ADVERTISEMENT

ಚಿಕ್ಕಬಳ್ಳಾಪುರಕ್ಕೆ 2033ರೊಳಗೆ ಮೆಟ್ರೊ: ಶಾಸಕ ಪ್ರದೀಪ್ ಈಶ್ವರ್

ಪೆರೇಸಂದ್ರದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಪ್ರದೀಪ್ ಈಶ್ವರ್

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 4:39 IST
Last Updated 30 ಡಿಸೆಂಬರ್ 2025, 4:39 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪ್ರದೀಪ್ ಈಶ್ವರ್ ಭೂಮಿ ಪೂಜೆ ನೆರವೇರಿಸಿದರು 
ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪ್ರದೀಪ್ ಈಶ್ವರ್ ಭೂಮಿ ಪೂಜೆ ನೆರವೇರಿಸಿದರು    

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರಕ್ಕೆ ಮೆಟ್ರೊ ರೈಲು ಯೋಜನೆ ತರುವ ಕನಸು ನನ್ನದಾಗಿದೆ. ಅದಕ್ಕಾಗಿ ಸಚಿವರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರೊಂದಿಗೆ ನಿರಂತರ ಚರ್ಚೆ ನಡೆಸುತ್ತಿದ್ದೇನೆ. 2033ರ ವೇಳೆಗೆ ಚಿಕ್ಕಬಳ್ಳಾಪುರಕ್ಕೆ ಮೆಟ್ರೊ ರೈಲು ಬರುವ ವಿಶ್ವಾಸವಿದೆ’ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ತಾಲ್ಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಸೋಮವಾರ ₹5 ಕೋಟಿ ವೆಚ್ಚದ ರಸ್ತೆಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಪೆರೇಸಂದ್ರ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಮುಂದಿನ ಹತ್ತು ವರ್ಷಗಳಲ್ಲಿ ತಾಲೂಕು ಕೇಂದ್ರವಾಗಿಸುವ ಗುರಿಯಿದೆ. ಇಲ್ಲಿನ ರಸ್ತೆಗಳು ಕಳೆದ 20 ವರ್ಷಗಳಿಂದ ಸಮರ್ಪಕವಾಗಿ ಅಭಿವೃದ್ಧಿ ಆಗಿರಲಿಲ್ಲ. ಈಗ ಹಂತ ಹಂತವಾಗಿ ಎಲ್ಲ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ ಎಂದರು.

ADVERTISEMENT

ಗ್ರಾಮದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸುವ ಯೋಜನೆಯಿದೆ. ಅದನ್ನು ರಾಷ್ಟ್ರೀಯ ಹೆದ್ದಾರಿ ಸಮೀಪ ನಿರ್ಮಿಸುವ ಆಲೋಚನೆಯಿದೆ. ಸುತ್ತಲಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಅನೇಕ ರಸ್ತೆಗಳ ದುರಸ್ತಿಗೆ ಪಣ ತೊಟ್ಟಿದ್ದೇನೆ. ಈಗಾಗಲೇ ಹಲವು ರಸ್ತೆ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿವೆ ಎಂದು ಹೇಳಿದರು.

ನನ್ನ ವಿರುದ್ಧ ರಾಜಕೀಯ ಮಾಡಿರುವ ಗ್ರಾಮಗಳಲ್ಲಿಯೂ ರಸ್ತೆಗಳನ್ನು ಸರಿಪಡಿಸಿದ್ದೇನೆ. ನನಗೆ ರಾಜಕೀಯಕ್ಕಿಂತ ಜನಸೇವೆಯೇ ಮುಖ್ಯ. ಚಿಕ್ಕಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ಮುಸ್ಟೂರು ರಸ್ತೆ ಕಾಮಗಾರಿ ಕಳೆದ 10 ವರ್ಷಗಳಿಂದ ಸ್ಥಗಿತವಾಗಿತ್ತು. ಈಗ ₹10 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಕಂದವಾರ ರಸ್ತೆ ಅಭಿವೃದ್ಧಿಗೆ ₹8 ಕೋಟಿ ಮಂಜೂರು ಮಾಡಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ವಿಳಂಬವಾಗಿದೆ. ತಿಂಗಳೊಳಗೆ ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ. ನಂತರ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.

ಕ್ಷೇತ್ರದಲ್ಲಿ ಆರೋಗ್ಯ ಸೇವೆಗೆ ಆದ್ಯತೆ ನೀಡಿದ್ದೇನೆ. ನನ್ನ ತಂದೆ–ತಾಯಿ ಹೆಸರಿನಲ್ಲಿ ಹತ್ತು ಅಮ್ಮ ಆಂಬ್ಯುಲೆನ್ಸ್‌ಗಳನ್ನು ನೀಡಲಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಅವು ಅನೇಕ ಜೀವ ಉಳಿಸಿವೆ. ಜಿಲ್ಲೆಗೆ ಎಂಆರ್‌ಐ ಸೌಲಭ್ಯ ಅತ್ಯಗತ್ಯವಾಗಿದೆ. ಶೀಘ್ರದಲ್ಲೇ ಜಿಲ್ಲಾಸ್ಪತ್ರೆಯಲ್ಲಿ ಉಚಿತವಾಗಿ ಈ ಸೌಲಭ್ಯ ದೊರೆಯಲಿದೆ ಎಂದು ಭರವಸೆ ನೀಡಿದರು.

ಮಾಜಿ ಶಾಸಕರಾದ ಎಂ.ಶಿವಾನಂದ್, ಅನಸೂಯಮ್ಮ, ನಗರಸಭೆ ಮಾಜಿ ಸದಸ್ಯ ಎಸ್.ಎಂ.ರಫೀಕ್, ನಾಗಭೂಷಣ್, ರಕ್ಷಿತ್ ರೆಡ್ಡಿ, ಬಿಸೇಗಾರಹಳ್ಳಿ ನಾಗೇಶ್, ನಾಗೇಶ್ ರೆಡ್ಡಿ, ಡಾನ್ಸ್ ಶ್ರೀನಿವಾಸ್, ಕೆ.ಎಂ.ಮುನೇಗೌಡ, ಉಮೇಶ್, ಪೇರೇಸಂದ್ರ ದಯಾನಂದ್, ಪುರಡಗಡ್ಡೆ ಮುನೇಗೌಡ ಇದ್ದರು. 

ಮುನಿಸು ಮರೆತು ವೇದಿಕೆ ಹಂಚಿಕೊಂಡ ಮುಖಂಡರು

ಶಾಸಕರ ವಿರುದ್ಧ ಬಹಿರಂಗವಾಗಿ ಆರೋಪಗಳನ್ನು ಮಾಡುತ್ತಿದ್ದ ಬೀಜ ನಿಗಮದ ಅಧ್ಯಕ್ಷ ನಂದಿ ಎಂ.ಅಂಜಿನಪ್ಪ ಅವರು ತಮ್ಮ ಮುನಿಸು ಮರೆತು ಪೇರೇಸಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡರು. ವೇದಿಕೆಯಲ್ಲಿ ಇಬ್ಬರೂ ಹಲವು ಚರ್ಚಿಸಿದರು.  ಯಲುವಳ್ಳಿ ರಮೇಶ್ ನಂದಿ ಆಂಜಿನಪ್ಪ ಮಾಜಿ ಶಾಸಕರಾದ ಶಿವಾನಂದ್ ಹಾಗೂ ಅನಸೂಯಮ್ಮ ಅವರ ನೇತೃತ್ವದಲ್ಲಿ ಸಭೆ ನಡೆಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುವುದು ಶಾಸಕ ಪ್ರದೀಪ್ ಈಶ್ವರ್ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.