ಚೇಳೂರು: 2025ರಲ್ಲಿ ತಾಲ್ಲೂಕಿನಲ್ಲಿ ನಡೆದ ಪ್ರಮುಖ ಘಟನಾವಳಿಗಳು ಏನು ಎನ್ನುವುದನ್ನು ನೋಡಿದರೆ ತಾಲ್ಲೂಕು ಕಚೇರಿ ವಿವಾದ, ಹಸಿರುಸೇನೆ ಪ್ರತಿಭಟನೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ, ಅಪಘಾತ, ಸಾಲು ಸಾಲು ಸಾವುಗಳು, ರಾಜಕೀಯ ಬದಲಾವಣೆಗಳು... ಹೀಗೆ ನಾನಾ ಘಟನೆಗಳೊಂದಿಗೆ ತನ್ನ ಅವಧಿಯನ್ನು ಪೂರ್ಣಗೊಳಿಸುತ್ತಿದೆ.
ತಾಲ್ಲೂಕು ಕಚೇರಿ ಕಟ್ಟಡವನ್ನು ಪಟ್ಟಣದ ಹೊರವಲಯದ ಪುಲಗಲ್ ಕ್ರಾಸ್ ಬಳಿ ನಿರ್ಮಿಸಲು ಮುಂದಾಗಿದ್ದ ಸರ್ಕಾರದ ತೀರ್ಮಾನವನ್ನು ಖಂಡಿಸಿ ಚೇಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಸಂಸದ ಡಾ.ಕೆ. ಸುಧಾಕರ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ನೀಡಿದ್ದರು.
ಈ ವಿಚಾರವಾಗಿ ಪಕ್ಷಗಳ ಮುಖಂಡರು ಸಾಲು ಸಾಲಾಗಿ ಧೀರ್ಘ ಕಾಲ ಸುದ್ದಿಗೋಷ್ಠಗಳನ್ನೂ ನಡೆಸಿ ತೀವ್ರ ಚರ್ಚೆಗೆ ಕಾರಣರಾದರು. ಈ ವಿವಾದವು ಶಾಸಕರ ಜನಸ್ಪಂದನ ಕಾರ್ಯಕ್ರಮಕ್ಕೂ ಬಿಸಿ ಮುಟ್ಟಿಸಿತ್ತು.
45ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರ ರೈತರಿಗೆ ತಲುಪಬೇಕಾದ ರಸಗೊಬ್ಬರಗಳನ್ನು ಕದ್ದು ಮುಚ್ಚಿ ಗೋವಾಗೆ ಮಾರಾಟ ಮಾಡುತ್ತಿದೆ ಎಂದು ರಾಜ್ಯ ಜೆಡಿಎಸ್ ಯುವ ಬ್ರಿಗೇಡ್ ಕಾರ್ಯದರ್ಶಿ ಎಂ.ಎನ್.ರಾಜಾರೆಡ್ಡಿ ಆರೋಪಿಸಿದರು.
ಕಾರ್ಯಕ್ರಮದ ನಂತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ರಸಗೊಬ್ಬರ ಮಾರಾಟ ಮಾಡುವುದನ್ನು ಖಂಡಿಸಿ ರ‍್ಯಾಲಿ ನಡೆಯಿತು.
ಬಯಲುಸೀಮೆಯ ನೀರಾವರಿ ಹೋರಾಟಗಾರ ಹಾಗೂ ವೈದ್ಯ ಚಿಂತಕ ಡಾ. ಮಧುಸೀತಪ್ಪ ಆಗಸ್ಟ್ 27ರಂದು ತಾಲ್ಲೂಕಿನ ಗ್ಯಾದಿವಾಂಡ್ಲಪಲ್ಲಿ ಬಳಿ ಇರುವ ತಮ್ಮ ತೋಟದ ಮನೆಯಲ್ಲಿ ನಿಧನರಾದರು. ವೃತ್ತಿಪರ ವೈದ್ಯರಾಗಿದ್ದ ಡಾ. ಮಧುಸೀತಪ್ಪ, ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತವಾದ ನೀರಾವರಿ ಸೌಲಭ್ಯಕ್ಕಾಗಿ ಹೊರಾಡುತ್ತಿರುವ ಮುಖಂಡರಲ್ಲಿ ಒಬ್ಬರಾಗಿದ್ದರು. ಆಗಸ್ಟ್ 31 ರಂದು ಅವರ ಸ್ವಗ್ರಾಮವಾದ ಚಿಲಕಲನೇರ್ಪು ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಅಂತ್ಯಸಂಸ್ಕಾರದಲ್ಲಿ ಚಿಂತಾಮಣಿ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಶಿಡ್ಲಘಟ್ಟ ಶಾಸಕ ಬಿ.ಎನ್.ರವಿಕಮಾರ್ ಭಾಗಿಯಾಗಿದ್ದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ಜಿಲ್ಲೆಯಲ್ಲಿ ಚೇಳೂರು ತಾಲ್ಲೂಕು ಶೇ 100ರಷ್ಟು ಪ್ರಗತಿ ಸಾಧಿಸಿತ್ತು. ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಿದ ತಾಲ್ಲೂಕಿನ ಹೊಸಹುಡ್ಯ ಸರ್ಕಾರಿ ಶಾಲೆ ಶಿಕ್ಷಕಿ ರಾಧಾ ಅವರನ್ನು ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಶ್ವೇತಾ ಬಿ.ಕೆ ಸನ್ಮಾನಿಸಿದರು.
ಅಚ್ಚರಿ ಎಂಬಂತೆ ತಾಲ್ಲೂಕಿನ ನಾರೇಮದ್ದೇಪಲ್ಲಿ ಗ್ರಾಮಪಂಚಾಯಿತಿ ವ್ಯಾಪ್ತಿಯ ದೊಡ್ಡವಾರಪಲ್ಲಿ ಮತ್ತು ಕುರುಬರಹಳ್ಳಿ ಗ್ರಾಮಗಳ ನಡುವಿನ ಯರ್ರಗುಡಿ ಕೆರೆ ರಾಜಕಾಲುವೆ ಪಕ್ಕದಲ್ಲಿ ಹೂತ ಸ್ಥಿತಿಯಲ್ಲಿ ಗುರುತು ಸಿಗದ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಶವವು ಸಂಪೂರ್ಣವಾಗಿ ಕೊಳೆತು ಹೋಗಿತ್ತು. ಕೇವಲ ಬುರುಡೆ ಮಾತ್ರ ಉಳಿದಿತ್ತು. ಶವದ ಇತರ ಭಾಗಗಳು ಕೊಳೆತು ಗುರುತು ಸಿಗದ ಸ್ಥಿತಿಯಲ್ಲಿದ್ದವು.
ಅಕ್ಟೋಬರ್ ತಿಂಗಳಿನಲ್ಲಿ ಭಾರಿ ಮಳೆಯಿಂದ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಹಾನಿಯಾಗಿದ್ದು, ಕಂದಾಯ ಇಲಾಖೆ, ಕೃಷಿ ಇಲಾಖೆ, ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಲಾವೃತಗೊಂಡ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದರು.
ನಕಲಿ ದಾಖಲೆಗಳನ್ನು ಸೃಷ್ಟಿಸಿ ರೈತರ ಜಮೀನುಗಳನ್ನು ಭೂಗಳ್ಳರು ಅಕ್ರಮವಾಗಿ ಕ್ರಯ ಮಾಡಿಕೊಂಡಿದ್ದರು. ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮಧ್ಯ ಪ್ರವೇಶಿಸಿ ಕ್ರಯಗಳನ್ನು ರದ್ದುಗೊಳಿಸಿ ಅರ್ಹ ಫಲಾನುಭವಿ ರೈತರಿಗೆ ಜಮೀನನ್ನು ಹಿಂದಿರುಗಿಸಿದರು.
ಪತ್ನಿಯ ನಡತೆ ಮೇಲೆ ಅನುಮಾನಗೊಂಡ ಪತಿ ಕಬ್ಬಿಣದ ರಾಡ್‌ನಿಂದ ಹೊಡೆದು ಆಕೆಯನ್ನು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಗೆರಿಗರೆಡ್ಡಿಪಾಳ್ಯ ಗ್ರಾಮದಲ್ಲಿ ನವೆಂಬರ್ 27 ರ ರಾತ್ರಿ ನಡೆದಿತ್ತು. ಈ ಘಟನೆಯಲ್ಲಿ ದಿಲ್ ಶಾದ್ ಅಲಿಯಾಸ್ ಕವಿತಾ (22) ಮಹಿಳೆ ಮೃತಪಟ್ಟಿದ್ದರು.
ತಾಲ್ಲೂಕಿನ ಏನಿಗದಲೆ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆಯಿತು.ಗ್ರಾಮ ಸ್ವರಾಜ್ಯವಾದರೆ ದೇಶ ಉದ್ದಾರವಾದಂತೆ ಎಂಬ ಕನಸನ್ನು ಮಹಾತ್ಮ ಗಾಂಧೀಜಿ ಕಂಡಿದ್ದರು. ಅದನ್ನು ಏನಿಗದಲೆ ಗ್ರಾಮ ಪಂಚಾಯಿತಿ ನನಸು ಮಾಡಿದೆ. 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಆಯಿತು.
ಡಿಸೆಂಬರ್ 12 ರಿಂದ ದ್ವಿಚಕ್ರ ವಾಹನಗಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿರುವ ಚಾಲಕರಿಗೆ ದಂಡ ವಿಧಿಸಲಾಗುತ್ತಿದೆ.
ನನ್ನ 40 ದಿನದ ಹಸುಳೆಯನ್ನು ಅಜ್ಜಿಯೇ ಕೊಲೆ ಮಾಡಿದ್ದಾಳೆ ಎಂದು 17 ವರ್ಷದ ಬಾಲಕಿಯೊಬ್ಬಳು ಪೋಲಿಸ್ ಠಾಣೆಯಲ್ಲಿ ಡಿಸೆಂಬರ್ 23ರಂದು ದೂರು ನೀಡಿದ್ದಳು. ಅಂತ್ಯಸಂಸ್ಕಾರ ನಡೆದಿದ್ದ ಮಗುವಿನ ಶವವನ್ನು ಡಿಸೆಂಬರ್ 24 ರಂದು ಚಿಕ್ಕಬಳ್ಳಾಪುರ ಅಪರಾಧ ವಿಭಾಗದ ತನಿಖಾ ತಂಡವು ತನಿಖೆಯ ಭಾಗವಾಗಿ ಚೇಳೂರು ತಹಶೀಲ್ದಾರ್ ಶ್ವೇತಾ ಹಾಗೂ ತಾಲ್ಲೂಕು ಆರೋಗ್ಯ ಆಡಳಿತಾಧಿಕಾರಿ ಸುಜಿತ್ ರೆಡ್ಡಿ, ವೈದ್ಯಾಧಿಕಾರಿ ಭಾಸ್ಕರ್ ಸಮಕ್ಷಮದಲ್ಲಿ ಸಮಾಧಿಯಿಂದ ಹೊರತೆಗೆದು ಶವಪರೀಕ್ಷೆ ಮಾಡಲಾಯಿತು.
ಹೀಗೆ 2025ನೇ ಸಾಲಿನಲ್ಲಿ ಚೇಳೂರು ತಾಲ್ಲೂಕಿನಲ್ಲಿ ಸಿಹಿಗಿಂತ ಕಹಿ ವಿದ್ಯಮಾನಗಳೇ ಹೆಚ್ಚು ಘಟಿಸಿವೆ.
ಅಪಘಾತ: ನಾಲ್ವರ ಸಾವು
ತಾಲ್ಲೂಕಿನ ಬುರುಡಗುಂಟೆ ಸಮೀಪ ಬೈಕ್ ಮತ್ತು ಶಾಲಾ ವಾಹನ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ಚಿಕಲನೇರ್ಪು ಗ್ರಾಮದ 5 ಜನರು ಪಲ್ಸರ್ ಬೈಕ್‌ನಲ್ಲಿ ಚಿಲಕಲನೇರ್ಪುನಿಂದ ಬುರುಡಗುಂಟೆ-ಕೋರ್ಲಪರ್ತಿ ಮಾರ್ಗವಾಗಿ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿ ನಡೆಯಲಿದ್ದ ವಿವಾಹಕ್ಕೆ ತೆರಳುತ್ತಿದ್ದರು. ಎದುರಿನಿಂದ ವೇಗವಾಗಿ ಬಂದ ಶಾಲಾ ವಾಹನಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಜ್ಜಿ ವಿರುದ್ಧವೇ ಮೊಮ್ಮಗಳ ದೂರು ನವೆಂಬರ್ 30ರಂದು ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಬಳಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡ ಯುವಕನಿಗೆ ಚೇಳೂರು ತಹಶೀಲ್ದಾರ್ ಶ್ವೇತಾ ಅವರು ತಮ್ಮ ಅಧಿಕೃತ ವಾಹನದಲ್ಲಿ ನೆರವು ನೀಡಿ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯ ಸ್ಪಂದನೆ ತೋರಿದ್ದರು. ಈ ಸಮಯೋಚಿತ ಕಾರ್ಯಕ್ಕೆ ಸ್ಥಳೀಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ದುರ್ಘಟನೆಯಲ್ಲಿ ಸ್ಥಳದಲ್ಲೇ ಒಬ್ಬ ಯುವಕ ಮೃತಪಟ್ಟರೆ ಇನ್ನೊಬ್ಬ ಯುವಕನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.