿ ಹಂಚಿಕೆ ಮಾಡಲಾಗಿದೆ. ಇದುವರೆಗೂ ಕೆಲ ಅರ್ಹ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ಹಂಚಿಕೆ ಮಾಡಿಲ್ಲ. ಬಹುತೇಕರು ಕೃಷಿಕೂಲಿಕಾರ್ಮಿಕರು, ಅಲ್ಪಸಂಖ್ಯಾತರು, ಹಿಂದುಳಿದ, ದಲಿತರು ವಾಸ ಮಾಡುತ್ತಿದ್ದಾರೆ ಎಂದರು.

ADVERTISEMENT

ತೀಮಾಕಲಪಲ್ಲಿ ಕ್ರಾಸ್‌ನಿಂದ ಬಡಾವಣೆಗೆ ಸಮರ್ಪಕವಾದ ರಸ್ತೆ ಇಲ್ಲ. ಕೆಲವರು ಸಾಲಮಾಡಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಪುರಸಭೆ 2 ಹಾಗೂ 3ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮಾ ಮಾಡಿಲ್ಲ. ಪುರಸಭೆ ಅಧಿಕಾರಿಗಳು, ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಬಡಜನರು ಸಂಕಷ್ಟ ಅನುಭವಿಸುವಂತೆ ಆಗಿದೆ ಎಂದರು.

ಸಮಿತಿ ಮುಖಂಡ ಟೌನ್‍ ಜಿ.ಕೃಷ್ಣಪ್ಪ ಮಾತನಾಡಿ, ಪುರಸಭೆಯಿಂದ ನಿವೇಶನ, ಮನೆಗಳ ನಿರ್ಮಾಣ ಹಾಗೂ ಸೌಲಭ್ಯ ಕಲ್ಪಿಸಿಲ್ಲ. ಮತ್ತೊಂದೆಡೆ ಪರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬಡಾವಣೆ ಸೇರಿದೆ. ಇತ್ತ ಪುರಸಭೆಯಿಂದ, ಅತ್ತ ಪಂಚಾಯಿತಿಯಿಂದ ಸೌಲಭ್ಯ ಕಲ್ಪಿಸದೇ ಇರುವುದರಿಂದ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು.

ಸರ್ಕಾರಪರಗೋಡುಗ್ರಾಮ ಪಂಚಾಯಿತಿಯಲ್ಲಿನ ಬಡಾವಣೆಯ ದಾಖಲೆಗಳನ್ನು ಪುರಸಭೆ ಹಸ್ತಾಂತರ ಮಾಡಬೇಕು. ಪುರಸಭೆ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಶಾಸಕರು ಬಡಾವಣೆಗೆ ಭೇಟಿ ಮಾಡಿ ನಿವಾಸಿಗಳಿಗೆ ಕನಿಷ್ಠ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಸಮಿತಿಯ ಮುಖಂಡ ಡಿ.ಟಿ.ಮುನಿಸ್ವಾಮಿ ಮಾತನಾಡಿ, ಪರಗೋಡು, ಘಂಟಂವಾರಿಪಲ್ಲಿ, ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯನ್ನು ಸೇರಿಸಿಕೊಂಡು ಪುರಸಭೆಯಿಂದ ನಗರಸಭೆ ಮಾಡಲು ಪುರಸಭೆ ಅಧಿಕಾರಿಗಳು, ಆಡಳಿತಮಂಡಳಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪತ್ರ ಬರೆಯಬೇಕು. ಸರ್ಕಾರದಿಂದ ನಗರಸಭೆ ಮಾಡಿಸಲು ಜನಪ್ರತಿನಿಧಿಗಳು ಹೋರಾಟ ಮಾಡಬೇಕು. ಆದರೆ ಪುರಸಭೆಯ ಕಡಿಮೆ ಅನುದಾನಗಳಿಂದ ಪಟ್ಟಣ ಹಾಗೂ ಬಡಾವಣೆಗಳನ್ನು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ಆಗುವುದಿಲ್ಲ ಎಂದರು.

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಮನೀಷಾ ಎನ್.ಪತ್ರಿ, ಸಬ್‌ ಇನ್‌ಸ್ಪೆಕ್ಟರ್ ಸುನಿಲ್‍ಕುಮಾರ್, ಪರಗೋಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗಮಣಿ ಆಗಮಿಸಿ ನಿವಾಸಿಗಳ ಜತೆ ಚರ್ಚೆ ಮಾಡಿದರು.

ಶುದ್ಧ ಕುಡಿಯುವ ನೀರಿನ ಘಟಕ ಒಂದು ವಾರದ ಒಳಗೆ ರಿಪೇರಿ ಮಾಡಿಸಿ ನೀರು ಸರಬರಾಜು ಮಾಡುವಂತೆ ತಹಶಿಲ್ದಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಉಳಿದಂತೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ, ಸಮಸ್ಯೆಗಳನ್ನು ಹಂತ ಹಂತದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.

ಮುಖಂಡ ಎಚ್.ಎ.ರಾಮಲಿಂಗಪ್ಪ, ಬಿಳ್ಳೂರುನಾಗರಾಜ್, ವಾಲ್ಮೀಕಿ ಅಶ್ವತ್ಥಪ್ಪ, ಎ.ಸೋಮಶೇಖರ, ರಾಮಾಂಜಿ, ಮಹೇಶಬಾಬು, ಶಬೀನಾಬಾನು, ನಾರಾಯಣಸ್ವಾಮಿ, ಅಸ್ಮದ್, ನಾಸೀರ್, ಶೋಭಾ, ವಹೀದಾ, ನಸೀಮಾ, ಪರ್ವೀನ, ನೌಷಾದ್, ಫರೀದಾ, ಚಾಂದ್‍ಭಾಷ, ಮಲ್ಲಿಕಾರ್ಜುನಾಚಾರಿ, ನಂಜುಂಡಯ್ಯ, ಮೂರ್ತಿ, ಲಕ್ಷ್ಮಿನರಸಮ್ಮ, ಮಂಜುಳ, ಶಿವಪ್ಪ, ದಸ್ತಗೀರ್ ಇದ್ದರು.

ಬಡಾವಣೆಯ ನಿವಾಸಿ ಮಹಿಳೆಯೊಬ್ಬರು ತಹಶೀಲ್ದಾರ್ ಮನೀಷಾ ಎನ್ ಪತ್ರಿ ಪರಗೋಡು ಗ್ರಾಮ ಪಂಚಾಯಿತಿ ಅಧಿಕಾರಿ ನಾಗಮಣಿರವರಿಗೆ ಸಮಸ್ಯೆಗಳ ಬಗ್ಗೆ ತಿಳಿಸುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.