ಚಿನ್ನ
(ಪ್ರಾತಿನಿಧಿಕ ಚಿತ್ರ)
ಚಿಕ್ಕಬಳ್ಳಾಪುರ: ನಗರದ ಗಂಗಮ್ಮ ಗುಡಿ ರಸ್ತೆಯಲ್ಲಿರುವ ನವೀನ್ ಚಿನ್ನಾಭರಣ ಮಾರಾಟ ಮಳಿಗೆಯಲ್ಲಿ ಮಾಲೀಕರನ್ನು ವಂಚಿಸಿ ಚಿನ್ನಾಭರಣ ಎಗರಿಸಿದ್ದ ಕಳ್ಳಿಯನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಮಿಳುನಾಡಿನ ಸೇಲಂನ ಗೌರಮ್ಮ (70) ಬಂಧಿತರು. ಮತ್ತೊಬ್ಬ ಆರೋಪಿ ಚನ್ನಮ್ಮ ನಾಪತ್ತೆಯಾಗಿದ್ದು ಪೊಲೀಸರು ಶೋಧ ನಡೆಸಿದ್ದಾರೆ.
ಜೂ.28ರಂದು ಇಬ್ಬರು ಅಜ್ಜಿಯರು ಚಿನ್ನಾಭರಣದ ಅಂಗಡಿಗೆ ಬಂದಿದ್ದರು. ಅಂಗಡಿಯಲ್ಲಿ ನಿತ್ಯ ವಹಿವಾಟು ನಡೆಸುತ್ತಿದ್ದ ಮಾಲೀಕ ನವೀನ್ ಆಗ ಪ್ರವಾಸಕ್ಕೆ ಹೋಗಿದ್ದರು. ಅವರ ತಂದೆ ಮತ್ತು ಪುತ್ರ ವಹಿವಾಟು ನಡೆಸುತ್ತಿದ್ದರು.
ನಮ್ಮ ಬಳಿ 60 ಗ್ರಾಂ ಹಳೆ ಚಿನ್ನವಿದೆ. ಇದನ್ನು ಮಾರಾಟ ಮಾಡುತ್ತೇವೆ. ಬೇರೆ ಚಿನ್ನ ಖರೀದಿಸುತ್ತೇವೆ ಎಂದು ಅಜ್ಜಿಯರು ತಿಳಿಸಿದ್ದರು. ಮಾಲೀಕರು ಹಳೆ ಚಿನ್ನ ಪರೀಕ್ಷಿಸಿದ್ದು ಅದು ಅಸಲಿಯಾಗಿದೆ. ಹಳೆ ಚಿನ್ನ ನೀಡಿ, ಅಂಗಡಿಯಿಂದ ಚಿನ್ನದ 51 ಗ್ರಾಂ ಮೌಲ್ಯದ ಆಭರಣಗಳನ್ನು ಪಡೆದಿದ್ದರು. ನಂತರ ತಾವು ತಂದಿದ್ದ ಅಸಲಿ ಬಂಗಾರವನ್ನು ತಮ್ಮ ಬಳಿಯಲ್ಲಿಯೇ ಇಟ್ಟುಕೊಂಡು ನಕಲಿ ಬಂಗಾರವನ್ನು ಮಾಲೀಕರಿಗೆ ನೀಡಿ ಪರಾರಿ ಆಗಿದ್ದರು.
ಈ ಬಗ್ಗೆ ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.