ಚಿಕ್ಕಬಳ್ಳಾಪುರ: ಜಿ.ಪಂ ಮುಖ್ಯಲೆಕ್ಕಾಧಿಕಾರಿ ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣವು ಚಿಕ್ಕಬಳ್ಳಾಪುರದ ರಾಜಕೀಯವನ್ನು ತೀವ್ರವಾಗಿ ಕದಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರ ನಡುವೆ ಜಟಾಪಟಿಯನ್ನು ಹೆಚ್ಚಿಸಿದೆ.
ಶನಿವಾರ ನಡುರಾತ್ರಿ ಕಾಂಗ್ರೆಸ್ ಮುಖಂಡರು ಹಾಗೂ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರಾದ ವಿನಯ್, ಹಮೀಮ್ ಮತ್ತಿತರರು ‘ಸುಧಾಕರ್ ದಲಿತ ವಿರೋಧಿ’ ಎಂದು ಅವರ ಭಾವಚಿತ್ರವುಳ್ಳ ಪೋಸ್ಟರ್‌ಗಳನ್ನು ಅಂಟಿಸಲು ಮುಂದಾಗಿದ್ದನ್ನು ಸಂಸದರ ಬೆಂಬಲಿಗರು ತಡೆದರು.
ಈ ವೇಳೆ ಪೋಸ್ಟರ್ ಅಂಟಿಸಲು ಯತ್ನಿಸಿದವರು ಮತ್ತು ಸಂಸದ ಡಾ.ಕೆ.ಸುಧಾಕರ್ ಬೆಂಬಲಿಗರ ನಡುವೆ ತೀವ್ರ ವಾಗ್ವಾದ ನಡೆದಿದೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪೋಸ್ಟರ್ ಅಂಟಿಸಲು ಯತ್ನಿಸಿದವರನ್ನು ಠಾಣೆಗೆ ಕರೆದೊಯ್ದರು. ನಡುರಾತ್ರಿಯೇ ನೂರಕ್ಕೂ ಹೆಚ್ಚು ಬಿಜೆಪಿ ಮುಖಂಡರು ಠಾಣೆ ಬಳಿ ಸೇರಿದರು.
ಡಾ.ಕೆ.ಸುಧಾಕರ್ ವಿರುದ್ಧದ ಪೋಸ್ಟರ್‌ಗಳನ್ನು ಕಾರಿನಲ್ಲಿ ಇಟ್ಟುಕೊಂಡಿರುವುದು, ಪೋಸ್ಟರ್‌ಗಳನ್ನು ಹೊಂದಿದ್ದವರ ಜೊತೆ ಬಿಜೆಪಿ ಮುಖಂಡರ ಮಾತಿನ ಚಕಮಕಿ, ಪೊಲೀಸರ ಪ್ರವೇಶ, ಪೊಲೀಸರು ನಡೆದ ಬಿಜೆಪಿ ಮುಖಂಡರ ಅಸಮಾಧಾನ– ಸೇರಿದಂತೆ ರಾತ್ರಿ ನಡೆದ ರಾಜಕೀಯ ವಿದ್ಯಮಾನಗಳ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
‘ಸಂಸದ ಸುಧಾಕರ್ ಅವರನ್ನು ದಲಿತ ವಿರೋಧಿ ಎಂದು ಅಪಪ್ರಚಾರ ಮಾಡಲು ಶಾಸಕರ ಅಪ್ತರು ಮುಂದಾಗಿದ್ದಾರೆ’ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ವಿಡಿಯೊಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ದೂರು–ಪ್ರತಿದೂರು: ಪೋಸ್ಟರ್ ಅಂಟಿಸಲು ಯತ್ನಿಸಿದ ವೇಳೆ ತಡೆದಿದ್ದಕ್ಕೆ ತಮ್ಮ ಮೇಲೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ವಿನಯ್ ಬಂಗಾರಿ, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಹಮೀಮ್, ದೀಪು, ಸಲೀಂ ಮತ್ತು ಸುಧಾಕರ್ ಎಂಬುವವರ ವಿರುದ್ಧ ಡಾ.ಕೆ.ಸುಧಾಕರ್ ಅವರ ಬೆಂಬಲಿಗ ಮುನಿರಾಜು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದೆಡೆ ತಮ್ಮ ವಿರುದ್ಧ ಹಲ್ಲೆ ನಡೆಸಿದ್ದಾರೆ ಎಂದು ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ಮುಖಂಡ ಮುನಿರಾಜು ಮತ್ತಿತರರ ಮೇಲೆ ಹಮೀಮ್ ಪ್ರತಿದೂರು ದಾಖಲಿಸಿದ್ದಾರೆ.
ಹೀಗೆ ಚಿಕ್ಕಬಳ್ಳಾಪುರದಲ್ಲಿ ಪೋಸ್ಟರ್ ರಾಜಕೀಯ ನಾನಾ ರೀತಿಯ ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ.
ಪೊಲೀಸರ ನಡೆಗೆ ಬಿಜೆಪಿ ಆಕ್ರೋಶ
ಪೋಸ್ಟರ್ ವಿಚಾರವಾಗಿ ಪೊಲೀಸರ ನಡೆಗೆ ಶನಿವಾರ ರಾತ್ರಿ ಸ್ಥಳದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ‘ರೆಡ್‌ಹ್ಯಾಂಡ್ ಆಗಿ ಸಿಕ್ಕಿದ್ದರೂ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಿಲ್ಲ’ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ ನಗರಸಭೆ ಅಧ್ಯಕ್ಷ ಎ.ಗಜೇಂದ್ರ ನಗರ ಬಿಜೆಪಿ ಘಟಕದ ಅಧ್ಯಕ್ಷ ಆನಂದ್ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು. ಆಗ ನಗರ ಠಾಣೆ ಪಿಎಸ್‌ಐ ದೂರು ನೀಡಿ ಕಾನೂನು ಪ್ರಕಾರ ಕ್ರಮಕೈಗೊಳ್ಳಿ ಎಂದರು. ಪೋಸ್ಟರ್ ಅಂಟಿಸಲು ಮುಂದಾಗಿದ್ದವರನ್ನು ಠಾಣೆಗೆ ಕರೆದುಕೊಂಡು ಹೋದರು.
‘ದಲಿತ ವಿರೋಧಿ; ಮತ ಪಡೆಯಲು ಸಾಧ್ಯವಾಗುತ್ತಿತ್ತೇ
ಚಿಕ್ಕಬಳ್ಳಾಪುರ: ಸಂಸದ ಡಾ.ಕೆ. ಸುಧಾಕರ್ ಅವರು ದಲಿತ ವಿರೋಧಿ ಆಗಿದ್ದರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಿಂತ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 21 ಸಾವಿರ ಮತಗಳನ್ನು ಅಧಿಕವಾಗಿ ಪಡೆಯಲು ಸಾಧ್ಯವಾಗುತ್ತಿತ್ತೇ ಎಂದು ನಗರಸಭೆ ಉಪಾಧ್ಯಕ್ಷರೂ ಆದ ದಲಿತ ಸಮುದಾಯದ ಮುಖಂಡ ಜೆ.ನಾಗರಾಜ್ ತಿಳಿಸಿದ್ದಾರೆ. ಯಾರು ದಲಿತ ವಿರೋಧಿ ಯಾರು ಜನ ವಿರೋಧಿ ಎನ್ನುವುದನ್ನು ತೀರ್ಮಾನ ಮಾಡಬೇಕಾದವರು ಮತದಾರರು. ಅವರು ತೀರ್ಮಾನ ಮಾಡಿ ಆಗಿದೆ. ಈಗ ತೀರ್ಪು ನೀಡಲು ಯಾರಿಗೂ ಅಧಿಕಾರವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೃತ ಬಾಬು ಕುಟುಂಬಕ್ಕೆ ನ್ಯಾಯ ಸಿಗುವ ನಿಟ್ಟಿನಲ್ಲಿ ಎಲ್ಲರೂ ಹೋರಾಟ ನಡೆಸೋಣ. ಅವರು ದಲಿತ ವಿರೋಧಿ ಇವರು ಮತ್ತೊಬ್ಬರ ವಿರೋಧಿ ಎಂದು ತೀರ್ಪು ನೀಡಲು ಯಾರಿಗೆ ಏನು ಅಧಿಕಾರವಿದೆ. ಅನಗತ್ಯ ರಾಜಕೀಯ ಕೆಸರೆರಚಾಟದಿಂದ ಯಾವುದೇ ಉಪಯೋಗವಿಲ್ಲ. ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ಪರಿಸ್ಥಿತಿಗಳು ತುಂಬಾ ಹದಗೆಡುತ್ತಿವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.