ADVERTISEMENT

ಎಪಿಎಂಸಿಗೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

28.31 ಎಕರೆ ವಿಸ್ತೀರ್ಣದ ಚಿಕ್ಕಬಳ್ಳಾಪುರ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 6:05 IST
Last Updated 21 ಸೆಪ್ಟೆಂಬರ್ 2022, 6:05 IST
ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಎಪಿಎಂಸಿಗೆ ಭೇಟಿ ನೀಡಿ ಸೌಲಭ್ಯಗಳ ಕುರಿತು ಪರಿಶೀಲಿಸಿದ ಸಂದರ್ಭ
ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಎಪಿಎಂಸಿಗೆ ಭೇಟಿ ನೀಡಿ ಸೌಲಭ್ಯಗಳ ಕುರಿತು ಪರಿಶೀಲಿಸಿದ ಸಂದರ್ಭ   

ಚಿಕ್ಕಬಳ್ಳಾಪುರ: ಕೆಲವೇ ದಿನಗಳಲ್ಲಿ ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲಿಗೆ ಒಳಪ‍ಡಲಿದೆ.ಎಪಿಎಂಸಿ ಸಮಿತಿಯು ₹20 ಲಕ್ಷ ವೆಚ್ಚದಲ್ಲಿ ಮಾರುಕಟ್ಟೆ ಪ್ರಾಂಗಣದ ವಿವಿಧ ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಮುಂದಾಗಿದೆ.

ಜಿಲ್ಲಾ ಕೇಂದ್ರದಲ್ಲಿರುವ ಎಪಿಎಂಸಿಗೆ ನಿತ್ಯ ಸಾವಿರಾರು ರೈತರು, ವರ್ತಕರು, ಗ್ರಾಹಕರು ಭೇಟಿ ನೀಡುವರು. ಒಟ್ಟು28.31 ಎಕರೆ ವಿಸ್ತೀರ್ಣದ ಎಪಿಎಂಸಿಯಲ್ಲಿ ಇಲ್ಲಿಯವರೆಗೂ ಸಿಸಿಟಿವಿ ಕ್ಯಾಮೆರಾಗಳು ಇರಲಿಲ್ಲ. ಎಪಿಎಂಸಿಯಲ್ಲಿ ಎಪಿಎಂಸಿ ಕಾರ್ಯದರ್ಶಿ ಕಚೇರಿ, 240 ಮಳಿಗೆಗಳು, ರೈತ ಭವನ, ರೈತರ ವ್ಯಾಪಾರ ವಹಿವಾಟಿಗೆ ಪ್ಲಾಟ್‌ಫಾರ್ಮ್‌ಗಳು, ಆಲೂಗಡ್ಡೆ ವಹಿವಾಟಿನ ಸ್ಥಳ, ಕೋಚಿಮುಲ್ ಶಿಬಿರ ಕಚೇರಿ, ತೂಕ ಮತ್ತು ಅಳತೆ ಮಾಪನ ಇಲಾಖೆಯ ಕಚೇರಿ ಇದೆ.

ಎಪಿಎಂಸಿಯ ಮುಂಭಾಗದ ಚಿಕ್ಕಬಳ್ಳಾಪುರ–ಗೌರಿಬಿದನೂರು ರಸ್ತೆಯು ಜನ ಮತ್ತು ವಾಹನ ದಟ್ಟಣೆಯ ರಸ್ತೆಯೂ ಆಗಿದೆ.ಈ ಹಿಂದಿನಿಂದಲೂ ಹಣ್ಣು, ತರಕಾರಿ ಮತ್ತು ಹೂ ವಹಿವಾಟಿಗೆ ಚಿಕ್ಕಬಳ್ಳಾಪುರ ಎಪಿಎಂಸಿ ಪ್ರಸಿದ್ಧವಾಗಿದೆ. ಇಷ್ಟೆಲ್ಲಾ ಜನನಿಬಿಡ ಪ್ರದೇಶವಾಗಿರುವ ಎಪಿಎಂಸಿಯಲ್ಲಿ ಕಾರ್ಯದರ್ಶಿ ಕಚೇರಿ ಆವರಣದಲ್ಲಿ ಹೊರತುಪಡಿಸಿ ಉಳಿದ ಎಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳು ಇರಲಿಲ್ಲ.

ADVERTISEMENT

ಸಿಸಿಟಿವಿ ಕ್ಯಾಮೆರಾ ಅಳವಡಿಸುವುದರಿಂದ ಎಪಿಎಂಸಿಯ ಆವರಣದಲ್ಲಿ ನಡೆಯುವ ಚಟುವಟಿಕೆಗಳು ಸಮಿತಿಯ ನಿಗಾಕ್ಕೆ ಒಳಪಡಲಿದೆ. ರೈತರು, ವ್ಯಾಪಾರಿಗಳಿಗೂ ಅನುಕೂಲವಾಗಲಿದೆ. ಯಾವ ದಿಕ್ಕಿಗೆ ಮತ್ತು ಯಾವ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೆ ಅನುಕೂಲವಾಗಲಿದೆ ಎಂದು ಪರಿಣತರ ಸಲಹೆ ಪಡೆದು ನಂತರ ಕ್ಯಾಮೆರಾ ಇರಿಸಲಾಗುವುದು ಎಂದು ಎಪಿಎಂಸಿ ಮೂಲಗಳು ತಿಳಿಸುತ್ತವೆ.

₹1.93 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಕ್ರಿಯಾಯೋಜನೆ: ಸಿಸಿ ಟಿ.ವಿ ಕ್ಯಾಮೆರಾ ಜತೆಗೆ ₹1.93 ಕೋಟಿ ವೆಚ್ಚದಲ್ಲಿ ಎಪಿಎಂಸಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆಯನ್ನು ಸಹ ಸಿದ್ಧಗೊಳಿಸಲಾಗಿದೆ. ಈ ಕ್ರಿಯಾ ಯೋಜನೆಗೆ ಸಂಬಂಧಿಸಿದ ವಿವರಗಳನ್ನು ಎಪಿಎಂಸಿಯಿಂದ ಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಕ್ರಿಯಾ ಯೋಜನೆ ಅಂಗೀಕಾರವಾಗಿ ಕಾಮಗಾರಿಗಳು ಆರಂಭವಾದರೆ, ನಾಲ್ಕೈದು ವರ್ಷಗಳ ನಂತರ ಎಪಿಎಂಸಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ.

ಆಲೂಗಡ್ಡೆ ಹರಾಜು ಕಟ್ಟೆಗಳ ಬಳಿಯ ರಸ್ತೆಗೆ ಡಾಂಬರ್ ಹಾಕುವುದು. ಎಲ್‌ಇಡಿ ದೀಪ ಮತ್ತು ವಿದ್ಯುತ್ ಕಂಬಗಳ ಅಳವಡಿಕೆ, ಇಂದಿರಾ ಕ್ಯಾಂಟೀನ್ ಬಳಿ ರಸ್ತೆ ಡಾಂಬರ್ ಹಾಕುವುದು. ತಗಡಿನ ಶೀಟ್‌ಗಳ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆ ರೂಪಿಸಲಾಗಿದೆ.

ಎಪಿಎಂಸಿ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಇತ್ತೀಚೆಗೆ ಎಪಿಎಂಸಿಗೆ ಭೇಟಿ ನೀಡಿ ತುರ್ತಾಗಿ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದರು. ಕಾಂಕ್ರಿಟ್ ರಸ್ತೆ, ಶೌಚಾಲಯ, ರೈತ ಹರಾಜು ಕಟ್ಟೆಗಳ ಮೇಲೆ ತಗಡಿನ ಶೀಟ್‌ಗಳ ಅವಳಡಿಕೆ ಮತ್ತಿತರ ಕಾಮಗಾರಿಗಳನ್ನು
ಕೈಗೊಳ್ಳಬೇಕು ಎಂದು ನಿರ್ದೇಶನ
ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.