ADVERTISEMENT

ನಂದಿಯಲ್ಲಿ ಸಚಿವ ಸಂಪುಟ: ಬಯಲು ಸೀಮೆ ಜಿಲ್ಲೆಗಳ ಜನರಲ್ಲಿ ಹೆಚ್ಚಿದ ನಿರೀಕ್ಷೆ

ನಂದಿಗಿರಿಧಾಮದಲ್ಲಿ ಸಚಿವ ಸಂಪುಟ ಸಭೆಗೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 4:00 IST
Last Updated 2 ಜುಲೈ 2025, 4:00 IST
<div class="paragraphs"><p>ನಂದಿಗಿರಿಧಾಮದ ಮಯೂರ ಹೋಟೆಲ್ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ ನಡೆಯುವ ಸ್ಥಳ</p></div>

ನಂದಿಗಿರಿಧಾಮದ ಮಯೂರ ಹೋಟೆಲ್ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ ನಡೆಯುವ ಸ್ಥಳ

   

ಚಿಕ್ಕಬಳ್ಳಾಪುರ: ಐತಿಹಾಸಿಕ ನಂದಿಗಿರಿಧಾಮದಲ್ಲಿ ಬುಧವಾರ ನಡೆಯುವ ಸಚಿವ ಸಂಪುಟ ಸಭೆಯು ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನರಲ್ಲಿ‌ ಅಭಿವೃದ್ಧಿ ವಿಚಾರವಾಗಿ ಭಾರಿ ನಿರೀಕ್ಷೆಗಳನ್ನು ಮೂಡಿಸಿದೆ.

ಗಿರಿಧಾಮದ ಮಯೂರ ಸಭಾಂಗಣದಲ್ಲಿ ಬುಧವಾರ ಮಧ್ಯಾಹ್ನ 12ಕ್ಕೆ ಸಚಿವ ಸಂಪುಟ ಸಭೆ ನಡೆಯಲಿದೆ.

ADVERTISEMENT

ಈ ಹಿಂದೆ ಜೂ.19 ರಂದು ಸಭೆ ನಿಗದಿಯಾಗಿತ್ತು. ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಈ ಭಾಗದ ಶಾಸಕರು ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಮುಖ ಪ್ರಸ್ತಾವಗಳು ಕಾರ್ಯಸೂಚಿ ಪಟ್ಟಿಯಲ್ಲಿ ಇಲ್ಲದ ಕಾರಣ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಂದು ನಿಗದಿಯಾಗಿದ್ದ ಸಭೆಯಲ್ಲಿ ಕೊನೆಯ ಕ್ಷಣದಲ್ಲಿ ವಿಧಾನಸೌಧಕ್ಕೆ ಸ್ಥಳಾಂತರಿಸಲಾಗಿತ್ತು.

ಸಚಿವ ಸಂಪುಟ ಸಭೆಗೆ ಹಿನ್ನೆಲೆಯಲ್ಲಿ ಮೂರೂ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟ ಸಮಿತಿ, ರೈತ ಸಂಘಟನೆಗಳು, ಪರಿಸರವಾದಿಗಳಲ್ಲಿ ಹಲವು ನಿರೀಕ್ಷೆಗಳು ಗರಿಗೆದರಿವೆ.

ಎತ್ತಿನಹೊಳೆ ಬಗ್ಗೆ ಹೆಚ್ಚು ನಿರೀಕ್ಷೆ: ವಿಶೇಷವಾಗಿ ಎತ್ತಿನಹೊಳೆ ನೀರಾವರಿ ಯೋಜನೆಯ ಬಗ್ಗೆ ಈ ಮೂರು ಜಿಲ್ಲೆಗಳ ಜನರು ಭಾರಿ ನಿರೀಕ್ಷೆಗಳನ್ನು ಹೊಂದಿದ್ದಾರೆ. 

2014ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೇ ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆಗೆ ಅಡಿಗಲ್ಲು ಹಾಕಿದ್ದರು. 11 ವರ್ಷ ಪೂರ್ಣವಾದರೂ ಬಯಲು ಸೀಮೆ ಜಿಲ್ಲೆಗಳಿಗೆ ಬೊಗಸೆ ನೀರು ಯೋಜನೆಯಿಂದ ಹರಿದಿಲ್ಲ. ಎತ್ತಿನಹೊಳೆ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಪ್ರಮುಖವಾಗಿ ದೃಷ್ಟಿಯಲ್ಲಿ ಇಟ್ಟುಕೊಂಡು ರೂಪಿಸಿದ ಯೋಜನೆ. ಮೊದಲು ಈ ಮೂರು ಜಿಲ್ಲೆಗಳಿಗೆ ನೀರು ಹರಿಸಿದ ನಂತರವೇ ಯೋಜನೆ  ವ್ಯಾಪ್ತಿಯ ಇತರೆ ಜಿಲ್ಲೆಗಳಿಗೆ ನೀರು ಹರಿಸಬೇಕು ಎಂದು ಈ ಭಾಗದ ಜನಪ್ರತಿನಿಧಿಗಳು ಮತ್ತು ಹೋರಾಟಗಾರರ ಆಗ್ರಹವೂ ಆಗಿದೆ.  

ಎಚ್‌.ಎನ್.ವ್ಯಾಲಿ ಮತ್ತು ಕೆ.ಸಿ ವ್ಯಾಲಿ ಯೋಜನೆಯಡಿ ಎರಡು ಹಂತದಲ್ಲಿ ಸಂಸ್ಕರಿಸಿದ ಬೆಂಗಳೂರಿನ ಕೊಳಚೆ ನೀರನ್ನು ಈ ಮೂರು ಜಿಲ್ಲೆಗಳ ಆಯ್ದ ಕೆರೆಗಳಿಗೆ ಹರಿಸಲಾಗುತ್ತಿದೆ. ಈ ನೀರನ್ನು ಮೂರು ಹಂತದಲ್ಲಿ ಸಂಸ್ಕರಿಸಿ ಹರಿಸಬೇಕು ಎಂದು ಹೋರಾಟಗಳು ಸಹ ನಡೆದಿವೆ. ಆದರೆ ಸರ್ಕಾರ ಮಾತ್ರ ಎರಡು ಹಂತದಲ್ಲಿಯೇ ಸಂಸ್ಕರಣೆ ಸಾಧ್ಯ. ಮೂರು ಹಂತದ ಸಂಸ್ಕರಣೆ ವೆಚ್ಚದಾಯ ಎಂದೇ ‍ಪ್ರತಿಪಾದಿಸುತ್ತಿದೆ. 

ಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಣಯಕೈಗೊಳ್ಳಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಮನವಿ ಸಹ ಸಲ್ಲಿಸಿದೆ. 

ಈ ಎಲ್ಲ ದೃಷ್ಟಿಯಿಂದ ನಂದಿ ಗಿರಿಧಾಮದ ಸಚಿವ ಸಂಪುಟ ಸಭೆಯತ್ತ ಮೂರು ಜಿಲ್ಲೆಗೆ ಮಹತ್ವದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.