ADVERTISEMENT

ಚಿಕ್ಕಬಳ್ಳಾಪುರ: ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿದ ಸೇನಾನಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 11:46 IST
Last Updated 6 ಜೂನ್ 2020, 11:46 IST
ಕಾರ್ಯಕ್ರಮದಲ್ಲಿ ಸಚಿವ ಡಾ.ಕೆ.ಸುಧಾಕರ್ ಅವರು ಕೊರೊನಾ ಯೋಧರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಡಾ.ಕೆ.ಸುಧಾಕರ್ ಅವರು ಕೊರೊನಾ ಯೋಧರನ್ನು ಸನ್ಮಾನಿಸಿದರು.   

ಚಿಕ್ಕಬಳ್ಳಾಪುರ: ‘ಇತಿಹಾಸ ಅವಲೋಕಿಸಿದರೆ ಯಾವ ವೈರಾಣು ಕೂಡ ಮನುಷ್ಯನನ್ನು ಗೆಲ್ಲಲ್ಲು ಸಾಧ್ಯವಾಗಿಲ್ಲ. ಈಗಲೂ ಅಷ್ಟೇ, ಕೊರೊನಾ ವೈರಸ್‌ ಸೋಂಕಿನ ವಿರುದ್ಧದ ಹೋರಾಟದಲ್ಲಿ ಅಂತಿಮ ವಿಜಯ ನಮ್ಮದೆ’ ಎಂದು ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ನಗರದಲ್ಲಿ ಶನಿವಾರ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ಆಯೋಜಿಸಿದ್ಧ ಕೊರೊನಾ ಯೋಧರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮುಂದಿನ ಕೆಲವೇ ತಿಂಗಳು ಅಥವಾ ಒಂದು ವರ್ಷದಲ್ಲಿ ನಾವು ಕೊರೊನಾ ಸೋಂಕಿನ ವಿರುದ್ಧ ಜಯ ಸಾಧಿಸುತ್ತೇವೆ ಎಂಬ ನಂಬಿಕೆ ಇದೆ. ಅಲ್ಲಿಯವರೆಗೆ ನಾವು ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಶುಚಿತ್ವಕ್ಕೆ ಒತ್ತು ನೀಡುವಂತಹ ಆರೋಗ್ಯಕರ ಜೀವನಶೈಲಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ’ ಎಂದು ತಿಳಿಸಿದರು.

ADVERTISEMENT

‘ದೇಶ ಹಿಂದೆಂದೂ ಇಂತಹ ವಿಪತ್ತು ಎದುರಿಸಿರಲಿಲ್ಲ. ಜಗತ್ತಿನ ಬಲಿಷ್ಠ ರಾಷ್ಟ್ರಗಳೇ ಕೋವಿಡ್‌ ನಿಯಂತ್ರಿಸಲು ಹೆಣಗಾಡುತ್ತಿವೆ. ನಮ್ಮಲ್ಲಿ ಅಮೆರಿಕಕ್ಕಿಂತ 15 ಪಟ್ಟು ಹೆಚ್ಚು ಜನ ಸಾಂದ್ರತೆ ಇದ್ದರೂ, ಉತ್ತಮ ನಿಯಂತ್ರಣಾ ಕ್ರಮಗಳಿಂದಾಗಿ ಮರಣ ಪ್ರಮಾಣ ಕನಿಷ್ಠ ಮಟ್ಟದಲ್ಲಿದೆ’ ಎಂದರು.

‘ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳಿಂದ ನಮ್ಮಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಗೊಳಿಸಿತು. ಇದರಿಂದ ಕೋವಿಡ್‌ ನಿಯಂತ್ರಣಕ್ಕೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಯಿತು’ ಎಂದು ಹೇಳಿದರು.

‘ನಮ್ಮಲ್ಲಿ ಒಗ್ಗಟ್ಟು ಇದ್ದರೆ ಎಂತಹ ವೈರಾಣು ಬಂದರೂ ಅದನ್ನು ಹಿಮ್ಮೆಟ್ಟಿಸಬಹುದು ಅಂತಹ ಒಗ್ಗಟ್ಟನ್ನು ದೇಶ ಪ್ರದರ್ಶಿಸಿದೆ. ಅದಕ್ಕೆ ಮೋದಿ ಅವರ ಸಮರ್ಥ ನಾಯಕತ್ವ ಕಾರಣ. ಸರ್ಕಾರದ ಜತೆಗೆ ಅಧಿಕಾರಿಗಳು ಕೈಜೋಡಿಸಿದಾಗ ಮಾತ್ರ ಯಾವುದೇ ನಿರ್ಧಾರಗಳ ಯಶಸ್ವಿ ಅನುಷ್ಠಾನಕ್ಕೆ ಸಾಧ್ಯವಿದೆ’ ಎಂದು ತಿಳಿಸಿದರು.

‘ಕರೋನಾ ವಿರುದ್ಧದ ಹೋರಾಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ. ಜತೆಗೆ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಪರಿಸ್ಥಿತಿ ನಿಯಂತ್ರಣಕ್ಕೆ ಶ್ರಮಿಸಿದ್ದಾರೆ. ಎಲ್ಲರನ್ನೂ ಅಭಿನಂದಿಸುವೆ. ಮಹಾರಾಷ್ಟ್ರದಿಂದ ವಾಪಾಸ್‌ ಬಂದ ಕಾರ್ಮಿಕರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿದೆ. ಶೀಘ್ರದಲ್ಲಿಯೇ ಜಿಲ್ಲೆ ಕೋವಿಡ್ ಮುಕ್ತವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮವನ್ನು ಮೆಚ್ಚಿ ಸಾರ್ವಜನಿಕರು ಅವರನ್ನು ಸನ್ಮಾನಿಸುತ್ತಿರುವ ಈ ವಿನೂತನ ಕಾರ್ಯಕ್ರಮ ಶ್ಲಾಘನೀಯ. ಇಂತಹ ಕಾರ್ಯಕ್ರಮವನ್ನು ಪ್ರತಿ ಜಿಲ್ಲೆಯಲ್ಲಿ ಆಯೋಜಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡುವೆ’ ಎಂದರು.

ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಕೊರೊನಾ ಯೋಧರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫೌಜಿ಼ಯಾ ತರನ್ನಮ್, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಘಟಕದ ಉಪಾಧ್ಯಕ್ಷ ಕೋಡಿರಂಗಪ್ಪ, ಖಜಾಂಚಿ ಎಂ.ಜಯರಾಂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.