ADVERTISEMENT

ಭಗತ್ ಸಿಂಗ್ ಅಪ್ರತಿಮ ಹೋರಾಟಗಾರ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 14:08 IST
Last Updated 28 ಸೆಪ್ಟೆಂಬರ್ 2020, 14:08 IST
ಕಾರ್ಯಕ್ರಮದಲ್ಲಿ ಭಗತ್‌ ಸಿಂಗ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಭಗತ್‌ ಸಿಂಗ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.   

ಚಿಕ್ಕಬಳ್ಳಾಪುರ: ‘ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ಭಗತ್‌ಸಿಂಗ್‌ ಅವರ ಬದುಕು ಯುವಜನರಿಗೆ ಸ್ಫೂರ್ತಿಯಾಗಬೇಕು’ ಎಂದು ಬಿಜೆಪಿಯ ರಾಜ್ಯ ಕಾರ್ಯಕಾರಣಿ ಸದಸ್ಯ ಲಕ್ಷ್ಮೀನಾರಾಯಣ ಗುಪ್ತಾ ಹೇಳಿದರು.

ನಗರದ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್‌ನಲ್ಲಿ ಸೋಮವಾರ ಆಯೋಜಿಸಿದ್ದ ಭಗತ್ ಸಿಂಗ್ ಅವರ 113ನೇಯ ಜನ್ಮದಿನಾಚರಣೆ‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೇವಲ ಸ್ವಾತಂತ್ರ್ಯ ಪಡೆಯುವುದು ನಮ್ಮ ಉದ್ದೇಶವಲ್ಲ. ಬ್ರಿಟೀಷರಿಂದ ಪಡೆದ ಸ್ವಾತಂತ್ರ್ಯ ನಮ್ಮ ದೇಶದ ಕೆಲವೇ ಕೆಲವು ಶ್ರೀಮಂತ ವರ್ಗಕ್ಕೆ ವರ್ಗಾವಣೆಯಾದರೆ, ಅದು ನಿಜವಾದ ಸ್ವಾತಂತ್ರ್ಯವಾದೀತೆ ಎಂದು ಪ್ರಶ್ನಿಸಿದ್ದ ಭಗತ್‌ಸಿಂಗ್‌ ಸದಾ ಶೋಷಣೆಯ ವಿರುದ್ಧ ನಿಂತಿದ್ದವರಾಗಿದ್ದರು’ ಎಂದು ತಿಳಿಸಿದರು.

ADVERTISEMENT

‘ಸ್ವಾತಂತ್ರ್ಯವು ದೇಶದ ಸಾಮಾನ್ಯ ಜನರ ಬದುಕಿನಲ್ಲಿ ಏನಾದರೂ ಬದಲಾವಣೆಯನ್ನು ತರಬೇಕು. ರೈತರ, ಬಡ ಕೂಲಿ-ಕಾರ್ಮಿಕರ ಜೀವನ ಉತ್ತಮವಾಗಬೇಕು ಎಂಬುದು ಭಗತ್‌ ಸಿಂಗ್‌ ಆಶಯವಾಗಿತ್ತು. ಸ್ವಾತಂತ್ರ್ಯ ಪಡೆಯುವುದಷ್ಟೇ ಅಲ್ಲ, ಉನ್ನತವಾದ ರಾಷ್ಟ್ರವನ್ನು ನಿರ್ಮಾಣ ಮಾಡುವುದು ದೇಶದ ಎಲ್ಲರ ಗುರಿಯಾಗಬೇಕು’ ಎಂದರು.

‘ತನ್ನೆಲ್ಲ ಜನರಿಗೆ ಸಮಾನವಾಗಿ ಬದುಕುವ ಹಕ್ಕನ್ನು ನೀಡುವ ರಾಷ್ಟ್ರ, ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯದ ರಾಷ್ಟ್ರ, ಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ಕೊನೆಗಾಣಿಸುವ ರಾಷ್ಟ್ರವೊಂದರ ಕನಸನ್ನುಭಗತ್‌ ಸಿಂಗ್‌ ಕಂಡಿದ್ದರು’ ಎಂದು ಹೇಳಿದರು.

ಟ್ರಸ್ಟಿನ ನಿರ್ದೇಶಕರಾದ ಮಧುಚಂದ್ರ, ಮಲ್ಲಿಕಾಗೌಡ, ಕಚೇರಿ ಕಾರ್ಯದರ್ಶಿ ಅನಿಲ್, ಯುವ ಮೋರ್ಚಾ ಸದಸ್ಯ ಸಿ.ಬಿ.ಕಿರಣ್, ಸದಸ್ಯರಾದ ಮನೋಜ್, ಶ್ರೀತಮ್ ನಾಯ್ಡು, ವಿಜಯ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.