ADVERTISEMENT

ಚಿಕ್ಕಬಳ್ಳಾಪುರ: ಅಪರೂಪದ ಅತಿಥಿಯಾದ ಸಂಸದ, ‘ದಿಶಾ’ ಸಭೆಗೆ ಸೀಮಿತರಾದ ಬಚ್ಚೇಗೌಡ

ಚುನಾವಣೆ ಹೊಸ್ತಿಲಿನಲ್ಲಿ ಪಕ್ಷದಿಂದ ದೂರ

ಡಿ.ಎಂ.ಕುರ್ಕೆ ಪ್ರಶಾಂತ
Published 21 ಜನವರಿ 2023, 5:26 IST
Last Updated 21 ಜನವರಿ 2023, 5:26 IST
ಬಿ.ಎನ್.ಬಚ್ಚೇಗೌಡ
ಬಿ.ಎನ್.ಬಚ್ಚೇಗೌಡ   

ಚಿಕ್ಕಬಳ್ಳಾಪುರ: ಪಕ್ಷದ ಚಟುವಟಿಕೆಗಳಿಂದ ದೂರ, ಚಿಕ್ಕಬಳ್ಳಾಪುರ ಉತ್ಸವದಲ್ಲಿಯೂ ಭಾಗಿಯಾಗಲಿಲ್ಲ, ಕಳೆದ ವರ್ಷ ನಡೆದ ವಿಧಾನ ಪರಿಷತ್ ಚುನಾವಣೆಯ ಪ್ರಚಾರದಲ್ಲಿಯೂ ತೊಡಗಲಿಲ್ಲ–ಇದು ಸಂಸದ ಬಿ.ಎನ್.ಬಚ್ಚೇಗೌಡ ಅವರ ನಡೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ಕೀರ್ತಿ ಬಚ್ಚೇಗೌಡ ಅವರದ್ದು. ಇಂತಿಪ್ಪ ಬಚ್ಚೇಗೌಡರು ಜಿಲ್ಲೆಗೆ ಅಪರೂಪದ ಅತಿಥಿ ಆಗಿದ್ದಾರೆ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಗೆ ಮಾತ್ರ ಹಾಜರಾಗುವ ಅವರು ಜಿಲ್ಲೆಯಲ್ಲಿ ನಡೆಯುವ ಯಾವುದೇ ಸರ್ಕಾರಿ ಕಾರ್ಯಕ್ರಮಗಳು, ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಬಹುತೇಕ ಕಾರ್ಯಕ್ರಮಗಳಿಗೆ ಗೈರಾಗುತ್ತಿದ್ದಾರೆ. ಅಧಿಕಾರಿಗಳು ಶಿಷ್ಟಾಚಾರದ ಪ್ರಕಾರ ಸರ್ಕಾರದ ಆಹ್ವಾನ ಪತ್ರಿಕೆಗಳಲ್ಲಿ ಅವರ ಹೆಸರನ್ನು ಅಚ್ಚುತ್ತಿಸುತ್ತಾರೆ.

‘ಗೌಡರ ಕೋಟೆ’ ಎನಿಸಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಬಚ್ಚೇಗೌಡ ಅವರ ಮೂಲಕ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಿಕ್ಕಬಳ್ಳಾಪುರ ಹೊರತುಪಡಿಸಿ ಎಲ್ಲಿಯೂ ಬಿಜೆಪಿ ಶಾಸಕರು ಇಲ್ಲ. 2023ರ ವಿಧಾನಸಭಾ ಚುನಾವಣೆಯೂ ಸಮೀಪಿಸುತ್ತಿದೆ. ಇಂತಹ ಹೊತ್ತಿನಲ್ಲಿ ಜಿಲ್ಲೆಯಲ್ಲಿ ಬಿಜೆಪಿಯಿಂದ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲಿಯೂ ಸಂಸದರು ಭಾಗಿಯಾಗುತ್ತಿಲ್ಲ. ಸರ್ಕಾರಿ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿ ಅವರ ಹೆಸರಿನ ಜತೆ, ಭಾವಚಿತ್ರ ಮಾತ್ರ ಇರುತ್ತದೆ.

ADVERTISEMENT

ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ಜಿಲ್ಲಾಡಳಿತ ಮತ್ತು ಡಾ.ಕೆ.ಸುಧಾಕರ್ ಫೌಂಡೇಶನ್‌ನಿಂದ ಒಂದು ವಾರಗಳ ಕಾಲ ನಡೆದ ‘ಚಿಕ್ಕಬಳ್ಳಾಪುರ ಉತ್ಸವ’ದತ್ತ ಸಂಸದರು ತಲೆಯನ್ನೇ ಹಾಕಲಿಲ್ಲ. ಮುಖ್ಯಮಂತ್ರಿಯಾದಿಯಾಗಿ ಸಚಿವರ ದಂಡು ಬಂದರೂ ಒಮ್ಮೆಯೂ ಬಿ.ಎನ್‌.ಬಚ್ಚೇಗೌಡರು ಉತ್ಸವದಲ್ಲಿ ಪಾಲ್ಗೊಳ್ಳಲಿಲ್ಲ.

ಜಿಲ್ಲೆಗೆ ಬಿ.ಎನ್.ಬಚ್ಚೇಗೌಡರ ಯಾವಾಗ ಬಂದು ಹೋದರು ಎಂದು ನೋಡಿದರೆ ದಿಶಾ ಸಮಿತಿ ಸಭೆಗಳಿಗೆ ಮಾತ್ರ ಕಡ್ಡಾಯವಾಗಿ ಹಾಜರಾಗುತ್ತಿದ್ದಾರೆ. 2022ನೇ ಸಾಲಿನಲ್ಲಿ ಅವರು ನಾಲ್ಕು ದಿಶಾ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದನ್ನು ಹೊರತುಪಡಿಸಿ ಬೆರಳೆಣಿಕೆಯಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.

2022 ವರ್ಷದ ಆರಂಭದಲ್ಲಿ ಜ.3ರಂದು ನಡೆದ ಗೌರಿಬಿದನೂರು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ, ಜ.7ರಂದು ನಡೆದ ದಿಶಾ ಸಭೆ, ಮಾ.17ರಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಕೆನರಾ ಬ್ಯಾಂಕಿನ 2022-23ನೇ ಸಾಲಿನ ವಾರ್ಷಿಕ ಸಾಲ ಯೋಜನೆ ಗುರಿ ಪುಸ್ತಕ ಬಿಡುಗಡೆ, ಏ.15ರಂದು ಗೌರಿಬಿದನೂರು ತಾಲ್ಲೂಕಿನ ಹೊಸೂರಿನಲ್ಲಿ ನಡೆದ ಛತ್ರಪತಿ‌ ಶಿವಾಜಿ‌ ಮಹಾರಾಜರ ಪುತ್ಥಳಿ‌ ಅನಾವರಣ ಏ.25ರಂದು ಗೌರಿಬಿದನೂರಿನ ಕೋಟೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ‘ತಾಲ್ಲೂಕು ಮಟ್ಟದ ಆರೋಗ್ಯ ಮೇಳ’, ಮೇ 17ರಂದು ಬಾಗೇಪಲ್ಲಿ ತಾಲ್ಲೂಕಿನ ದೇವರಗುಡಿಪಲ್ಲಿ(ಗಡಿದಂ) ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಭೇಟಿ, ಜೂ.15ರಂದು ನಡೆದ ದಿಶಾ ಸಭೆಯಲ್ಲಿ ಸಂಸದರು ಭಾಗಿಯಾಗಿದ್ದಾರೆ.

ಜು.1ರಂದು ಜಿಲ್ಲೆಗೆ ಭೇಟಿ ನೀಡಿದ ‘ಸಂಸತ್ತಿನ ಜಲ ಶಕ್ತಿ ಸಲಹಾ ಸಮಿತಿ’ ತಂಡದ ಕಾರ್ಯಕ್ರಮ, ಆ.7ರಂದು ಬಾಗೇಪಲ್ಲಿಯಲ್ಲಿ ಬಿಜೆಪಿ ಸಮಾವೇಶ, ಸೆ.15ರಂದು ಗುಡಿಬಂಡೆಗೆ ಭೇಟಿ, ಸೆ.29ರಂದು ದಿಶಾ ಸಮಿತಿ ಸಭೆ, ನ.30ರಂದು ನಡೆದ ದಿಶಾ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಹೀಗೆ ವರ್ಷದಲ್ಲಿ ಬೆರಳೆಣಿಕೆಯ ದಿನಗಳು ಮಾತ್ರ ಸಂಸದರು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕುಗಳಿಗೆ ಭೇಟಿ ನೀಡಿದ್ದಾರೆ.

ಚುನಾವಣೆ ಪ್ರಚಾರಕ್ಕೂ ಇಲ್ಲ: ಇದಿಷ್ಟೇ ಅಲ್ಲ 2022ರಲ್ಲಿ ವಿಧಾನ ಪರಿಷತ್‌ನ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನಡೆದ ಚುನಾವಣೆಯ ಪ್ರಚಾರದಲ್ಲಿಯೂ ಸಂಸದರು ಭಾಗಿಯಾಗಲೇ ಇಲ್ಲ. ಹೊಸಕೋಟೆಯ ಬಚ್ಚೇಗೌಡ ಅವರು ಚಿಕ್ಕಬಳ್ಳಾಪುರವಷ್ಟೇ ಅಲ್ಲ ನೆರೆಯ ಕೋಲಾರ ಜಿಲ್ಲೆಯಲ್ಲಿಯೂ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಹೀಗಿದ್ದರೂ ಪರಿಷತ್ ಚುನಾವಣೆಯ ಪ್ರಚಾರ ಸಭೆಗಳಿಂದ ದೂರವಿದ್ದರು. ಒಂದೇ ಒಂದು ಸಭೆಯಲ್ಲಿಯೂ ಅವರು ಪಾಲ್ಗೊಳ್ಳಲಿಲ್ಲ.

‘ಉಸ್ತುವಾರಿ’ ಜತೆ ವೇದಿಕೆ ಹಂಚಿಕೆಯಿಲ್ಲ
ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಮತ್ತು ಬಿ.ಎನ್.ಬಚ್ಚೇಗೌಡ ಹೊಸಕೋಟೆ ಕ್ಷೇತ್ರದಲ್ಲಿ ರಾಜಕೀಯ ಎದುರಾಳಿಗಳು. ಇಲ್ಲಿಯವರೆಗೂ ಜಿಲ್ಲೆಯಲ್ಲಿ ನಡೆದ ಯಾವುದೇ ಸರ್ಕಾರಿ ಅಥವಾ ಪಕ್ಷದ ಕಾರ್ಯಕ್ರಮದ‌ಲ್ಲಿ ಇಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ.

ಬಿ.ಎನ್‌.ಬಚ್ಚೇಗೌಡ ಅವರ ಪುತ್ರ ಶರತ್ ಪಕ್ಷೇತರ ಅಭ್ಯರ್ಥಿಯಾಗಿ ಹೊಸಕೋಟೆಯಲ್ಲಿ ಎಂ.ಟಿ.ಬಿ ಅವರನ್ನು ಸೋಲಿಸಿದರು. ಈಗ ಶರತ್ ಕಾಂಗ್ರೆಸ್‌ ಪಕ್ಷದಲ್ಲಿ ಇದ್ದಾರೆ. ತಂದೆ ಬಿಜೆಪಿ, ಮಗ ಕಾಂಗ್ರೆಸ್ ಎನಿಸಿದ್ದಾರೆ.‌‌ 2023ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಮತ್ತು ಶರತ್ ಬಚ್ಚೇಗೌಡ ಮತ್ತೆ ಎದುರಾಳಿಗಳಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.