ADVERTISEMENT

ಚಿಕ್ಕಬಳ್ಳಾಪುರ: 1,541 ಕೆರೆಗಳು ಖಾಲಿ!

355 ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಸಾರ್ವಜನಿಕರ ನಿತ್ಯ ಪರದಾಟ

ಈರಪ್ಪ ಹಳಕಟ್ಟಿ
Published 12 ಆಗಸ್ಟ್ 2019, 20:15 IST
Last Updated 12 ಆಗಸ್ಟ್ 2019, 20:15 IST
ಬರಿದಾಗಿರುವ ಜಕ್ಕಲಮಡಗು ಜಲಾಶಯದ ನೋಟ
ಬರಿದಾಗಿರುವ ಜಕ್ಕಲಮಡಗು ಜಲಾಶಯದ ನೋಟ   

ಚಿಕ್ಕಬಳ್ಳಾಪುರ: ರಾಜ್ಯದ ಅರ್ಧಭಾಗ ನೆರೆಯಿಂದ ತತ್ತರಿಸಿದ್ದರೆ, ಬಯಲು ಸೀಮೆಗೆ ಸೇರಿದ ಈ ಜಿಲ್ಲೆಯಲ್ಲಿ ಶೇ 87.46ರಷ್ಟು ಕೆರೆಗಳು ಬರಿದಾಗಿವೆ. 355 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ.

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯ 201, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 1,402 ಸೇರಿ ಒಟ್ಟು 1,603 ಕೆರೆಗಳಿವೆ. ಈ ವರ್ಷ ಸಾಮಾನ್ಯ ಮಳೆ ಬಾರದ ಕಾರಣ 1,541 ಕೆರೆಗಳು ಖಾಲಿ ಇವೆ. 62 ಕೆರೆಗಳಲ್ಲಿ ಶೇ 25ರಷ್ಟು ನೀರಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಇವು ಶೀಘ್ರ ಬತ್ತುವ ಸ್ಥಿತಿಯಿದೆ.

ಸದ್ಯ ಜಿಲ್ಲೆಯಲ್ಲಿ ಜಿಲ್ಲಾಡಳಿತ 142 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ, 213 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳ ನೆರವು ಪಡೆದು ಪ್ರತಿ ವ್ಯಕ್ತಿಗೆ ದಿನಕ್ಕೆ 40 ಲೀಟರ್ ಲೆಕ್ಕದಲ್ಲಿ ನೀರು ಪೂರೈಸುತ್ತಿದೆ. ಇದು, ಜನ, ಜಾನುವಾರುಗಳಿಗೆ ಸಾಲುತ್ತಿಲ್ಲ. ದೈನಂದಿನ ಅಗತ್ಯಗಳಿಗೆ ನೀರಿಗಾಗಿ ಪರದಾಡುವ ಸ್ಥಿತಿ ಉದ್ಭವವಾಗಿದೆ.

ADVERTISEMENT

ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರು ಪೂರೈಸುವ ಜಕ್ಕಲಮಡುಗು ಜಲಾಶಯ, ಗುಡಿಬಂಡೆ, ಬಾಗೇಪಲ್ಲಿ ಪಟ್ಟಣಗಳಿಗೆ ನೀರು ಪೂರೈಸುವ ಚಿತ್ರಾವತಿ ಜಲಾಶಯ, ಶಿಡ್ಲಘಟ್ಟ, ಚಿಂತಾಮಣಿ ಪಟ್ಟಣಗಳಿಗೆ ನೀರು ಪೂರೈಸುವ ಕೆರೆಗಳೂ ಬರಿದಾಗಿವೆ. ಹೀಗಾಗಿ, ನಗರ ಪ್ರದೇಶಗಳಲ್ಲಿ ಕೆಲ ವಾರ್ಡ್‌ಗಳಿಗೆ ಮೂರು ದಿನಕ್ಕೊಮ್ಮೆ, ಹಲವೆಡೆ ವಾರಕ್ಕೊಮ್ಮೆ ನೀರು ಪೂರೈಸುತ್ತಿರುವ ಉದಾಹರಣೆಗಳಿವೆ.

ಜಿಲ್ಲೆಯಲ್ಲಿ ಈ ವರ್ಷ ಆಗಸ್ಟ್ 8ರವರೆಗೆವಾಡಿಕೆಯಂತೆ 283.3 ಮಿ.ಮೀ ಮಳೆಯಾಗಬೇಕಿತ್ತು. 257.9 ಮಿ.ಮೀ ಅಷ್ಟೇ ಆಗಿದೆ. ಅಂಕಿಅಂಶಗಳ ಪ್ರಕಾರ ಮಳೆ ಕೊರತೆ ಹೆಚ್ಚಿಲ್ಲ ಎನಿಸುತ್ತದೆ. ವಾಸ್ತವದಲ್ಲಿ ಕೃಷಿಗೆ ಪೂರಕವಾಗಿ, ಕೆರೆಕಟ್ಟೆಗಳು ಭರ್ತಿಯಾಗಿಲ್ಲ. ಬಿತ್ತನೆಗೂ ಹಿನ್ನಡೆಯಾಗಿದ್ದು, ಶೇ 55ರಷ್ಟು ಸಾಧನೆ ಆಗಿದೆ.

ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ 8 ವರ್ಷ ಬರ ‘ಕಾಯಂ’ ಅತಿಥಿಯಂತಾಗಿದೆ. ಇನ್ನೊಂದೆಡೆ ಅಂತರ್ಜಲ ಮಟ್ಟ ಕುಸಿದು ಕೆಲವೆಡೆ 2,000 ಅಡಿಕೊರೆಯಿಸಿದರೂ ‘ಜೀವಜಲ’ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಕೆಲ ತಿಂಗಳಲ್ಲಿ ಜಿಲ್ಲೆಯಲ್ಲಿ 170 ಕೊಳವೆಬಾವಿಗಳ ಕೊರೆಯಿಸಿದ್ದು, ಈ ಪೈಕಿ ಶೇ 71.76ರಷ್ಟು (122) ವಿಫಲವಾಗಿವೆ. ಇನ್ನೊಂದೆಡೆ, ಫ್ಲೋರೈಡ್‌ ಸಮಸ್ಯೆಯೂ ಜನರನ್ನು ಬಾಧಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.