ADVERTISEMENT

ಚಿಕ್ಕಬಳ್ಳಾಪುರಕ್ಕೆ ‘ಅತ್ಯುತ್ತಮ ಪ್ರದರ್ಶನ’ದ ಮನ್ನಣೆ

ಆದಿ ಕರ್ಮಯೋಗಿ ಮತ್ತು ಧರ್ತಿ ಆಬ ಜನಭಾಗಿದರಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 2:59 IST
Last Updated 19 ಅಕ್ಟೋಬರ್ 2025, 2:59 IST
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆದಿ ಕರ್ಮಯೋಗಿ ಮತ್ತು ದರ್ತಿ ಆಬ ಜನಭಾಗಿದರಿ ಅಭಿಯಾನದ ಪ್ರಶಂಸನಾ ಪತ್ರಗಳನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸ್ವೀಕರಿಸಿದರು 
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆದಿ ಕರ್ಮಯೋಗಿ ಮತ್ತು ದರ್ತಿ ಆಬ ಜನಭಾಗಿದರಿ ಅಭಿಯಾನದ ಪ್ರಶಂಸನಾ ಪತ್ರಗಳನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸ್ವೀಕರಿಸಿದರು    

ಚಿಕ್ಕಬಳ್ಳಾಪುರ: ಪರಿಶಿಷ್ಟ ಪಂಗಡ ಹಾಗೂ ಬುಡಕಟ್ಟು ಜನರು ವಾಸಿಸುವ ಪ್ರದೇಶಗಳ ಸಮಗ್ರ ಅಭಿವೃದ್ಧಿ ಹಾಗೂ ಸಮುದಾಯದ ಸಬಲೀಕರಣಕ್ಕೆ ರೂಪಿಸಿರುವ ಆದಿ ಕರ್ಮಯೋಗಿ ಮತ್ತು ದರ್ತಿ ಆಬ ಜನಭಾಗಿದರಿ ಅಭಿಯಾನಗಳಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ ಉತ್ತಮ ಪ್ರದರ್ಶನ ತೋರಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರಕ್ಕೆ ‘ಅತ್ಯುತ್ತಮ  ಪ್ರದರ್ಶನ ಜಿಲ್ಲೆ’ ಎನ್ನುವ ಪ್ರಶಂಸಾ ಪ್ರಮಾಣ ಪತ್ರ ದೊರೆತಿದೆ.

ಶುಕ್ರವಾರ (ಅ.17) ನವದೆಹಲಿಯಲ್ಲಿ ನಡೆದ ಆದಿ ಕರ್ಮಯೋಗಿ ಅಭಿಯಾನದ ರಾಷ್ಟ್ರೀಯ ಸಮ್ಮೇಳನದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಈ ಎರಡೂ ಪ್ರಶಂಸ ಪತ್ರಗಳನ್ನು ಸ್ವೀಕರಿಸಿದರು.

ಪರಿಶಿಷ್ಟ ಪಂಗಡಗಳು, ಬುಡಕಟ್ಟು ಸಮುದಾಯಗಳನ್ನು ಸಬಲೀಕರಣಗೊಳಿಸಿ, ಅವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ತಲುಪಿಸಲು ಆದಿ ಕರ್ಮಯೋಗಿ ಮತ್ತು ದರ್ತಿ ಆಬ ಜನಭಾಗಿದರಿ ಅಭಿಯಾನವನ್ನು ಕೇಂದ್ರ ಸರ್ಕಾರವು ರೂಪಿಸಿದೆ.

ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 31 ಗ್ರಾಮಗಳನ್ನು ಆದಿ ಕರ್ಮಯೋಗಿ ಅಭಿಯಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಗ್ರಾಮಗಳ ಒಟ್ಟು ಜನಸಂಖ್ಯೆಯಲ್ಲಿ ಶೇ 50ಕ್ಕಿಂತಲೂ ಹೆಚ್ಚು ಜನರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರುತ್ತಾರೆ.

ಈ ಗ್ರಾಮಗಳಲ್ಲಿ ನಡೆಸಬೇಕಾದ ಅಭಿವೃದ್ಧಿ ಕಾಮಗಾರಿಗಳು, ಅವುಗಳಿಗೆ ಸಂಬಂಧಿಸಿದ ಕ್ರಿಯಾ ಯೋಜನೆ ತಯಾರಿ, ಚಟುವಟಿಕೆಗಳು, ಕಾರ್ಯಕ್ರಮ ರೂಪಿಸುವಲ್ಲಿ ಕೈಗೊಂಡಿರುವ ಕ್ರಮಗಳನ್ನು ಆಧರಿಸಿ ಈ ಪ್ರಶಂಸಾ ಪತ್ರ ಚಿಕ್ಕಬಳ್ಳಾಪುರಕ್ಕೆ ದೊರೆತಿದೆ. 

ಪರಿಶಿಷ್ಟ ಪಂಗಡದ ಶಿಕ್ಷಣ, ವಸತಿಶಾಲೆ, ವಸತಿ ಹಾಗೂ ಇನ್ನಿತರ ಸೌಲಭ್ಯಕ್ಕೆ ವಿವಿಧ ಯೋಜನೆಗಳನ್ನು ಈ ಅಭಿಯಾನದಡಿ ಹಮ್ಮಿಕೊಳ್ಳಲಾಗುತ್ತದೆ. ವಿಧವಾ ವಿವಾಹ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಬುಡಕಟ್ಟು ಕಲ್ಯಾಣ ಇಲಾಖೆ ಜತೆಗೆ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮುಂತಾದ ಇಲಾಖೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನೂ ಅನುಷ್ಠಾನಗೊಳಿಸಿ ಆ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಹೀಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿಯಾನದ ಮೊದಲ ಹೆಜ್ಜೆಗೆ ಪ್ರಶಂಸೆ ದೊರೆತಿದೆ.

ಕೇಂದ್ರ ಸರ್ಕಾರವು ದೇಶದಲ್ಲಿ ಒಂದು ಲಕ್ಷ ಹಳ್ಳಿಗಳನ್ನು ಈ ಅಭಿಯಾನದಡಿ ಅಭಿವೃದ್ಧಿಗೊಳಿಸುವ ಗುರಿ ಹೊಂದಿದೆ. ಶೇ 60ರಷ್ಟು ಅನುದಾನವು ಕೇಂದ್ರ ಸರ್ಕಾರದ್ದಾದರೆ ಶೇ 40ರಷ್ಟು ಅನುದಾನ ರಾಜ್ಯ ಸರ್ಕಾರದ್ದಾಗಿರುತ್ತದೆ.  

‘ಜಿಲ್ಲೆಯಲ್ಲಿ ಈ ಅಭಿಯಾನದ ಅಡಿಯಲ್ಲಿ 17 ಇಲಾಖೆಗಳನ್ನು ಗುರುತಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ 7 ಇಲಾಖೆಗಳ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಪರಿಶಿಷ್ಟ ಪಂಗಡ ಮತ್ತು ಬುಡಕಟ್ಟು ಸಮುದಾಯಗಳ ಅಭಿವೃದ್ಧಿ, ವ್ಯಕ್ತಿತ್ವ ವಿಕಸನ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ತರಬೇತಿಯಲ್ಲಿ ತಿಳಿಸಲಾಗಿದೆ’ ಎಂದು ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರದೀಪ್ ಪಾಟೀಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಯೋಜನೆಯಡಿ ಗುರುತಿಸಿರುವ ಗ್ರಾಮಗಳ ಪಿಡಿಒಗಳು, ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇವೆ ಎಂದರು. 

ಮತ್ತಷ್ಟು ಉತ್ಸಾಹ; ಎಲ್ಲರ ಸಹಕಾರ ಕೇಂದ್ರ ಸರ್ಕಾರವು ನೀಡಿರುವ ಈ ಪ್ರಶಂಸೆಯು ನಮಗೆ ಕೆಲಸ ಮಾಡಲು ಮತ್ತಷ್ಟು ಉತ್ಸಾಹ ದೊರೆಯುವಂತೆ ಮಾಡಿದೆ. ಸಂಸದರು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲರ ಸಹಕಾರದಲ್ಲಿ ಈ ಗ್ರಾಮಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಪ್ರದೀಪ್ ಪಾಟೀಲ್ ತಿಳಿಸಿದರು.  ಹೀಗೆ ನಾವು ರೂಪಿಸಿರುವ ಕ್ರಿಯಾ ಯೋಜನೆ ಇತರ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳಿಗೆ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿದೆ. ಅಲ್ಲಿಂದ ಅನುಮೋದನೆಯಾದ ನಂತರ ಕಾಮಗಾರಿಗಳು ಆರಂಭವಾಗುತ್ತವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.