ADVERTISEMENT

ಶಿಡ್ಲಘಟ್ಟ: ಮಧುರ ನೆನಪು ತೆರೆದಿಡುವ ಕಪ್ಪು ಬಿಳುಪು ಚಿತ್ರ

ಡಿ.ಜಿ.ಮಲ್ಲಿಕಾರ್ಜುನ
Published 29 ಜುಲೈ 2025, 3:55 IST
Last Updated 29 ಜುಲೈ 2025, 3:55 IST
ಶಿಡ್ಲಘಟ್ಟದಲ್ಲಿ ಹಿಂದಿ ಪ್ರಚಾರ ಸಮಿತಿಯ ಹಿಂದಿ ಕಲಿಕಾರ್ಥಿಗಳ 1956ರಲ್ಲಿ ಚಿತ್ರ
ಶಿಡ್ಲಘಟ್ಟದಲ್ಲಿ ಹಿಂದಿ ಪ್ರಚಾರ ಸಮಿತಿಯ ಹಿಂದಿ ಕಲಿಕಾರ್ಥಿಗಳ 1956ರಲ್ಲಿ ಚಿತ್ರ   

ಶಿಡ್ಲಘಟ್ಟ: ಕಪ್ಪು ಬಿಳುಪಿನ ಛಾಯಾ ಚಿತ್ರಗಳು ಇಂದಿಗೂ ಕಣ್ಮನ ಸೆಳೆಯುತ್ತವೆ. ಕೆಲವರಿಗಂತೂ ಕಪ್ಪು ಬಿಳುಪಿನ ಚಿತ್ರಗಳು ಎಂದೊಡನೆಯೇ ಗತಕಾಲದ ಮಧುರ ನೆನಪುಗಳ ಮೆರವಣಿಗೆ.

ಅವು ಹಿಂದಿನವರ ಸಾಮಾಜಿಕ, ಸಾಂಸ್ಕೃತಿಕ, ಅಭಿರುಚಿ, ವೇಷಭೂಷಣ ಮುಂತಾದವುಗಳನ್ನು ನೆನಪಿಸುವ ಮತ್ತು ಆಗಿನ ಕಾಲದರ್ಶನ ಮಾಡಿಸುವ ಸುಂದರ ಪ್ರವೇಶ ದ್ವಾರಗಳು. ಇಂತಹ ಅಪರೂಪದ ಕಪ್ಪುಬಿಳುಪಿನ ಛಾಯಾಚಿತ್ರಗಳ ಸಂಗ್ರಹಗಳು ವಿರಳ.

ಶಿಡ್ಲಘಟ್ಟದ ಇತಿಹಾಸದ ತುಣುಕುಗಳಂತೆ ಕಾಣುವ ಹಲವು ಚಿತ್ರಗಳು ಈಗಲು ಅಲ್ಲಲ್ಲಿ ಕೆಲವಿವೆ. ಶಿಡ್ಲಘಟ್ಟಕ್ಕೆ ಕನ್ನಡ ಚಿತ್ರರಂಗದ ಭೀಷ್ಮರೆಂದು ಪ್ರಖ್ಯಾತಿ ಪಡೆದ ಆರ್.ನಾಗೇಂದ್ರರಾವ್, ಹಾಸ್ಯನಟ ನರಸಿಂಹರಾಜು, ಗಿರಿಜಾ ಲೋಕೇಶ್ ಮುಂತಾದವರು ಬಂದಾಗಿನ ಚಿತ್ರಗಳು, ಗೆಳೆಯರೊಂದಿಗೆ, ಕುಟುಂಬ ಸಮೇತ, ಗೆದ್ದ ಪ್ರಶಸ್ತಿ ಫಲಕದೊಂದಿಗಿನ ಚಿತ್ರಗಳು, ನಾಟಕದ ವೇಷಧಾರಿಯಾಗಿ, ಸೂಟುಬೂಟು ಧರಿಸಿರುವ ಚಿತ್ರಗಳನ್ನು ಕಂಡಾಗ ಆಗಿನ ಜನರ ಬದುಕು ಸಿನಿಮಾ ರೀಲಿನಂತೆ ಕಣ್ಣ ಮುಂದೆ ಸಾಗುತ್ತದೆ.

ADVERTISEMENT

1956ರಲ್ಲಿ ರಾಷ್ಟ್ರಭಾಷೆಯಾದ ಹಿಂದಿಯನ್ನು ಮಕ್ಕಳಿಂದ ಹಿರಿಯರವರೆಗೂ ಉಚಿತವಾಗಿ ಕಲಿಸುವ ಕೆಲಸವನ್ನು ಶಿಡ್ಲಘಟ್ಟದ ಹಿಂದಿ ಪ್ರಚಾರ ಸಮಿತಿ ಮಾಡುತ್ತಿತ್ತು. ಸ್ವಾತಂತ್ರ್ಯ ಬಂದು ಕೆಲವೇ ವರ್ಷಗಳಾಗಿದ್ದರಿಂದ ರಾಷ್ಟ್ರೀಯತೆಯನ್ನು ಬಿಂಬಿಸುವ ಉದ್ದೇಶದಿಂದ ಹಿಂದಿ ಪಂಡಿತರಾಗಿದ್ದ ಎಚ್.ವಿ.ರಾಮಚಂದ್ರರಾವ್ ನೇತೃತ್ವದಲ್ಲಿ ಹಿಂದಿ ತರಗತಿ ನಡೆಸಲಾಗುತ್ತಿತ್ತು. ಮುಂದೆ ಎಚ್.ವಿ.ರಾಮಚಂದ್ರರಾವ್ ಆಕಾಶವಾಣಿ ನಿರ್ದೇಶಕರಾದರು. 1991 ರಲ್ಲಿ ಇವರನ್ನು ಶಿಡ್ಲಘಟ್ಟದಲ್ಲಿ ನಡೆದ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಗೌರವಿಸಲಾಯಿತು.

ಕಪ್ಪು ಬಿಳುಪು ಚಿತ್ರವನ್ನು ಕ್ಯಾಬಿನೆಟ್ ಆಕಾರದ ಚಿತ್ರವನ್ನು ಕಟ್ಟು ಹಾಕಿಸಿ ಮನೆಗೆ ಬಂದವರೆಲ್ಲರಿಗೂ ಕಾಣುವಂತೆ ನೇತು ಹಾಕಿ ಹೆಮ್ಮೆ ಪಟ್ಟುಕೊಳ್ಳುವ ಕಾಲ ಈಗ ಕೇವಲ ಮಧುರ ನೆನಪಷ್ಟೇ.

ಶಿಡ್ಲಘಟ್ಟಕ್ಕೆ ಕನ್ನಡ ಚಿತ್ರರಂಗದ ಭೀಷ್ಮರೆಂದು ಪ್ರಖ್ಯಾತಿ ಪಡೆದ ಆರ್.ನಾಗೇಂದ್ರರಾವ್ ಬಂದಾಗಿನ ಚಿತ್ರ
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಮದುವೆಗೆ ಬಂದಿದ್ದ ಹಾಸ್ಯನಟ ನರಸಿಂಹರಾಜು ದಂಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.