ಚಿಕ್ಕಬಳ್ಳಾಪುರ: ಬೇಸಿಗೆ ಆರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಆರಂಭವಾಗಿದೆ. ಈಗಾಗಲೇ ಜಿಲ್ಲೆಯ ಐದು ತಾಲ್ಲೂಕುಗಳ 12 ಗ್ರಾಮ ಪಂಚಾಯಿತಿ ವ್ಯಾಪ್ತಿಯ 13 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಈ ಗ್ರಾಮಗಳಿಗೆ 13 ಬಾಡಿಗೆ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ.
ಜೊತೆಗೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಯೂ ನೀರಿನ ಸಮಸ್ಯೆ ಎದುರಾಗಿದೆ. ಚಿಂತಾಮಣಿ, ಶಿಡ್ಲಘಟ್ಟ, ಗೌರಿಬಿದನೂರು, ಬಾಗೇಪಲ್ಲಿ ನಗರ ವ್ಯಾಪ್ತಿಯ ಒಟ್ಟು 17 ವಾರ್ಡ್‌ಗಳಲ್ಲಿ ಈಗಲೇ ನೀರಿಗೆ ಹಾಹಾಕಾರ ಆರಂಭವಾಗಿದೆ. ಈ 17 ವಾರ್ಡ್‌ಗಳಿಗೆ 14 ಬಾಡಿಗೆ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಚಿಂತಾಮಣಿ ನಗರ ವ್ಯಾಪ್ತಿಯ ಎರಡು ವಾರ್ಡ್‌ಗಳಿಗೆ 1, ಶಿಡ್ಲಘಟ್ಟ ನಗರ ವ್ಯಾಪ್ತಿಯಲ್ಲಿ 5 ವಾರ್ಡ್ ವ್ಯಾಪ್ತಿಯಲ್ಲಿ 8 ಮತ್ತು ಗೌರಿಬಿದನೂರು ನಗರ ವ್ಯಾಪ್ತಿಯ 8 ವಾರ್ಡ್‌ಗಳ ವ್ಯಾಪ್ತಿಗೆ ಐದು ಖಾಸಗಿ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
ಇನ್ನೂ ಬೇಸಿಗೆ ಆರಂಭದಲ್ಲಿಯೇ ಗ್ರಾಮಗಳಲ್ಲಿ ಮತ್ತು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಬೇಸಿಗೆಯ ಧಗೆ ಹೆಚ್ಚಿದಂತೆ ಜಿಲ್ಲೆಯಲ್ಲಿ ನೀರಿನ ಹಾಹಾಕಾರವೂ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ.
ಇಲ್ಲಿಯವರೆಗೆ ಯಾವುದೇ ಪ್ರದೇಶದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ಪರಿಸ್ಥಿತಿ ತಲೆದೂರಿಲ್ಲ. ಮುಂದಿನ ದಿನಗಳಲ್ಲಿ 42 ಗ್ರಾಮಗಳಲ್ಲಿ, 21 ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ಇಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಡಳಿತವು ಸೂಚಿಸಿದೆ.
2025ರ ಜನವರಿಯಿಂದ ಡಿಸೆಂಬರ್‌ವರೆಗೆ ವಾಡಿಕೆ ಮಳೆ 735 ಮಿ.ಮೀ ಮಳೆ ಪ್ರಮಾಣವಿದೆ. ಜಿಲ್ಲೆಯಲ್ಲಿ 735 ಮಿ.ಮೀ ಮಳೆ ಆಗಿದೆ. ವಾಡಿಕೆ ಮಳೆಗಿಂತ ಕೊಂಚ ಅಧಿಕ ಮಳೆ ಆಗಿದ್ದರೂ ಕೂಡ ಜಿಲ್ಲೆಯಾದ್ಯಂತ ತಾಲ್ಲೂಕುವಾರು ಮಳೆ ಹಂಚಿಕೆ ಸಮರ್ಪಕವಾಗಿ ಆಗಿಲ್ಲ. ಈ ಕಾರಣದಿಂದ ಕೆಲವೆಡೆ ಬೇಸಿಗೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದು ಖಚಿತವಾಗಿದೆ.
ನಗರ ಹಾಗೂ ಗ್ರಾಮಾಂತರ ಪ್ರದೇಶ ಸೇರಿದಂತೆ ಜಿಲ್ಲೆಯ ಯಾವುದೇ ಭಾಗದಲ್ಲಿ ಜನರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗಬಾರದು. ಯಾವುದೇ ಗ್ರಾಮ, ವಾರ್ಡ್‌ಗಳಲ್ಲಿ ಸಮಸ್ಯೆ ಕಂಡುಬಂದರೆ ಕೂಡಲೇ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ನಂತರ ಖಾಸಗಿ ಕೊಳವೆ ಬಾವಿ ಮಾಲೀಕರ ಸಹಕಾರದಲ್ಲಿ ನೀರು ಪೂರೈಸುವ ವ್ಯವಸ್ಥೆ ಆಗಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರಸ್ತುತ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳು ಮತ್ತು ಮುಂದೆ ನೀರಿನ ಸಮಸ್ಯೆ ಎದುರಿಸಬಹುದಾದ ಗ್ರಾಮಗಳನ್ನು ಪಟ್ಟಿ ಸಹ ಮಾಡಲಾಗಿದೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಕೊಳವೆ ಬಾವಿಗಳು ವಿಫಲವಾಗುತ್ತಿದ್ದಲ್ಲ ಅವುಗಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಯಿಸಿ ನೀರು ಪೂರೈಸಲು ಜಿಲ್ಲಾಡಳಿತ ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.