
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಬಿಜೆಪಿಗೆ ಡಾ.ಕೆ.ಸುಧಾಕರ್ ಅನಿವಾರ್ಯ. ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವರಿಷ್ಠರು ಅವರಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಮುಖಂಡರು ಮತ್ತು ಸುಧಾಕರ್ ಬೆಂಬಲಿಗರು ಕೋರಿದರು.
ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಗಜೇಂದ್ರ, ‘ಮೂರು ದಿನಗಳ ಹಿಂದೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಚಿಕ್ಕಬಳ್ಳಾಪುರ ಬಿಜೆಪಿ ಟಿಕೆಟ್ ಅನ್ನು ಸಂದೀಪ್ ರೆಡ್ಡಿ ಅವರಿಗೆ ಕೊಡಬೇಕು ಎಂದಿದ್ದಾರೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಬೆಳವಣಿಗೆಗೆ ಡಾ.ಕೆ.ಸುಧಾಕರ್ ಅನಿವಾರ್ಯ ಎಂದರು.
ಸುಧಾಕರ್ ಅವರು ಬಿಜೆಪಿ ಸೇರಿದ ಮೇಲೆ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಕ್ಷ ಸಂಘಟಿಸಿದ್ದಾರೆ. ಮೂರು ಬಾರಿ ಶಾಸಕ ಮತ್ತು ಸಚಿವರಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ವಿಶ್ವನಾಥ್ ಅವರು ಯಾವ ದೃಷ್ಟಿಯಿಂದ ಹೇಳಿದ್ದಾರೊ ಗೊತ್ತಿಲ್ಲ. ಬೇರೆಯವರು ಹೆಸರು ಹೇಳಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಪಕ್ಷದ ಹೈಕಮಾಂಡ್ ಟಿಕೆಟ್ ನೀಡುತ್ತದೆ. ಸುಧಾಕರ್ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಆನಂದ್, ನಗರಸಭೆ ಮಾಜಿ ಸದಸ್ಯರಾದ ಯತೀಶ್, ಮಂಜುನಾಥಾಚಾರಿ,
ಅರುಣ್, ತೇಜೇಂದ್ರ, ಮೊಬೈಲ್ ಬಾಬ, ರಾಮಣ್ಣ,ಮುನಿರಾಜು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
‘ಟೆಂಡರ್ ರದ್ದಾಗಲು ಶಾಸಕ ಕಾರಣ’
ಚಿಕ್ಕಬಳ್ಳಾಪುರಕ್ಕೆ ನಗರೋತ್ಥಾನ ಯೋಜನೆ ಡಾ.ಕೆ.ಸುಧಾಕರ್ ಅವರು ಶಾಸಕರಾಗಿದ್ದ ವೇಳೆ ₹ 45 ಕೋಟಿ ಅನುದಾನ ಬಂದಿತ್ತು. ಟೆಂಡರ್ ಸಹ ನಡೆದಿತ್ತು. ಆದರೆ ಆ ಟೆಂಡರ್‌ಗಳು ರದ್ದಾಗಲು ಈಗಿನ ಶಾಸಕರೇ ಕಾರಣ’ ಎಂದು ಗಜೇಂದ್ರ ದೂರಿದರು. ಈ ಹಿಂದೆ ಪ್ರತಿ ವಾರ್ಡ್‌ಗಳಿಗೂ ಅನುದಾನ ಹಂಚಿಕೆ ಮಾಡಿದ್ದರು. ಆದರೆ ಈಗ ಕಾಮಗಾರಿಯನ್ನೇ ಬದಲಾವಣೆ ಮಾಡಿದ್ದಾರೆ. ಇಂದಿಗೂ ನಗರೋತ್ಥಾನ ಯೋಜನೆ ಕಾಮಗಾರಿಗಳು ಆರಂಭವಾಗಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.