
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ನಂದಿ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಕಾಮಗಾರಿಗಳಿಗೆ ಸರ್ಕಾರಗಳು ಇಲ್ಲಿಯವರೆಗೆ ಒಟ್ಟು ₹ 810 ಕೋಟಿ ಬಿಡುಗಡೆ ಮಾಡಿವೆ.
ವೈದ್ಯಕೀಯ ಶಿಕ್ಷಣ ಕಾಲೇಜಿನ ನಿರ್ಮಾಣ ವೆಚ್ಚವು ಚಿಕ್ಕಬಳ್ಳಾಪುರ ರಾಜಕೀಯದಲ್ಲಿ ತೀವ್ರ ಚರ್ಚೆಗೂ ಕಾರಣವಾದ ವಿಚಾರ. ಸಂಸದ ಡಾ.ಕೆ.ಸುಧಾಕರ್ ಮತ್ತು ಸಚಿವ ಡಾ.ಎಂ.ಸಿ.ಸುಧಾಕರ್ ನಡುವೆ ವೆಚ್ಚ ಮತ್ತು ‘ನಿರ್ಮಾಣ ಕಾಮಗಾರಿಗಳ ವಿಚಾರವಾಗಿ ಈ ಹಿಂದಿನಿಂದಲೂ ವಾಕ್ಸಮರ ನಡೆಯುತ್ತಲೇ ಇದೆ.
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಆರಂಭದಲ್ಲಿ ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ವೈದ್ಯಕೀಯ ಕಾಲೇಜಿನ ನಿರ್ಮಾಣ ವೆಚ್ಚದ ಬಗ್ಗೆ ಬಿರುಸಿನ ಚರ್ಚೆಗಳು ನಡೆದಿದ್ದವು.
ಆದರೆ ಈಗ ಈ ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಕಾಂಗ್ರೆಸ್ ಸರ್ಕಾರವೇ ಹೆಚ್ಚಿನ ಹಣ ಬಿಡುಗಡೆ ಮಾಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜಿಗೆ ₹375 ಕೋಟಿ ಬಿಡುಗಡೆಯಾಗಿದ್ದರೆ ಕಾಂಗ್ರೆಸ್‌ನ ಈ ಎರಡೂವರೆ ವರ್ಷಗಳ ಅವಧಿಯಲ್ಲಿ ₹435 ಕೋಟಿ ಮಂಜೂರಾಗಿದೆ. ಒಟ್ಟಾರೆ ಇಲ್ಲಿಯವರೆಗೆ ₹810 ಕೋಟಿ ತಲುಪಿದೆ.
ನಂದಿ ವೈದ್ಯಕೀಯ ಕಾಲೇಜು 60 ಎಕರೆಯಲ್ಲಿದೆ. ರೇಡಿಯಾಲಜಿ ಬ್ಲಾಕ್ ನಿರ್ಮಾಣ ಕಾರ್ಯ ಬಹುತೇಕ ಪೂರ್ಣವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಧಿಯಿಂದ ಇದಕ್ಕೆ ನೆರವು ನೀಡಲಾಗಿದೆ.
ಹೊಸ ಅಕಾಡೆಮಿ ಬ್ಲಾಕ್ ಸಹ ಸಿದ್ಧವಾಗಿದ್ದು ಪೂರ್ಣ ಪ್ರಮಾಣದ ಶೈಕ್ಷಣಿಕ ಉಪಕರಣಗಳ ಸ್ಥಾಪನೆಗಾಗಿ ಸಚಿವ ಸಂಪುಟದ ಅನುಮೋದನೆಗೆ ಕಾಯಲಾಗುತ್ತಿದೆ.
ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಿಬ್ಬಂದಿ ನಿವಾಸಗಳ ನಿರ್ಮಾಣ ಕಾಮಗಾರಿ ಸಹ ಪೂರ್ಣವಾಗಿದೆ. ಎಂಬಿಬಿಎಸ್ ಸೀಟುಗಳ ಸಂಖ್ಯೆ 100ರಿಂದ 150ಕ್ಕೆ ಹೆಚ್ಚಳವಾಗಿದೆ. ಕಾಲೇಜಿನಲ್ಲಿ ಸದಸ್ಯ ಎಂಬಿಬಿಎಸ್ ವಿಭಾಗದಲ್ಲಿ 500, ನರ್ಸಿಂಗ್ ವಿಭಾಗದಲ್ಲಿ 400, ಅಲೈಡ್ ಹೆಲ್ತ್ ಸೈನ್ಸ್ ವಿಭಾಗದಲ್ಲಿ 300 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.
ಅಲ್ಲದೆ ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಯೂ ವೈದ್ಯಕೀಯ ಶಿಕ್ಷಣ ಕಾಲೇಜು ವ್ಯಾಪ್ತಿಗೆ ಒಳಪಟ್ಟಿದ್ದು ಇಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನಿಂಗ್ ಘಟಕಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಸರ್ಕಾರವು ಎಂಆರ್‌ಐ ಘಟಕಗಳ ಉಪಕರಣಗಳ ಖರೀದಿಗೆ ₹ 12 ಕೋಟಿ ಮತ್ತು ಸಿಟಿ ಸ್ಕ್ಯಾನಿಂಗ್ ಘಟಕದ ಉಪಕರಣಗಳ ಖರೀದಿಗೆ ₹ 8 ಕೋಟಿ ಮಂಜೂರು ಮಾಡಿದೆ. ಯಂತ್ರಗಳ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ.
ಹೀಗೆ ಜಿಲ್ಲೆಗೆ ಮಹತ್ವದ ಯೋಜನೆಯಾದ ವೈದ್ಯಕೀಯ ಶಿಕ್ಷಣ ಕಾಲೇಜಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಕೈ ಬಿಚ್ಚಿ ಹಣ ಮಂಜೂರು ಮಾಡಿವೆ.
ಹೆಚ್ಚಿದ್ದ ಯೋಜನಾ ವೆಚ್ಚ
ಚಿಕ್ಕಬಳ್ಳಾಪುರ ವೈದ್ಯಕೀಯ ಶಿಕ್ಷಣ ಕಾಲೇಜಿಗೆ ಭೂಮಿ ಪೂಜೆ ನೆರವೇರಿದಾಗ ಕಾಲೇಜು ನಿರ್ಮಾಣಕ್ಕೆ ₹525 ಕೋಟಿ ಯೋಜನಾ ವೆಚ್ಚವಿತ್ತು. ನಂತರ ₹810 ಕೋಟಿಗೆ ವೆಚ್ಚ ಅದು ತಲುಪಿತು. ಯೋಜನಾ ವೆಚ್ಚ ಹೆಚ್ಚಿದ್ದರ ಬಗ್ಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವೈದ್ಯಕೀಯ ಶಿಕ್ಷಣ ಸಚಿವರು ಮಾಹಿತಿ ಕಲೆ ಹಾಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.