ADVERTISEMENT

ಚಿಕ್ಕಬಳ್ಳಾಪುರ: ಚಲಕಾಯಲಪರ್ತಿ ಶಾಲಾ ಆವರಣದಲ್ಲಿ ಅನ್ಯ ಕಾಮಗಾರಿ ತಡೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 5:34 IST
Last Updated 30 ಸೆಪ್ಟೆಂಬರ್ 2025, 5:34 IST
ಚಲಕಾಯಲಪರ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಾಮಗಾರಿ
ಚಲಕಾಯಲಪರ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಾಮಗಾರಿ   

ಚಿಕ್ಕಬಳ್ಳಾಪುರ: ತಾಲ್ಲೂಕಿನ ದಿಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಲಕಾಯಲಪರ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯುತ್ತಿರುವ ನಿರ್ಮಾಣ ಚಟುವಟಿಕೆಗಳನ್ನು ತಡೆಯುವಂತೆ ಗ್ರಾಮಸ್ಥ ಹಾಗೂ ಎಸ್‌ಡಿಎಂಸಿ ಸಮಿತಿ ಗೌರವ ಸದಸ್ಯ ಗಂಗಾಧರ ರೆಡ್ಡಿ ಎನ್. ಶಿಕ್ಷಣಾಧಿಕಾರಿ ಮತ್ತು ಶಾಸಕ ಪ್ರದೀಪ್ ಈಶ್ವರ್ ಅವರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.

ಕೆಲಸಗಾರರು ತಿಳಿಸಿದಂತೆ ಶಾಲೆ ಆವರಣದಲ್ಲಿ ಬಾಬು ಜಗಜೀವನ ರಾಂ ಭವನದ ಕಾಮಗಾರಿ ಆರಂಭಿಸಲಾಗಿದೆ. ಮೇ 22ರಂದೇ ದಿಬ್ಬೂರು ಪಂಚಾಯಿತಿ ಅಧಿಕಾರಿಗಳಿಗೆ ಈ ವಿಚಾರ ಗಮನಕ್ಕೆ ತರಲಾಗಿತ್ತು. ಅವರು ಈ ವಿಚಾರ ತಮ್ಮ ಸುಪರ್ದಿಗೆ ಬರುವುದಿಲ್ಲ ಎಂದು ಮೌಖಿಕವಾಗಿ ತಿಳಿಸಿದ್ದರು. ಪತ್ರ ಸ್ವೀಕರಿಸಲು ನಿರಾಕರಿಸಿದ್ದರು. ಕೆಲವು ತಿಂಗಳು ಯಾವುದೇ ಕಾಮಗಾರಿ ನಡೆಸಿರಲಿಲ್ಲ. ಈಗ ದಸರಾ ರಜೆ ಘೋಷಿಸಿದ ಕೂಡಲೇ ಮತ್ತೆ ಕಾಮಗಾರಿ ಕೈಗೊಂಡಿದ್ದಾರೆ.

ಶಾಲೆ ಆವರಣ ಶೈಕ್ಷಣಿಕ ಚಟುವಟಿಕೆಗಳಿಗೆ ಸೀಮಿತವಾಗಿದೆ. ಆವರಣದಲ್ಲಿ ಶೈಕ್ಷಣಿಕೇತರ ಕಾಮಗಾರಿಗಳು ಜರುಗುತ್ತಿರುವುದು ಈ ಹಿಂದೆ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಮತ್ತು ಅಧಿಸೂಚನೆಗಳ ಉಲ್ಲಂಘನೆ. ಶಾಲಾ ಆವರಣದಲ್ಲಿ ಯಾವುದೇ ಶೈಕ್ಷಣಿಕೇತರ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದು ಎಸ್‌ಡಿಎಂಸಿ ಸಮಿತಿ ಸಹ ತೀರ್ಮಾನಿಸಿದೆ. ಹೀಗಿದ್ದರೂ ಗುತ್ತಿಗೆದಾರರು ಶಾಲೆಗೆ ಸಂಬಂಧಿಸಿದವರ ಗಮನಕ್ಕೆ ತಾರದೆಯೇ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದಾರೆ. ಈ ಕೂಡಲೇ ಈ ಕಾಮಗಾರಿ ನಿಲ್ಲಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.