ADVERTISEMENT

ತಂಬಾಕು ಮುಕ್ತ ಯುವ ಅಭಿಯಾನ |30 ಗ್ರಾಮ: ತಂಬಾಕು ಮುಕ್ತ ಗುರಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 7:18 IST
Last Updated 15 ಅಕ್ಟೋಬರ್ 2025, 7:18 IST
ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಕರಪತ್ರ ಹಾಗೂ ಭಿತ್ತಿ ಪತ್ರಗಳನ್ನು ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಧಿಕಾರಿ ಬಿಡುಗಡೆ ಮಾಡಿದರು
ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಕರಪತ್ರ ಹಾಗೂ ಭಿತ್ತಿ ಪತ್ರಗಳನ್ನು ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಧಿಕಾರಿ ಬಿಡುಗಡೆ ಮಾಡಿದರು   

ಚಿಕ್ಕಬಳ್ಳಾಪುರ: ತಂಬಾಕು ಮುಕ್ತ ಯುವ ಅಭಿಯಾನದಡಿ ಜಿಲ್ಲೆಯಲ್ಲಿ 30 ಗ್ರಾಮಗಳನ್ನು ತಂಬಾಕು ಮುಕ್ತ ಮಾಡಲು ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಂಬಾಕು ಮುಕ್ತ ಯುವ ಅಭಿಯಾನ, ರಾಷ್ಟ್ರೀಯ ರೇಬೀಸ್ ಮತ್ತು ಹಾವು ಕಡಿತ ನಿಯಂತ್ರಣ ಕುರಿತ ಸಭೆಯಲ್ಲಿ ಮಾತನಾಡಿದರು.

ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು. ಈ ಬಗ್ಗೆ ಜಾಗೃತಿ ಮೂಡಿಸಲು ‘ತಂಬಾಕು ಮುಕ್ತ ಯುವ ಅಭಿಯಾನ (3.0)’ ಅನ್ನು ಜಿಲ್ಲೆಯಲ್ಲಿ ಡಿ.9 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು.

ADVERTISEMENT

ಅಭಿಯಾನದಡಿ ಹಲವು ಕಾರ್ಯಕ್ರಮಗಳನ್ನು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. 400 ಶಾಲಾ ಕಾಲೇಜುಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳನ್ನಾಗಿಸಲು ಯೋಜಿಸಲಾಗಿದೆ. ಅಭಿಯಾನದ ಅವಧಿಯಲ್ಲಿ 16 ಕೋಟ್ಪಾ ದಾಳಿಗಳನ್ನು ಹಮ್ಮಿಕೊಂಡು ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದು ವಿವರಿಸಿದರು.

9,478 ಜನರಿಗೆ ನಾಯಿ ಕಡಿತ: ನಾಯಿ ಕಚ್ಚುವಿಕೆ ರೇಬಿಸ್‌ ಸೋಂಕನ್ನು ಹರಡುತ್ತದೆ. ಇದು ಮಾರಣಾಂತಿಕ ಕಾಯಿಲೆ. ಯಾವುದೇ ವ್ಯಕ್ತಿ ನಾಯಿ ಕಡಿತಕ್ಕೆ ಒಳಗಾದ ತಕ್ಷಣ ವೈದ್ಯಕೀಯ ಸಹಾಯ ಪಡೆಯಬೇಕು. ವಿಶೇಷವಾಗಿ ಸಾಕು ಪ್ರಾಣಿಗಳಿಗೆ ಲಸಿಕೆ ಮಾಡಿಸಬೇಕು ಎಂದು ‌ಸಾರ್ವಜನಿಕರಲ್ಲಿ  ಮನವಿ ಮಾಡಿದರು.

ಜಿಲ್ಲೆಯಲ್ಲಿ  2025ರ ಇಲ್ಲಿಯವರೆಗೆ 9,478 ಜನರಿಗೆ ನಾಯಿ ಕಚ್ಚಿದೆ. 739 ಹಾವು ಕಡಿತದ ಪ್ರಕರಣ ದಾಖಲಾಗಿವೆ. ಈ  ಪೈಕಿ ಐವರು ನಿಧನರಾಗಿದ್ದಾರೆ. ಮುಂದಿನ ದಿನಗಳಲ್ಲಿ ನಾಯಿ ಮತ್ತು ಹಾವಿನ ಕಡಿತದಿಂದ ಸಾವು ಉಂಟಾಗದಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹಾವುಗಳು ವಿಷಕಾರಿ ಮತ್ತು ವಿಷರಹಿತ ಎರಡೂ ಆಗಿರುತ್ತವೆ. ಹಾವು ಕಚ್ಚಿದ ಸಂದರ್ಭಗಳಲ್ಲಿ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಬೇಕು. ಹಾವು ಕಚ್ಚಿದ ದೇಹದ ಭಾಗದಲ್ಲಿರುವ ಪಾದರಕ್ಷೆ, ಕಾಲುಂಗುರ, ಬೆಲ್ಡ್ ಆಭರಣಗಳು, ವಾಚ್, ಬಿಗಿಯಾದ ಬಟ್ಟೆಯನ್ನು ಕಳಚಿ ಆಂಬುಲೆನ್ಸ್ ಅಥವಾ ಇನ್ನಿತರ ವಾಹನದಲ್ಲಿ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದರು.

ಈ ಬಗ್ಗೆ ಶಾಲಾ, ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ನಾಯಿ ಮತ್ತು ಹಾವು ಕಡಿತ ಕಡಿಮೆ ಮಾಡಲು ಕ್ರಮ ವಹಿಸಿ ಅರಿವು  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು  ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ಮಹೇಶ್ ಕುಮಾರ್, ಆರ್.ಸಿ.ಎಚ್.ಒ ಅಧಿಕಾರಿ  ಡಾ. ಜಿ.ವಿ. ಸಂತೋಷ್ ಬಾಬು, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಎಚ್.ಎನ್. ರಂಗಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ್ ಹಾಗೂ ವಿವಿಧ ಇಲಾಖೆಯ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.