ADVERTISEMENT

ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ: ಕಾಂಗ್ರೆಸ್ ಕಲಿಗಳ ನಡುವೆಯೇ ಕದನ

ಡಿ.ಎಂ.ಕುರ್ಕೆ ಪ್ರಶಾಂತ
Published 29 ಜನವರಿ 2026, 6:05 IST
Last Updated 29 ಜನವರಿ 2026, 6:05 IST
<div class="paragraphs"><p>ಎನ್‌.ಸಿ.ವೆಂಕಟೇಶ್ ಮತ್ತು ಯಲುವಳ್ಳಿ ಎನ್.ರಮೇಶ್</p></div>

ಎನ್‌.ಸಿ.ವೆಂಕಟೇಶ್ ಮತ್ತು ಯಲುವಳ್ಳಿ ಎನ್.ರಮೇಶ್

   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಚುನಾವಣೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಕ್ಷೇತ್ರ ಚಿಕ್ಕಬಳ್ಳಾಪುರ. ಕೋಚಿಮುಲ್‌ನಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಒಬ್ಬರೇ ನಿರ್ದೇಶಕರು ಇದ್ದರು.

ಚಿಮುಲ್ ರಚನೆಯ ತರುವಾಯ ಚಿಕ್ಕಬಳ್ಳಾಪುರ ಮತ್ತು ಪೆರೇಸಂದ್ರ ಕ್ಷೇತ್ರಗಳು ರಚನೆಯಾಗಿವೆ. ಚಿಕ್ಕಬಳ್ಳಾಪುರ ನಿರ್ದೇಶಕ ಸ್ಥಾನಕ್ಕೆ ಕೋಚಿಮುಲ್‌ನ ಈ ಹಿಂದಿನ ನಿರ್ದೇಶಕ ಎನ್‌.ಸಿ.ವೆಂಕಟೇಶ್ ಮತ್ತು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್.ರಮೇಶ್ ನಡುವೆ ಹಣಾಹಣಿ ನಡೆದಿದೆ. 

ADVERTISEMENT

ಈ ಇಬ್ಬರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಪ್ರಮುಖ ನಾಯಕರು. ಈ ಇಬ್ಬರ ಸ್ಪರ್ಧೆಯ ಕಾರಣದಿಂದ ಕಾಂಗ್ರೆಸ್‌ನೊಳಗೂ ಗುಂಪುಗಳಾಗಿವೆ. ಕೆಲವರು ಎನ್‌.ಸಿ.ವೆಂಕಟೇಶ್ ಮತ್ತೆ ಕೆಲವರು ಯಲುವಳ್ಳಿ ಎನ್.ರಮೇಶ್ ಪರವಾಗಿ ಪ್ರಚಾರ ನಡೆಸಿದ್ದಾರೆ. 

ಈ ಕ್ಷೇತ್ರವು ಪೋಶೆಟ್ಟಹಳ್ಳಿ, ಮುದ್ದೇನಹಳ್ಳಿ, ನಂದಿ,ಕುಪ್ಪಹಳ್ಳಿ, ದೊಡ್ಡಮರಳಿ, ಕೊಂಡೇನಹಳ್ಳಿ, ಅಗಲಗುರ್ಕಿ, ಅಜ್ಜವಾರ, ಹೊಸಹುಡ್ಯ, ಅಂಗರೇಖನಹಳ್ಳಿ ಪಂಚಾಯಿತಿಗಳು ಹಾಗೂ ಚಿಕ್ಕಬಳ್ಳಾಪುರ ನಗರಸಭೆ  ವ್ಯಾಪ್ತಿಯಲ್ಲಿದೆ. ಒಟ್ಟು 84 ಅರ್ಹ ಮತದಾರರು ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಇದ್ದಾರೆ. ಸಂಪರ್ಕ, ಪ್ರಭಾವಗಳು ಸೋಲು, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿದ್ದ ಎ.ಶಿವಾನಂದ್ ನಾಮಪತ್ರ ವಾಪಸ್ ಪಡೆದ ಕಾರಣ ಮೈತ್ರಿಕೂಟದ ಅಭ್ಯರ್ಥಿ ಈ ಕ್ಷೇತ್ರದಲ್ಲಿ ಇಲ್ಲ. ಆದ ಕಾರಣ ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಜೊತೆ ಗುರುತಿಸಿಕೊಂಡಿರುವ ಡೆಲಿಗೇಟ್‌ಗಳ ಮನಗೆಲ್ಲಲು ಈ ಇಬ್ಬರು ಕಾಂಗ್ರೆಸ್ ಮುಖಂಡರು ಪ್ರಯತ್ನಿಸುತ್ತಿದ್ದಾರೆ.  

ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಸಂಸದ ಡಾ.ಕೆ.ಸುಧಾಕರ್ ಈ ಕ್ಷೇತ್ರದ ಸಹಕಾರ ವಲಯದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಈ ನಾಯಕರು ಇಲ್ಲಿಯವರೆಗೆ ಬಹಿರಂಗವಾಗಿ ಪ್ರಚಾರ ನಡೆಸಿಲ್ಲ.

ಪ್ರಮುಖ ಹುದ್ದೆಯಲ್ಲಿ ಇದ್ದರೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಯಲುವಳ್ಳಿ ರಮೇಶ್ ಅವರು ಚಿಮುಲ್ ಚುನಾವಣೆಯಲ್ಲಿ ಧುಮುಕಲು ಕಾರಣಗಳೇನು ಎನ್ನುವ ಬಗ್ಗೆ ಪಕ್ಷದೊಳಗೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ಚಿಮುಲ್ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕಾಂಗ್ರೆಸ್‌ನ ಬಣ ರಾಜಕೀಯವೂ ಮತ್ತೊಮ್ಮೆ ಬೀದಿಗೆ ಬಂದಿದೆ.

ಈ ವಿಚಾರವಾಗಿ ಇತ್ತೀಚೆಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ‘ಹೊಸ ಒಕ್ಕೂಟವಾದ ನಂತರ ಬಹಳಷ್ಟು ಜನರಿಗೆ ಆಸೆ ಆಕಾಂಕ್ಷೆಗಳು ಇವೆ. ಕೆಲವರಿಗೆ ಬಯಕೆ ಹೆಚ್ಚು. ಆ ಬಯಕೆಯ ರೀತಿಯಲ್ಲಿ ಮುಂದುವರಿದಿದ್ದಾರೆ. ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ’ ಎಂದಿದ್ದರು. ಸಚಿವರ ಈ ಮಾತುಗಳು ಕಾಂಗ್ರೆಸ್‌ನೊಳಗಿನ ರಾಜಕಾರಣವನ್ನು ತೋರಿತ್ತು. 

ಕೋಚಿಮುಲ್ ನಿರ್ದೇಶಕರಾಗಿದ್ದ ವೇಳೆ ತಾವು ಮಾಡಿದ ಕೆಲಸಗಳನ್ನು ಮುಂದಿಟ್ಟುಕೊಂಡು ವೆಂಕಟೇಶ್ ಮತ ಕೋರುತ್ತಿದ್ದಾರೆ. ಪಕ್ಷದ ಹಿರಿಯ ನಾಯಕ ಎನಿಸಿರುವ ಯಲುವಳ್ಳಿ ರಮೇಶ್ ಸಹ ತಮ್ಮದೇ ಆದ ಸಂಪರ್ಕ ಜಾಲದ ಮೂಲಕ ಮತದಾರರ ಮನ ಗೆಲ್ಲಲು ಮುಂದಾಗಿದ್ದಾರೆ.

ಚಿಮುಲ್ ಚುನಾವಣೆಯ ತರುವಾಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನೊಳಗಿನ ಕಗ್ಗಂಟು ಯಾವ ಸ್ವರೂಪ ಪಡೆಯಲಿದೆ ಎನ್ನುವ ಕುತೂಹಲವಿದೆ.

ನಿರ್ದೇಶಕನಾಗಿದ್ದ ವೇಳೆ ಹೈನುಗಾರರ ಪರವಾಗಿ ಕೆಲಸ ಮಾಡಿದ್ದೇನೆ. ಇದು ಹೈನುಗಾರರಿಗೆ ಮತ್ತು ಡೆಲಿಗೇಟ್‌ಗಳಿಗೆ ಗೊತ್ತು. ಇದೇ ನನಗೆ ಶ್ರೀರಕ್ಷೆ. ಈ ಕಾರಣದಿಂದ ನನಗೆ ಗೆಲ್ಲುವ ವಿಶ್ವಾಸವಿದೆ.  ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಮಾದರಿಯಾಗಿ ರೂಪಿಸಬೇಕಾಗಿದೆ. ಈ ಕಾರಣಕ್ಕೆ ಮತ್ತೆ ನಿರ್ದೇಶಕನನ್ನಾಗಿ ಮಾಡಿ ಎಂದು ಮತದಾರರಲ್ಲಿ ಕೋರುತ್ತಿದ್ದೇನೆ.
-ಎನ್‌.ಸಿ.ವೆಂಕಟೇಶ್
ಹಾಲಿನ ದರ ಕಡಿಮೆ ಇದೆ. ರೈತರ ಶ್ರಮಕ್ಕೆ ತಕ್ಕ ಬೆಲೆ ದೊರೆಯುತ್ತಿಲ್ಲ. ದರ ಹೆಚ್ಚಳಕ್ಕೆ ಶ್ರಮಿಸುವೆ. ಹಾಲು ಉತ್ಪನ್ನಗಳು ಮತ್ತಷ್ಟು ಹೆಚ್ಚಬೇಕು. ರಾಸುಗಳ ಚಿಕಿತ್ಸೆ ವಿಚಾರವಾಗಿ ಸಮಸ್ಯೆಗಳು ಇವೆ. ಹಾಲಿನ ದರ ಹೆಚ್ಚಿದರೆ ಮತ್ತೊಂದು ಕಡೆ ಪಶು ಆಹಾರದ ಬೆಲೆಯೂ ಹೆಚ್ಚುತ್ತದೆ. ಹೀಗೆ ಎಲ್ಲ ವಿಚಾರಗಳಲ್ಲಿಯೂ ಹೈನುಗಾರರ ಹಿತ ಕಾಪಾಡಲು ಶ್ರಮಿಸುವೆ.
-ಯಲುವಳ್ಳಿ ರಮೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.