ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿಗಿರಿಧಾಮದಲ್ಲಿ ಜೂನ್ 19ರಂದು ನಿಗದಿಯಾಗಿರುವ ಸಚಿವ ಸಂಪುಟ ಸಭೆಯ ಮೇಲೆ ಅನಿಶ್ಚಿತತೆಯ ತೂಗುಗತ್ತಿ ನೇತಾಡುತ್ತಿದೆ.
ಸಂಪುಟ ಸಭೆಯನ್ನು ಮುಂದೂಡಲಾಗುತ್ತದೆಯೊ ಅಥವಾ ನಿಗದಿಯಂತೆ 19ರಂದೇ ನಡೆಯಲಿದೆಯೇ ಎನ್ನುವ ನಿರ್ಧಾರ ಮಂಗಳವಾರ ಮಧ್ಯಾಹ್ನದ ವೇಳೆಗೆ ಖಚಿತವಾಗಲಿದೆ. ದಾವಣಗೆರೆಯಿಂದ ಹಿಂದಿರುಗಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳು ಮಂಗಳವಾರ ಭೇಟಿಯಾಗಿ ಸಾಧಕ, ಬಾಧಕ ಕುರಿತು ಚರ್ಚಿಸಿದ ನಂತರ ಅಂತಿಮ ನಿರ್ಧಾರ ಹೊರಬೀಳಲಿದೆ ಎನ್ನುತ್ತವೆ ಮೂಲಗಳು.
ಮತ್ತೊಂದೆಡೆ ಜಿಲ್ಲಾಡಳಿತ ಭರದ ಸಿದ್ದತೆಯಲ್ಲಿ ತೊಡಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಗಿರಿಧಾಮಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ್ದಾರೆ.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಈಗಾಗಲೇ ಸರಣಿ ಸಭೆ ನಡೆಸಿದ್ದಾರೆ. ಲೋಕೋಪಯೋಗಿ ಇಲಾಖೆಯು ಗಿರಿಧಾಮದ ರಸ್ತೆ ಗುಂಡಿ ಮುಚ್ಚಿದೆ. ಸಚಿವರು ತಂಗುವ ವಸತಿ ನಿಲಯ, ಕಟ್ಟಡಗಳಿಗೆ ಕಟ್ಟಡಗಳಿಗೆ ಸುಣ್ಣ, ಬಣ್ಣ ಬಳಿಯಲಾಗಿದೆ. ಒಬ್ಬರ ನಂತರ ಒಬ್ಬರು ಗಿರಿಧಾಮಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸುತ್ತಿದ್ದಾರೆ.
ಚಾಮರಾಜ ನಗರ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ಏಪ್ರಿಲ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಹಲವು ಕೊಡುಗೆ ಘೋಷಿಸಲಾಯಿತು. ಹಿಂದುಳಿದ ಮತ್ತು ಗಡಿ ಜಿಲ್ಲೆ ಚಾಮರಾಜ ನಗರ ಅಭಿವೃದ್ಧಿಗೆ ಆದ್ಯತೆ ನೀಡಲಾಯಿತು.
ನಂದಿ ಗಿರಿಧಾಮದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಶೇಷ ಕೊಡುಗೆ, ಅನುದಾನ ನೀಡಬೇಕು ಎನ್ನುವುದು ಎರಡೂ ಜಿಲ್ಲೆಗಳ ಕಾಂಗ್ರೆಸ್ ಶಾಸಕರ ಒತ್ತಾಯ. ಆದರೆ ಈ ವಿಚಾರವಾಗಿ ಮುಖ್ಯಮಂತ್ರಿ ಯಾವುದೇ ಖಚಿತ ಭರವಸೆ ನೀಡಿಲ್ಲ.
ಅನುದಾನ ಘೋಷಣೆ ಮಾಡದಿದ್ದರೆ ಸಚಿವ ಸಂಪುಟ ಸಭೆಯನ್ನು ಜಿಲ್ಲೆಯಲ್ಲಿ ಮಾಡಿ ಏನು ಪ್ರಯೋಜನ? ಜನರ ನಿರೀಕ್ಷೆ ಹುಸಿಯಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಮತ್ತು ಪಕ್ಷದ ಶಾಸಕರಿಗೆ ಹಿನ್ನಡೆಯಾಗುತ್ತದೆ. ವಿರೋಧ ಪಕ್ಷಗಳು ಇದನ್ನೇ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸುತ್ತಾರೆ. ಹಾಗಾಗಿ ಅವಳಿ ಜಿಲ್ಲೆಗಳಿಗೆ ವಿಶೇಷ ಅನುದಾನ ಘೋಷಿಸದಿದ್ದರೆ, ಸಂಪುಟ ಸಭೆಯನ್ನು ಮುಂದೂಡುವುದು ಒಳಿತು ಎಂಬ ಭಿಪ್ರಾಯವನ್ನು ಉಭಯ ಜಿಲ್ಲೆಗಳ ಕಾಂಗ್ರೆಸ್ ಶಾಸಕರು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಅನುದಾನ ಘೋಷಣೆ ಸೇರಿದಂತೆ ಮಹತ್ವದ ಯೋಜನೆಗಳ ಕಾರ್ಯಗತದ ಬಗ್ಗೆ ಚರ್ಚಿಸಿದ ನಂತರವೇ ಸಚಿವ ಸಂಪುಟ ಸಭೆ ನಡೆಸಿ ಎಂದು ಎರಡೂ ಜಿಲ್ಲೆಯ ಕಾಂಗ್ರೆಸ್ ಶಾಸಕರು ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆ ನಿಗದಿತ ದಿನದಂದು ನಡೆಯುತ್ತದೆಯೇ ಅಥವಾ ಇಲ್ಲವೇ ಎನ್ನುವ ಖಚಿತ ಮಾಹಿತಿ ಖುದ್ದು ಶಾಸಕರಿಗೂ ಇಲ್ಲ.
ಮಂಗಳವಾರ ಮಧ್ಯಾಹ್ನ ಮುಖ್ಯಮಂತ್ರಿ ಅವರನ್ನು ಅವಳಿ ಜಿಲ್ಲೆಗಳ ಕಾಂಗ್ರೆಸ್ ಶಾಸಕರು ಭೇಟಿ ಮಾಡಲಿದ್ದಾರೆ. ‘ಅನುದಾನ ನೀಡುವುದಿದ್ದರೆ ಮಾತ್ರ ಸಚಿವ ಸಂಪುಟ ಸಭೆ ನಡೆಸಿ. ನಮ್ಮ ಜಿಲ್ಲೆಗಳ ಜನರು ಸಭೆಯ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಅನುದಾನ ದೊರೆಯುತ್ತದೆ ಎನ್ನುವ ಆಶಾಭಾವನೆ ಇದೆ’ ಎಂಬ ಅಂಶವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಿದ್ದಾರೆ.
‘ಸಭೆ ನಡೆದು ಯಾವುದೇ ಅನುದಾನ ಘೋಷಣೆ ಆಗದಿದ್ದರೆ ನಮಗೆ ಹಿನ್ನಡೆ ಆಗುತ್ತದೆ. ಒಂದು ವೇಳೆ ಅನುದಾನ ಘೋಷಣೆ ಸಾಧ್ಯವಾಗದಿದ್ದರೆ ಸಚಿವ ಸಂಪುಟ ಸಭೆ ಮುಂದೂಡಿ. ಮುಂದಿನ ದಿನಗಳಲ್ಲಿ ಅನುದಾನ ಘೋಷಣೆಯ ಬಗ್ಗೆ ತೀರ್ಮಾನ ಕೈಗೊಂಡ ನಂತರವೇ ಸಭೆ ನಡೆಸಿ ಎಂದು ಶಾಸಕರು ಮುಖ್ಯಮಂತ್ರಿಗೆ ಅರಿಕೆ ಮಾಡಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಈ ಕಾರಣದಿಂದಲೇ ಸಚಿವ ಸಂಪುಟ ಸಭೆ ನಡೆಯುವ ಬಗ್ಗೆ ಅನಿಶ್ಚಿತತೆ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.