ADVERTISEMENT

ಕುಷ್ಠರೋಗಿಗೆ ದೊರೆಯದ ಬಿಪಿಎಲ್‌ ಕಾರ್ಡ್‌

ಸಭೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 8:28 IST
Last Updated 3 ಸೆಪ್ಟೆಂಬರ್ 2020, 8:28 IST
ಬಾಗೇಪಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು
ಬಾಗೇಪಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು   

ಬಾಗೇಪಲ್ಲಿ: ‘ಸರ್ಕಾರಿ ನೌಕರರಿಗೆ, ಸಿಬ್ಬಂದಿಗೆ, ಐಶಾರಾಮಿ ಕಾರುಗಳು ಇರುವವರಿಗೆ ಆಹಾರ ಇಲಾಖೆಯಿಂದ ಬಿಪಿಎಲ್ ಕಾರ್ಡ್‌ಗಳನ್ನು ನೀಡಲಾಗಿದೆ. ಆದರೆ, ತಾಲ್ಲೂಕಿನ ದುಗ್ಗಿನಾಯಕನಪಲ್ಲಿ ಗ್ರಾಮದ ನಾರಾಯಣಪ್ಪ ಎಂಬುವವರು ಕುಷ್ಠ ರೋಗಿಯಾಗಿದ್ದು, ಅನೇಕ ಬಾರಿ ಕಚೇರಿ, ಪಂಚಾಯಿತಿಗೆ ಸುತ್ತಾಡಿದರೂ, ಬಿಪಿಎಲ್ ಕಾರ್ಡ್‌ ನೀಡದಿರುವುದು ಸರಿಯಲ್ಲ’ ಎಂದುಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ತಹಶೀಲ್ದಾರ್, ಆಹಾರ ಇಲಾಖೆಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲ್ಲೂಕುಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದರು.

‘ದುಗ್ಗಿನಾಯಕನಪಲ್ಲಿ ಗ್ರಾಮದ ನಾರಾಯಣಪ್ಪನಿಗೆ ಕೈಬೆರಳುಗಳಿಲ್ಲ, ಕುಷ್ಠರೋಗದಿಂದ ಬದುಕು ಸಾಗಿಸುವುದೇ ದುಸ್ತರವಾಗಿದೆ. ಅಂತಹ ಬಡವರಿಗೆ ಪಡಿತರ ಚೀಟಿ ನೀಡಲಿಲ್ಲ ಎಂದರೆ, ಇನ್ನು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದ್ದೀರಿ’ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ADVERTISEMENT

ತಹಶೀಲ್ದಾರ್ ಎಂ.ನಾಗರಾಜು, ಆಹಾರ ಶಿರಸ್ತೇದಾರ್‌ಗೆ ಕುಷ್ಠರೋಗಿಯನ್ನು ಸಭೆಗೆ ಕರೆಸಿ ತೋರಿಸಿದರು. ‘ಬೆರಳಗಳು ಇಲ್ಲದೇ ಪಡಿತರ ಚೀಟಿಗಳು ನೀಡಲು ಆಗುವುದಿಲ್ಲ’ ಎಂದು ಆಹಾರ ಶಿರಸ್ತೇದಾರ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ತಿಳಿಸಿದರು.

ಆಗ ಶಾಸಕ ಪ್ರತಿಕ್ರಿಯಿಸಿ ‘ಇಂತಹವರಿಗೆ ಕಣ್ಣುಗಳನ್ನು ಸ್ಕ್ಯಾನ್ ಮಾಡಿಸಬೇಕು. ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋಗಿ ಸ್ಯ್ಕಾನ್ ಮಾಡಿಸಬೇಕು. ಕೂಡಲೇ ಅವರಿಗೆ ಪಡಿತರ ಚೀಟಿ ವಿತರಿಸಿ’ ಎಂದು ಸೂಚಿಸಿದರು.

‘ತಾಲ್ಲೂಕಿನಲ್ಲಿ ಸರ್ಕಾರಿ ಜಾಗಗಳು, ರಸ್ತೆಗಳನ್ನು ಅತಿಕ್ರಮಿಸಿಕೊಂಡು ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಕೂಡಲೇ ಇಂತಹ ಕಟ್ಟಡಗಳನ್ನು ಜೆಸಿಬಿ ಬಳಸಿ ಕೆಡವಬೇಕು. ಎಷ್ಟೇ ಪ್ರಭಾವಿ ವ್ಯಕ್ತಿಗಳಾದರೂ, ಅಧಿಕಾರಿಗಳು ಸರ್ಕಾರಿ ಆಸ್ತಿ-ಪಾಸ್ತಿಗಳನ್ನು ರಕ್ಷಿಸಬೇಕು. ಪರಗೋಡು, ಘಂಟಂವಾರಿಪಲ್ಲಿ, ನಲ್ಲಪರೆಡ್ಡಿಪಲ್ಲಿ, ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬಡಾವಣೆಗಳನ್ನು ನಿರ್ಮಿಸಿದ್ದಾರೆ. ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಮೀಸಲಿಟ್ಟಿರುವ ನಿವೇಶನಗಳ, ಉದ್ಯಾನಗಳ ಬಗ್ಗೆ ಮಾಹಿತಿ ನೀಡಬೇಕು’ ಎಂದು ಶಾಸಕರು ಇಒ ಮಂಜುನಾಥಸ್ವಾಮಿ ಅವರಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹಪ್ಪ, ತಹಶೀಲ್ದಾರ್ ಎಂ.ನಾಗರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಎನ್.ಮಂಜುನಾಥಸ್ವಾಮಿ, ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಉಪಾಧ್ಯಕ್ಷೆ ಸರಸ್ವತಮ್ಮ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ್, ಲೋಕೋಪಯೋಗಿ ಇಲಾಖೆ ಎಇಇ ರಾಮಲಿಂಗಾರೆಡ್ಡಿ, ತಾಲ್ಲೂಕು ವೈಧ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.