
ಚಿಕ್ಕಬಳ್ಳಾಪುರ: ನಗರದ ಸರ್. ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 26 ಮತ್ತು 27 ರಂದು ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಎಂ. ಗಾಯತ್ರಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಫಲಪುಷ್ಟ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಸಚಿವ ಡಾ. ಎಂ.ಸಿ. ಸುಧಾಕರ್ ಕಾರ್ಯಕ್ರಮ ಉದ್ಘಾಟಿಸುವರು. ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ಪ್ರದರ್ಶನ ವೀಕ್ಷಿಸಲು ಉಚಿತ ಪ್ರವೇಶವಿದೆ ಎಂದು ಹೇಳಿದರು.
ಪ್ರಮುಖ ಆಕರ್ಷಣೆಗಳಾಗಿ ಹೂವುಗಳಿಂದ ಅಲಂಕರಿಸಿದ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಬ್ಯಾಟ್ ಮತ್ತು ಬಾಲ್, ಸಾಲುಮರದ ತಿಮ್ಮಕ್ಕ ಅವರ ಪ್ರತಿಮೆ, ತೋಟಗಾರಿಕೆ ಪಿತಾಮಹ ಎಂ.ಎಚ್ ಮರೀಗೌಡರ ಪ್ರತಿಮೆ, ಹಸು-ಕರು ಪ್ರತಿಮೆ, ಜಿಲ್ಲೆಯ ರೈತ ಮಹಿಳೆಯರಿಂದ ತಯಾರಿಸಲ್ಪಡುವ ಹೂವಿನ ಜೋಡಣೆ ಕಲಾಕೃತಿ, ಹೂವುಗಳಿಂದ ಅಲಂಕರಿಸಿದ ಆಧುನಿಕ ಮಹಿಳೆ ಕಲಾಕೃತಿ, ಮಾದರಿ ಕೈತೋಟ, ಹಣ್ಣು ತರಕಾರಿಗಳಲ್ಲಿ ವಿವಿಧ ಕಲಾಕೃತಿಗಳ ಕೆತ್ತನೆಯ ಪ್ರದರ್ಶನ ಇರಲಿದೆ ಎಂದು ಹೇಳಿದರು.
ಫಲಪುಷ್ಪ ಪ್ರದರ್ಶನದಲ್ಲಿ ಹೂಗಳ ಅಲಂಕಾರಕ್ಕೆ ಜಿಲ್ಲೆಯ 20 ಮಹಿಳೆಯರಿಗೆ ಎರಡು ದಿನ ತರಬೇತಿ ಕೊಡಿಸಲಾಗಿದೆ. ಇವರು ಸಿದ್ಧತೆಗಳನ್ನು ನಡೆಸುವರು. ಎರಡು ದಿನ ನಡೆಯುವ ಈ ಪ್ರದರ್ಶನಕ್ಕೆ ಒಟ್ಟು ₹9 ಲಕ್ಷ ವೆಚ್ಚವಾಗಲಿದೆ ಎಂದು ಹೇಳಿದರು.
ಜಿಯೊ ಟ್ಯಾಗ್ ಆಗಿರುವ ಜಿಲ್ಲೆಯ ಗುಲಾಬಿ ಈರುಳ್ಳಿ, ದೇವನಹಳ್ಳಿ ಚಕ್ಕೊತ್ತ ಮತ್ತು ನೀಲಿ ದ್ರಾಕ್ಷಿಯ ಪ್ರದರ್ಶನ ಸಹ ಮಾಡಲಾಗುವುದು. ಹೊಸ ಹೊಸ ಬಗೆಯ ಹೂ ಬೇಸಾಯವು ಜಿಲ್ಲೆಯಲ್ಲಿ ನಡೆಯುತ್ತಿದೆ. ಈ ಪುಷ್ಪಗಳು ಹಾಗೂ ಔಷಧೀಯ ಸಸಿಗಳ ಪ್ರದರ್ಶನವೂ ಇಲ್ಲಿ ಇರಲಿದೆ. ಸಸ್ಯ ಸಂತೆ ಹೆಸರಿನಡಿ ತೋಟಗಾರಿಕೆ ಇಲಾಖೆಯಿಂದ ಸಸಿಗಳ ಮಾರಾಟ ಸಹ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇಲಾಖಾ ಯೋಜನೆಗಳ ಮಾಹಿತಿ ಪ್ರದರ್ಶನವೂ ನಡೆಯುತ್ತದೆ. ಜಿಲ್ಲೆಯ ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನಕ್ಕೆ ಭೇಟಿ ನೀಡಬೇಕು ಎಂದು ಕೋರಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಸತೀಶ್ ಬಡಿಗೇರ್ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.