
ಚಿಂತಾಮಣಿ: ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಜಾನುವಾರುಗಳನ್ನು ರಕ್ಷಣೆ ಮಾಡಿ ಗೋಶಾಲೆಗೆ ಕಳುಹಿಸಿದ ಘಟನೆಗಳು ಇತ್ತೀಚೆಗೆ ನಡೆದಿರುವ ಕಾರಣ ಶನಿವಾರ ಸಂತೆಯಲ್ಲಿ ರೈತರಿಂದ ವ್ಯಾಪಾರಸ್ಥರು ಜಾನುವಾರು ಖರೀದಿ ಮಾಡಲಿಲ್ಲ. ರೈತರು ಗೋ ರಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಾಪಸ್ ಹೋದರು.
ಎಪಿಎಂಸಿ ಮಾರುಕಟ್ಟೆಯ ಗಾಂಧಿನಗರದ ಬಳಿ ಪ್ರತಿ ಶನಿವಾರ ಗೋವುಗಳ ಸಂತೆ ನಡೆಯುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜಾನುವಾರುಗಳನ್ನು ಮಾರಾಟ ಮಾಡಲು ಬಂದಿದ್ದರು. ವ್ಯಾಪಾರಸ್ಥರು ಗೋವುಗಳನ್ನು ಸಾಗಿಸುವಾಗ ಗೋರಕ್ಷಕರು ಅಡ್ಡಿಪಡಿಸುವ ಭಯದಿಂದ ಖರೀದಿ ಮಾಡಲು ಮುಂದೆ ಬರುತ್ತಿಲ್ಲ.
ರೈತರು ನಮ್ಮ ಕಷ್ಟಕಾಲಕ್ಕೆ ಜಾನುವಾರುಗಳನ್ನು ಮಾರಾಟ ಮಾಡಲು ಬಂದರೂ ವ್ಯಾಪಾರಸ್ಥರು ಖರೀದಿ ಮಾಡಲು ಮುಂದಾಗುತ್ತಿಲ್ಲ. ಸಾವಿರಾರು ರೂಪಾಯಿ ಖರ್ಚು ಮಾಡಿ ಜಾನುವಾರುಗಳನ್ನು ಬಾಡಿಗೆ ವಾಹನದಲ್ಲಿ ತಂದು ಮಾರಾಟ ಮಾಡಲು ಬಂದಿದ್ದೇವೆ. ಮಾರುಕಟ್ಟೆಯಲ್ಲಿ ಖರೀದಿ ಮಾಡಲು ಯಾರು ಬರುತ್ತಿಲ್ಲ ಎಂದು ರೈತರು ಅವಲತ್ತುಕೊಂಡರು.
ಮತ್ತೆ ವಾಹನಗಳಿಗೆ ಬಾಡಿಗೆ ನೀಡಿ ವಾಪಸ್ ತೆಗೆದುಕೊಂಡು ಹೋಗಬೇಕಾಗಿದೆ. ಕೆಲವು ಸಂಕಷ್ಟದ ಸಂದರ್ಭಗಳಲ್ಲಿ ಜಾನುವಾರುಗಳನ್ನು ಮಾರಾಟ ಮಾಡಬೇಕಾಗುತ್ತದೆ. ಗೋರಕ್ಷಕರೇ ನಮ್ಮ ಗೋವುಗಳನ್ನು ಖರೀದಿ ಮಾಡಿ ನಮಗೆ ಪರಿಹಾರ ಒದಗಿಸಿ ಕೊಡಬೇಕು. ಇಲ್ಲದಿದ್ದರೆ ರೈತರು ಬೀದಿ ಪಾಲಾಗುತ್ತಾರೆ. ಮುಂದಿನ ದಿನಗಳಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.