ಗುಡಿಬಂಡೆ: ಇಲ್ಲಿನ ಡಿಸಿಸಿ ಬ್ಯಾಂಕ್ ಲೆಕ್ಕಾಧಿಕಾರಿ ಅನಿಲ್ ಕುಮಾರ್ ಎಂಬುವರು ಅಂದಾಜು ₹1.50 ಕೋಟಿಗೂ ಹೆಚ್ಚು ಹಣದೊಂದಿಗೆ ಪರಾರಿಯಾದ ಘಟನೆ ವಾರದ ಬಳಿಕ ಗೊತ್ತಾಗಿದೆ.
ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶಂಕರ್ ಗುರುವಾರ ಗುಡಿಬಂಡೆ ಡಿಸಿಸಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಲೆಕ್ಕಾಧಿಕಾರಿ ಅನಿಲ್ ಕುಮಾರ್ ಫೆ. 7ರಂದು ಹೋದವರು ಮತ್ತೆ ವಾಪಸ್ ಬಂದಿಲ್ಲ’ ಎಂದು ಬ್ಯಾಂಕ್ ವ್ಯವಸ್ಥಾಪಕ ಸುವರ್ಣಮೂರ್ತಿ ಫೆ. 13ರಂದು ಜಿಲ್ಲಾ ಬ್ಯಾಂಕ್‌ಗೆ ಮಾಹಿತಿ ನೀಡಿದ್ದಾರೆ.
‘ಗುಡಿಬಂಡೆಯ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಹಣ ದುರುಪಯೋಗವಾಗಿರುವುದು ನಿಜ. ಹಣ ದುರುಪಯೋಗ ಮಾಡಿದ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಲೆಕ್ಕ ಮುಗಿದ ನಂತರ ಹಣ ಎಷ್ಟು ದುರುಪಯೋಗವಾಗಿದೆ ಎಂದು ತಿಳಿಯಲಿದೆ. ಬ್ಯಾಂಕ್ ಖಾತೆದಾರರು ಹಾಗೂ ಹೂಡಿಕೆದಾರರು ಆತಂಕಪಡುವ ಅವಶ್ಯಕತೆ ಇಲ್ಲ’ ಎಂದು ಎಂ.ಡಿ ಶಂಕರ್ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.