
ಚಿಕ್ಕಬಳ್ಳಾಪುರ: ನಗರ ಹೊರವಲಯದ ಆದಿಚುಂಚನಗಿರಿ ಶಾಖಾ ಮಠದ ಆವರಣದ ವೀರಾಂಜನೇಯ ದೇಗುಲದ ಬಳಿ ಭಾನುವಾರ ಕಡಲೆಕಾಯಿ ಪರಿಷೆ ಮತ್ತು ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದಲ್ಲಿ ಚಿಕ್ಕಬಳ್ಳಾಪುರ ನಗರ, ಜಡಲತಿಮ್ಮನಹಳ್ಳಿ, ಚೊಕ್ಕನಹಳ್ಳಿ, ಕೊತ್ತನೂರು, ಚದುಲಪುರ, ಅರಸನಹಳ್ಳಿ, ನಂದಿಕ್ರಾಸ್, ಎಲುವಳ್ಳಿ ಮತ್ತಿತರ ಗ್ರಾಮಗಳ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.
ಉತ್ಸವದ ಅಂಗವಾಗಿ ದೇವಾಲಯಲ್ಲಿನ ಪ್ರಸನ್ನ ಮಹಾಗಣಪತಿ, ಕೋದಂಡರಾಮ ಹಾಗೂ ಆಂಜನೇಯ ದೇವರ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಅಭಿಷೇಕ, ಹೋಮ, ಮಹಾಮಂಗಳಾರತಿ ಒಳಗೊಂಡಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.
ಜಡಲತಿಮ್ಮನಹಳ್ಳಿಯಿಂದ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು. ಡೊಳ್ಳುಕುಣಿತ, ಚಂಡೆ ಸೇರಿದಂತೆ ವಿವಿಧ ಕಲಾಪ್ರಕಾರಗಳು ಮೆರವಣಿಗೆಗೆ ಮೆರುಗು ತುಂಬಿದ್ದವು.
ದೇವಾಲಯದ ಬಳಿಗೆ ಬಂದ ವೀರಾಂಜನೇಯ ಮೂರ್ತಿಯನ್ನು ರಥದಲ್ಲಿ ಕೂರಿಸಲಾಯಿತು. ಈ ವೇಳೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾಮಠದ ಮಂಗಳನಂದನಾಥ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಜಯಘೋಷದೊಂದಿಗೆ ಭಕ್ತರು ದೇವಾಲಯದ ಆವರಣದಿಂದ ಮಠದ ಆವರಣದವರೆಗೂ ರಥವನ್ನು ಎಳೆದರು. ಕಡಲೆ ಕಾಯಿ ಪರಿಷೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಕಡಲೆ ಕಾಯಿಗಳನ್ನು ಭಕ್ತರಿಗೆ ಹಂಚಿದರು. ಪ್ರಸಾದ ರೂಪದ ಕಡಲೆ ಕಾಯಿಯನ್ನು ಪಡೆಯಲು ಹೆಚ್ಚಿನ ಜನರು ಬಂದಿದ್ದರು. ಮಜ್ಜಿಗೆ, ಪಾನಕ ವಿತರಿಸಲಾಯಿತು.
ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ರಾಜಕೀಯ ಮುಖಂಡರು, ಗಣ್ಯರು, ಭಕ್ತರು ಸೇರಿದಂತೆ ವಿವಿಧ ವಲಯಗಳ ಜನರು ವೀರಾಂಜನೇಯಸ್ವಾಮಿ ದರ್ಶನ ಪಡೆದರು.