
ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಗ್ರಾಮದಲ್ಲಿ ಫೆ.16ರಂದು ಭೋಗ ನಂದೀಶ್ವರ ಮತ್ತು ಯೋಗ ನಂದೀಶ್ವರ ರಥೋತ್ಸವ ನಡೆಯುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು ಹಾಗೂ ಅಧಿಕಾರಿಗಳು ದೇಗುಲಕ್ಕೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಅಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡುವರು.
ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆ ಹಾಗೂ ನೆರೆಯ ಆಂಧ್ರಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳುವರು.
ಈ ವರ್ಷದಿಂದ ಸಾಮಾನ್ಯರ ಸಾಲಿನಲ್ಲಿ ಒಮ್ಮೆ 1000ರಿಂದ 1500 ಭಕ್ತರು ದೇವರ ದರ್ಶನ ಪಡೆಯಬಹುದು. ವಿಶೇಷ ದರ್ಶನದ ವ್ಯವಸ್ಥೆ ಸಹ ಕಲ್ಪಿಸಲಾಗಿದೆ. ವಿಶೇಷ ದರ್ಶನಕ್ಕೆ ₹ 250 ನಿಗದಿಪಡಿಸಲಾಗಿದೆ.
ಭಕ್ತರಿಗೆ, ಸಾರ್ವಜನಿಕರಿಗೆ ದ್ವಾರ ಬಾಗಿಲಿನಿಂದ ಪ್ರವೇಶವಿದೆ. ಅರುಣಾಚಲೇಶ್ವರ, ಭೋಗ ನಂದೀಶ್ವರ, ಅಪೀತಕುಚಾಂಭ ದೇವಿಯ ದರ್ಶನ ಪಡೆದು ಕಲ್ಯಾಣಿ ಕಡೆಯಿಂದ ಹೊರಗಡೆ ಹೋಗಲು ವ್ಯವಸ್ಥೆ ಮಾಡಲಾಗಿದೆ.
ಭಕ್ತರಿಗೆ, ಸಾರ್ವಜನಿಕರಿಗೆ 15 ರಂದು ರಾತ್ರಿ 11 ಗಂಟೆಗೆ ನಾಟಕ ಪ್ರದರ್ಶನವಿದೆ. ರಥೋತ್ಸವಕ್ಕೆ ಸಂಬಂಧಿಸಿದ ಕೆಲಸಗಳ ನಿರ್ವಹಣೆಗೆ ಶಿಷ್ಟಾಚಾರ ಸಮಿತಿ, ಆರೋಗ್ಯ ಸಮಿತಿ, ಸ್ವಚ್ಛತಾ ಸಮಿತಿ ಸೇರಿದಂತೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ. ವಯೋ ವೃದ್ಧರಿಗೆ ಮತ್ತು ಅಂಗವಿಕಲರಿಗೆ ವೀಲ್ ಚೇರ್ ವ್ಯವಸ್ಥೆ ಹಾಗೂ ನೇರ ದರ್ಶನ ಕಲ್ಪಿಸಲಾಗುತ್ತದೆ.
ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ಮೊಬೈಲ್ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ. ನಂದಿ ಗ್ರಾಮದ ತಿರುಮಲ ಮದ್ಯದ ಅಂಗಡಿ ಮತ್ತು ಕುಪ್ಪಳ್ಳಿ ಗ್ರಾಮದ ಎಸ್.ಎಸ್.ಪಿ.ಲಿಕ್ಕರ್ ಝೋನ್ ಮದ್ಯದಂಗಡಿಗಳಲ್ಲಿ 16ರ ಮಧ್ಯರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.