ADVERTISEMENT

ಚಿಕ್ಕಬಳ್ಳಾಪುರ: ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ ಸಂಪನ್ನ

‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 23:11 IST
Last Updated 23 ನವೆಂಬರ್ 2025, 23:11 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆದ ಸತ್ಯಸಾಯಿ ಬಾಬಾ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರು
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆದ ಸತ್ಯಸಾಯಿ ಬಾಬಾ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರು   

ಚಿಕ್ಕಬಳ್ಳಾಪುರ: ಸತ್ಯ ಸಾಯಿಬಾಬಾ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿದ್ದ ನೂರು ದಿನಗಳ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ಕ್ಕೆ ಭಾನುವಾರ ತೆರೆ ಬಿದ್ದಿತ್ತು.

400ಕ್ಕೂ ಹೆಚ್ಚು ಕಲಾವಿದರು ಪ್ರಸ್ತುತಪಡಿಸಿದ ‘ಸಾಯಿ ಸಿಂಫನಿ ಆರ್ಕೆಸ್ಟ್ರಾ’ದ ಅದ್ಭುತ ಸಂಗೀತ ಪ್ರಸ್ತುತಿಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಭಾರತದ ಅತಿದೊಡ್ಡ ಸಿಂಫನಿ ಆರ್ಕೆಸ್ಟ್ರಾ ಎನ್ನುವ ಶ್ರೇಯಕ್ಕೆ ಪಾತ್ರವಾಗಿರುವ ‘ಸಾಯಿ ಸಿಂಫನಿ ಆರ್ಕೆಸ್ಟ್ರಾ’ದಲ್ಲಿ ವಿಶ್ವದ 60 ದೇಶಗಳ 450 ಕಲಾವಿದರು, 70 ಗಾಯಕರು ಮತ್ತು 200 ವಿದ್ಯಾರ್ಥಿಗಳು ಇದ್ದರು.

ಫಿಜಿ ಅಧ್ಯಕ್ಷ ರತು ನೈಕಮಾ ಲಾಲಬಲವು ಅವರ ಸಮಕ್ಷಮದಲ್ಲಿ ಸತ್ಯ ಸಾಯಿ ಬಾಬಾ ಅವರ 21 ಅಡಿ ಎತ್ತರ ಮಾರ್ಬಲ್ ವಿಗ್ರಹ ಅನಾವರಣಗೊಳಿಸಲಾಯಿತು. ಇದು ರೋಬೋಟ್ ಮೂಲಕ ಕೆತ್ತಲಾಗಿರುವ ವಿಶ್ವದ ಅತಿ ಎತ್ತರದ ಮಾರ್ಬಲ್ ವಿಗ್ರಹ. 

ADVERTISEMENT

ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮಾತನಾಡಿ, ‘100 ದೇಶಗಳಿಂದ ಬಂದ ಜನರು ಸತ್ಯಸಾಯಿ ಗ್ರಾಮದಲ್ಲಿ ಸೇವೆಗಾಗಿ ಒಗ್ಗೂಡಿರುವುದನ್ನು ನೋಡಿದಾಗ ಪ್ರೀತಿಗೆ ದೇಶ, ಭಾಷೆಯ ಗಡಿ ಇಲ್ಲ ಎನ್ನುವುದು ಮನವರಿಕೆ ಆಗುತ್ತದೆ ಎಂದರು.

ಸತ್ಯ ಸಾಯಿ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ಡಾ.ಶ್ರೀನಿವಾಸ್, ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ, ಬೆಂಗಳೂರಿನ ಅಕ್ಷಯ ಪಾತ್ರ ಫೌಂಡೇಶನ್ ಮತ್ತು ಇಸ್ಕಾನ್ ಅಧ್ಯಕ್ಷ ಮಧು ಪಂಡಿತ ದಾಸ, ಶ್ರೀಲಂಕಾದ ಬೌದ್ಧ ಸಂಸ್ಥೆ ಜೇತವನರಾಮ ಧಾರ್ಮಿಕ ಸಂಸ್ಥೆಯ ಗುರು ಥಿರೋ- ವೆನ್ ನಿವರ್ಥಪ ಥಿರೋ, ಶ್ರೀಲಂಕಾದ ಮಾಜಿ ಕ್ರಿಕೆಟಿಗ ಅರವಿಂದ್ ಡಿಸಿಲ್ವಾ, ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ, ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್.ನರಸಿಂಹಮೂರ್ತಿ ಉಪಸ್ಥಿತರಿದ್ದರು.

ಫಿಜಿ ಅಧ್ಯಕ್ಷ ರಟು ನಖಿಮಾ ಲಾಲಬಲವು ಮತ್ತು ಸದ್ಗುರು ಮಧುಸೂದನ ಸಾಯಿ ಅವರು ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.