ADVERTISEMENT

ಚಿಕ್ಕಬಳ್ಳಾಪುರ: ಕಾಲುವೆ ಕಾಮಗಾರಿಗೆ ಬಲಿಯಾದ ರಸ್ತೆ

ಜಿಲ್ಲಾ ಕ್ರೀಡಾಂಗಣ ರಸ್ತೆಯ ಸಮನಾಂತರ ರಸ್ತೆಯಲ್ಲಿ ಕಾಲುವೆ ಸೇರದೆ ರಸ್ತೆಯಲ್ಲಿ ಮಡುಗಟ್ಟಿ ನಿಲ್ಲುವ ನೀರು

ಈರಪ್ಪ ಹಳಕಟ್ಟಿ
Published 17 ಸೆಪ್ಟೆಂಬರ್ 2020, 19:30 IST
Last Updated 17 ಸೆಪ್ಟೆಂಬರ್ 2020, 19:30 IST
ಮಳೆ ಸುರಿದರೆ ರಸ್ತೆಯಲ್ಲಿ ಮಡುಗಟ್ಟಿ ನಿಲ್ಲುವ ನೀರು
ಮಳೆ ಸುರಿದರೆ ರಸ್ತೆಯಲ್ಲಿ ಮಡುಗಟ್ಟಿ ನಿಲ್ಲುವ ನೀರು   

ಚಿಕ್ಕಬಳ್ಳಾಪುರ: ನಗರದ ಕೆಳಗಿನ ತೋಟ ಪ್ರದೇಶದ 22ನೇ ವಾರ್ಡ್‌ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆ ಅಡಿ ಕೈಗೊಂಡ ರಾಜಕಾಲುವೆ ಕಾಮಗಾರಿ ಮುಖ್ಯರಸ್ತೆಯೊಂದಕ್ಕೆ ಸಂಚಕಾರ ತಂದಿಟ್ಟಿದ್ದು, ರಸ್ತೆ ದಿನೇ ದಿನೇ ಹಾಳಾಗುತ್ತ ನಾಗರಿಕರ ನೆಮ್ಮದಿ ಕಳೆಯುತ್ತಿದೆ.

ಕೆಳಗಿನತೋಟ ಪ್ರದೇಶದ ಎಚ್‌.ಎಸ್‌.ಗಾರ್ಡನ್‌ನಲ್ಲಿ ಜಿಲ್ಲಾ ಕ್ರೀಡಾಂಗಣದ ಹಿಂಭಾಗದ ರಸ್ತೆಯ ಪಕ್ಕದ ರಸ್ತೆಯಲ್ಲಿ (ಈ ಹಿಂದೆ ಎಲ್‌ಐಸಿ ಕಚೇರಿ ಬಳಿ ಬಿ.ಬಿ.ರಸ್ತೆಗೆ ಸಂಪರ್ಕಿಸುತ್ತಿದ್ದ ರಸ್ತೆ) ಕಳೆದ ಎರಡು ವರ್ಷಗಳ ಹಿಂದೆ ಕೈಗೆತ್ತಿಕೊಂಡ ರಾಜಕಾಲುವೆ ನಿರ್ಮಾಣ ಕಾಮಗಾರಿಯಲ್ಲಿ ಸರಿಯಾಗಿ ಚರಂಡಿ ವ್ಯವಸ್ಥೆ ವ್ಯವಸ್ಥೆ ಕಲ್ಪಿಸದಿರುವುದು ರಸ್ತೆಗೆ ಹಾಳು ಮಾಡುತ್ತಿದೆ.

ಹೊಸದಾಗಿ ನಿರ್ಮಿಸಿದ ಕಾಲುವೆ ರಸ್ತೆಗಿಂತ ಒಂದು ಅಡಿ ಎತ್ತರವಾಗಿದೆ. ಮೇಲ್ಭಾಗದಿಂದ ಹರಿದು ಬರುವ ನೀರು ಹೊಸ ಕಾಲುವೆಗೆ ಸೇರಿ ಹರಿಯುವಂತೆ ಈವರೆಗೆ ವ್ಯವಸ್ಥೆ ಮಾಡಿಲ್ಲ. ಪರಿಣಾಮ ಜೋರಾಗಿ ಮಳೆ ಸುರಿದರೆ ರಸ್ತೆಯಲ್ಲಿ ನೀರು ಮಡುಗಟ್ಟಿ ನಿಲ್ಲುತ್ತದೆ. ಪರಿಣಾಮ, ಅಲ್ಲಲ್ಲಿ ಗುಂಡಿಗಳು ಕಾಣಿಸಿಕೊಂಡು ಅವು ದಿನೇ ದಿನೇ ದೊಡ್ಡದಾಗುತ್ತವೆ. ಚೆನ್ನಾಗಿದ್ದ ರಸ್ತೆಯನ್ನು ಅಧ್ವಾನಗೊಳಿಸುತ್ತಿವೆ.

ADVERTISEMENT

ಕಾಲುವೆ ನಿರ್ಮಾಣಕ್ಕೆ ಅಗೆದ ಜಾಗ ಭರ್ತಿ ಮಾಡಲು ಸುರಿದ ಮಣ್ಣು ಮಳೆ ಸುರಿದಾಗಲೆಲ್ಲ ರಸ್ತೆಯುದ್ದಕ್ಕೂ ಹರಿದು ಕೆಸರು ಗದ್ದೆಯ ನೆನಪು ತರುತ್ತದೆ. ಆಗೆಲ್ಲ ಈ ರಸ್ತೆಯಲ್ಲಿ ವಯಸ್ಸಾದವರು, ವಿದ್ಯಾರ್ಥಿಗಳು, ಚಿಕ್ಕ ಮಕ್ಕಳು ನಡೆದಾಡಲು ಹರಸಾಹಸ ಪಡುತ್ತಾರೆ.

ಆರಂಭದಲ್ಲಿ ಒತ್ತುವರಿ ವ್ಯಾಜ್ಯದ ಕಾರಣಕ್ಕೆ ಸ್ಥಗಿತಗೊಂಡ ಕಾಮಗಾರಿ, ಸ್ಥಳೀಯ ಅನೇಕ ಮನೆಗಳ ಜನರಿಗೆ ‘ದಿಗ್ಬಂಧನ’ ಹಾಕಿತ್ತು. ಅರೆಬರೆಗೊಂಡ ಕಾಲುವೆ ದಾಟಲು ಹೋಗಿ ವಯೋವೃದ್ಧರು, ಮಕ್ಕಳು ಬಿದ್ದು ಪೆಟ್ಟು ತಿಂದು ನೋವಿನಲ್ಲಿ ನರಳಿದ್ದರು. ಇದೀಗ ಕಾಮಗಾರಿ ಮುಗಿದರೂ ಹದಗೆಡುತ್ತಿರುವ ರಸ್ತೆಯಿಂದಾಗಿ ಜನರ ಪರದಾಟ ತಪ್ಪದಂತಾಗಿದೆ.

ಉತ್ತಮವಾಗಿ ರಾಜಕಾಲುವೆ ನಿರ್ಮಿಸಿದರು ಎಂದು ಸ್ಥಳೀಯರು ನಿಟ್ಟುಸಿರು ಬಿಡುವ ಮುನ್ನವೇ ರಾಜಕಾಲುವೆಯಲ್ಲಿ ಅಳವಡಿಸಿದ ಚರಂಡಿ ಮಾರ್ಗಗಳು ತೆರೆದುಕೊಳ್ಳದೆ ಸಮಸ್ಯೆ ಸೃಷ್ಟಿ ಆಗುತ್ತಿದೆ. ಮಳೆಗಾಲ ಆರಂಭಗೊಂಡ ಬಳಿಕ ಈ ರಸ್ತೆಯಲ್ಲಿ ಜನರು ಆಗಾಗ ತೊಂದರೆ ಎದುರಿಸುತ್ತ, ಹಿಡಿಶಾಪ ಹಾಕುತ್ತ ಸಾಗುವ ದೃಶ್ಯಗಳು ಸಾಮಾನ್ಯವಾಗಿವೆ. ಧೋ ಎಂದು ಮಳೆ ಸುರಿದಾಗ ಈ ರಸ್ತೆಯಲ್ಲಿ ಒಬ್ಬಿಬ್ಬರಾದರೂ ಬಿದ್ದು ಪೆಟ್ಟು ಮಾಡಿಕೊಳ್ಳುವುದು ಸಾಮಾನ್ಯ ಸಂಗತಿ ಎನ್ನುತ್ತಾರೆ ಸ್ಥಳೀಯರು.

**
ಸಮಸ್ಯೆ ಹೇಳಿಕೊಂಡು ಸಾಕಾಯಿತು
ಮೇಲ್ಭಾಗದ ಪ್ರದೇಶದಿಂದ ಮಳೆಗಾಲದಲ್ಲಿ ಹರಿದು ಬರುವ ನೀರು ಹೊಸ ರಾಜಕಾಲುವೆಗೆ ಸೇರಲು ಸಮಪರ್ಕವಾದ ವ್ಯವಸ್ಥೆ ಮಾಡಿಲ್ಲ. ಹೀಗಾಗಿ, ನೀರೆಲ್ಲ ರಸ್ತೆಯಲ್ಲಿ ನಿಂತು ರಸ್ತೆ ಹಾಳಾಗುತ್ತಿದೆ. ಬೀದಿದೀಪಗಳು ಕೂಡ ಉರಿಯುವುದಿಲ್ಲ. ಮಳೆ ಸುರಿದಾಗ ರಾತ್ರಿ ಈ ರಸ್ತೆಯಲ್ಲಿ ಸಂಚರಿಸಲು ಜನ ಭಯಬೀಳುವಂತಾಗಿದೆ. ಸವಾರರು ಕೂಡ ಆತಂಕದಲ್ಲಿಯೇ ಸಾಗುತ್ತಾರೆ. ರಸ್ತೆಯಲ್ಲಿ ಬಿದ್ದ ಎರಡ್ಮೂರು ಜನ ವಯಸ್ಸಾದವರನ್ನು ನಾನೇ ಎತ್ತಿ ಮನೆಗೆ ಕಳುಹಿಸಿರುವೆ. ಅನೇಕ ಬಾರಿ ಸಂಬಂಧಪಟ್ಟ ಎಂಜಿನಿಯರ್‌ಗಳ ಗಮನಕ್ಕೆ ಸಮಸ್ಯೆ ತಂದರೂ ಪ್ರಯೋಜನವಾಗಿಲ್ಲ.
-ಸ್ವಾಮಿನಾಥ್, ಸ್ಥಳೀಯ ನಿವಾಸಿ

**
ಮಳೆ ಸುರಿದರೆ ಅಧ್ವಾನ
ಮಳೆ ಸುರಿದರೆ ಅಧ್ವಾನಗೊಳ್ಳುವ ರಸ್ತೆ ನೋಡಿ ಹೊರಗೆ ಹೆಜ್ಜೆ ಇಡಲು ಭಯವಾಗುತ್ತದೆ. ರಸ್ತೆ ಮೇಲೆ ನಿಲ್ಲುವ ಮಳೆ ನೀರು ಹೊಸ ಕಾಲುವೆಗೆ ಹರಿಯುವಂತೆ ವ್ಯವಸ್ಥೆ ಮಾಡಿದರೆ ಸಾಕಷ್ಟು ಸಮಸ್ಯೆಗಳು ಪರಿಹಾರ ಆಗುತ್ತವೆ. ಕಾಮಗಾರಿಗಳು ಮುಗಿದು ವರ್ಷ ಕಳೆದರೂ ಯಾರೊಬ್ಬರೂ ಈ ಸಮಸ್ಯೆ ಗಂಭೀರವಾಗಿ ಪರಿಗಣಿಸುತ್ತಿಲ್ಲ.
-ಗೌರಮ್ಮ, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.