ADVERTISEMENT

ಶಿಡ್ಲಘಟ್ಟದ ರೇಷ್ಮೆಗೆ ಉಂಟು ಜಪಾನಿನ ನಂಟು

ಜಪಾನ್‌ ರೇಷ್ಮೆ ಕೃಷಿಯಿಂದ ಸ್ಫೂರ್ತಿ ಪಡೆದ ಜೆ.ಎಸ್.ಟಾಟಾ

ಡಿ.ಜಿ.ಮಲ್ಲಿಕಾರ್ಜುನ
Published 8 ಏಪ್ರಿಲ್ 2023, 5:31 IST
Last Updated 8 ಏಪ್ರಿಲ್ 2023, 5:31 IST
ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ.ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ವಿ.ಮುನೇಗೌಡ ಅವರು 1970 ರಲ್ಲಿ ‘ಎಕ್ಸ್ ಪೋ 70’ ಎಂಬ ಬೃಹತ್ ಪ್ರದರ್ಶನಕ್ಕೆ ಭೇಟಿ ನೀಡಿದ್ದ ಅನುಭವವನ್ನು ವಿವರಿಸಿದರು
ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ.ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ವಿ.ಮುನೇಗೌಡ ಅವರು 1970 ರಲ್ಲಿ ‘ಎಕ್ಸ್ ಪೋ 70’ ಎಂಬ ಬೃಹತ್ ಪ್ರದರ್ಶನಕ್ಕೆ ಭೇಟಿ ನೀಡಿದ್ದ ಅನುಭವವನ್ನು ವಿವರಿಸಿದರು   

ಶಿಡ್ಲಘಟ್ಟ: ಶಿಡ್ಲಘಟ್ಟವನ್ನು ‘ಸಿಲ್ಕ್ ಸಿಟಿ’ ಎಂದು ಕರೆಯಲಾಗುತ್ತದೆ. ಇಂತಹ ರೇಷ್ಮೆಯ ನಗರಿಯ ಬೆಳವಣಿಗೆಯಲ್ಲಿ ದೂರದ ಜಪಾನ್ ಪ್ರಮುಖ ಪಾತ್ರವಹಿಸಿದೆ. ಹೌದು, ಅಚ್ಚರಿ ಎನಿಸಿದರೂ ಸತ್ಯ. ಶಿಡ್ಲಘಟ್ಟದ ರೇಷ್ಮೆ ನೂಲು ಬಿಚಾಣಿಕೆಯ ತಂತ್ರಜ್ಞಾನವು ಜಪಾನಿನ ತಂತ್ರಜ್ಞದ ಎರವಲಾಗಿದೆ. ವಿಶೇಷವೆಂದರೆ ಶಿಡ್ಲಘಟ್ಟದ ರೇಷ್ಮೆ ಉತ್ಪಾದನೆಯಲ್ಲಿ ಈಗಲೂ ಜಪಾನ್ ತಂತ್ರಜ್ಞಾನವನ್ನೇ ಬಳಸಲಾಗುತ್ತಿದೆ.

1970 ರಲ್ಲಿ ಜಪಾನ್ ದೇಶಕ್ಕೆ ರಾಜ್ಯ ಸರ್ಕಾರದ ಪ್ರತಿನಿಧಿಗಳಾಗಿ ಭೇಟಿ ನೀಡಿದ್ದ ತಂಡದಲ್ಲಿದ್ದ ಭಕ್ತರಹಳ್ಳಿಯ ಬಿ.ಎಂ.ವಿ.ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ವಿ.ಮುನೇಗೌಡ ಅವರು ಶಿಡ್ಲಘಟ್ಟದ ಚರಿತ್ರೆಯಲ್ಲಿನ ರೇಷ್ಮೆಯ ಹೊಳಪಿನ ಪುಟಗಳ ಬಗ್ಗೆ ಬೆಳಕನ್ನು
ಚೆಲ್ಲಿದ್ದಾರೆ.

1893 ರಲ್ಲಿ ಜಪಾನ್‌ಗೆ ಭೇಟಿ ನೀಡಿದ್ ಜೇಮ್‌ ಶೆಟ್ ಜಿ ಟಾಟಾ ಅವರು ಅಲ್ಲಿನ ವೈಜ್ಞಾನಿಕ ರೇಷ್ಮೆ ಕೃಷಿ ಕಂಡು ಸ್ಫೂರ್ತಿಯಾಗಿ ಭಾರತದಲ್ಲೂ ರೇಷ್ಮೆ ಉತ್ಪಾದನಾ ಘಟಕ ಸ್ಥಾಪಿಸಲು ನಿರ್ಧರಿಸಿದರು. ಬೆಂಗಳೂರಿನ ಸಮಶೀತೋಷ್ಣ ಹವಾಮಾನ ಜಪಾನಿನ ಹವಾಮಾನವನ್ನು ಹೋಲುವುದು ಎಂದು ದಿವಾನ್ ಶೇಷಾದ್ರಿ ಅಯ್ಯರ್ ಅವರೊಂದಿಗೆ ಸಮಾಲೋಚಿಸಿದರು. ಮಹಾರಾಜರಿಂದ ಸ್ಥಳವನ್ನು ಪಡೆದರು. ಅದುವೇ ಬಸವನಗುಡಿಯ ದಕ್ಷಿಣದಲ್ಲಿರುವ ಟಾಟಾ ಸಿಲ್ಕ್ ಫಾರಂ ಬಡಾವಣೆ. 1900 ರಲ್ಲಿ ಜೆ.ಎಸ್.ಟಾಟಾ ಅವರ ಧನ ಸಹಾಯದಿಂದ ಇಲ್ಲಿ ರೇಷ್ಮೆ ಕೇಂದ್ರ ಸ್ಥಾಪನೆಯಾಯಿತು.

ADVERTISEMENT

ಜಪಾನಿನ ರೇಷ್ಮೆ ಪರಿಣತ ಒಡ್ಜು ದಂಪತಿಯನ್ನು ವ್ಯವಸ್ಥಾಪಕರನ್ನಾಗಿ ನೇಮಿಸಿದರು. ಅವರು ಜಪಾನ್‌ನಿಂದ ರೀಲಿಂಗ್ ಯಂತ್ರೋಪಕರಣಗಳನ್ನು ಆಮದು ಮಾಡಿಕೊಂಡರು. ಟಾಟಾ ಸಿಲ್ಕ್ ಫಾರ್ಮ್ ಅಪ್ರೆಂಟಿಸ್‌ಗಳಿಗೆ ಮೂರು ತಿಂಗಳ ಅವಧಿಯ ಉಚಿತ ತರಬೇತಿ ಕಾರ್ಯಕ್ರಮ ರೂಪಿಸಿತು.

ರೇಷ್ಮೆ ಹುಳುಗಳ ಸಾಕಣೆ, ಕ್ರಾಸ್ ಬ್ರೀಡಿಂಗ್, ರೇಷ್ಮೆ ಗೂಡಿನ ಸಂರಕ್ಷಣೆ ಮತ್ತು ರೇಷ್ಮೆಯ ರಚನೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತರಬೇತಿ ನೀಡಿದರು. ಭಾರತೀಯರ ಚುರುಕು ಬುದ್ಧಿಯಿಂದಾಗಿ ಅತ್ಯುನ್ನತ ಗುಣಮಟ್ಟದ ರೇಷ್ಮೆ ಹೊರಹೊಮ್ಮಿತು. ಈ ಫಾರ್ಮ್‌ನಲ್ಲಿ ನೇಯ್ದ ರೇಷ್ಮೆಯನ್ನು ಯುರೋಪ್‌ಗೆ ಕಳುಹಿಸಲಾಯಿತು. ಅಲ್ಲಿ ತಜ್ಞರು ಇದನ್ನು ವಿಶ್ವದ ಅತ್ಯುತ್ತಮವೆಂದು ಘೋಷಿಸಿದರು. ಹಲವು ವರ್ಷಗಳ ನಂತರ 1949ರಲ್ಲಿ ಬೆಂಗಳೂರಿನಲ್ಲಿ ಕೇಂದ್ರೀಯ ರೇಷ್ಮೆ ಮಂಡಳಿಯೂ
ಸ್ಥಾಪನೆಯಾಯಿತು.

ಆ ನಂತರವೂ ನಿರಂತರವಾಗಿ ಜಪಾನಿನ ವಿಜ್ಞಾನಿಗಳ ನೆರವಿನಿಂದ ನಮ್ಮಲ್ಲಿನ ರೇಷ್ಮೆಯ ಇಳುವರಿ ಹಾಗೂ ಗುಣಮಟ್ಟ ಸುಧಾರಣೆಯಾಯಿತು. ಶಿಡ್ಲಘಟ್ಟ ತಾಲ್ಲೂಕಿನ ಹವಾಮಾನ ಇದಕ್ಕೆ ಸೂಕ್ತವಾಗಿದ್ದರಿಂದ ಇಲ್ಲಿ ಹಿಪ್ಪುನೇರಳೆ ಬೇಸಾಯದಿಂದ ಪ್ರಾರಂಭಗೊಂಡು ರೇಷ್ಮೆ ಗೂಡಿನಿಂದ ರೇಷ್ಮೆಯನ್ನು ಉತ್ಪಾದಿಸುವವರೆಗಿನ ಉದ್ಯಮ ಬೆಳವಣಿಗೆಯನ್ನು ಸಾಧಿಸಿತು ಎಂದು ವಿವರಿಸಿದರು ಬಿ.ವಿ.ಮುನೇಗೌಡ.

ಹಿರೋಶಿಮಾ ನಾಗಸಾಕಿಗಳ ಮೇಲೆ ಅಣುಬಾಂಬ್ ದಾಳಿಯ 25 ವರ್ಷಗಳ ನಂತರ 1970 ರಲ್ಲಿ ‘ಎಕ್ಸ್ ಪೋ 70’ ಎಂಬ ಬೃಹತ್ ಪ್ರದರ್ಶನ ಏರ್ಪಡಿಸಿ, ಇಡೀ ವಿಶ್ವವನ್ನೇ ತನ್ನ ದೇಶಕ್ಕೆ ಆಹ್ವಾನಿಸಿ, ತನ್ನ ಅಗಾಧ ಪ್ರಗತಿಯನ್ನು, ತಾಂತ್ರಿಕ ಬೆಳವಣಿಗೆಯನ್ನು ಸಾರಿತು.

ಈ ಪ್ರದರ್ಶನಕ್ಕೆ ಅಂದಿನ ಶಿಡ್ಲಘಟ್ಟದ ಶಾಸಕ ಭಕ್ತರಹಳ್ಳಿ ವೆಂಕಟರಾಯಪ್ಪ ಅವರ ಪುತ್ರ ಬಿ.ವಿ.ಮುನೇಗೌಡ ಸರ್ಕಾರದ ಪ್ರತಿನಿಧಿಯಾಗಿ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.