ADVERTISEMENT

ಕುಲುಮೆ ಉರಿದಷ್ಟು ದಿನ ಹೊಟ್ಟೆ ತುಂಬ್ತದೆ

ಆಧುನಿಕ ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ನಲುಗುತ್ತಿರುವ ಕುಲಕಸುಬು ಕಂಬಾರಿಕೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 11:31 IST
Last Updated 25 ಜನವರಿ 2020, 11:31 IST
ನಗರದ ಚಾಮರಾಜಪೇಟೆಯಲ್ಲಿ ಕುಲುಮೆ ಕೆಲಸದಲ್ಲಿ ತೊಡಗಿರುವ ಮಂಜುನಾಥ ಆಚಾರಿ
ನಗರದ ಚಾಮರಾಜಪೇಟೆಯಲ್ಲಿ ಕುಲುಮೆ ಕೆಲಸದಲ್ಲಿ ತೊಡಗಿರುವ ಮಂಜುನಾಥ ಆಚಾರಿ   

ಚಿಕ್ಕಬಳ್ಳಾಪುರ: ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ಕುಲ ಕಸಬುಗಳು ಮೂಲೆಗುಂಪಾಗಿವೆ. ಹೀಗೆ ನಿರ್ಲಕ್ಷ್ಯಕ್ಕೆ ಒಳಗಾದ ವೃತ್ತಿಗಳಲ್ಲಿ ಕುಲುಮೆ ಕೆಲಸವೂ ಒಂದು. ಈ ಪಾರಂಪರಿಕ ವೃತ್ತಿ ಕಣ್ಮರೆ ಆಗುತ್ತಿರುವ ಹೊತ್ತಿನಲ್ಲಿ ಮಂಜುನಾಥ ಆಚಾರಿ ಅದನ್ನು ಮುಂದುವರಿಸಿದ್ದಾರೆ.

ನಗರದ ಚಾಮರಾಜಪೇಟೆಯ ರೈಲ್ವೆ ನಿಲ್ದಾಣ ಬಳಿ ಕುಲಮೆ ಕೆಲಸ ಮಾಡುವ ಮಂಜುನಾಥ ಪೂರ್ವಿಕರ ಬಳುವಳಿಯಾದ ಕುಲುಮೆ ಕಾಯಕದಲ್ಲಿ ತೊಡಗಿದ್ದಾರೆ. ಐದು ದಶಕಗಳಿಂದ ಕೃಷಿ ಉಪಕರಣಗಳನ್ನು ದೇಸಿ ಪದ್ಧತಿಯಲ್ಲಿ ತಯಾರಿಸುತ್ತಿದ್ದಾರೆ. ಆ ಮೂಲಕ ರೈತರಿಗೂ ನೆರವಾಗುತ್ತಿದ್ದಾರೆ.

‘ನಮ್ದು ವಿಶ್ವಕರ್ಮ ಸಮುದಾಯ. ಹಾಗಾಗಿ ಈ ಕುಲುಮೆ ಕೆಲಸ ಹಿರಿಯರಿಂದ ನನ್ನ ಕೈಗೆ ಬಂದಿದೆ. ಈ ಕಸುಬು ಬಿಟ್ಟರೆ ನನಗೆ ಬೇರೆ ಗೊತ್ತಿಲ್ಲ. ಇದನ್ನೇ ದೇವರು ಅಂತ ನಂಬಿಕೊಂಡಿರುವ ನಾವು ಬೆಳಿಗ್ಗೆ 8 ಗಂಟೆಗೆ ಬಂದು ಪೂಜೆ ಮಾಡಿ, ಕುಲುಮೆ ಕೆಲಸ ಆರಂಭಿಸಿದರೆ ಸಂಜೆ ಐದಾರು ಗಂಟೆಗೆ ಮನೆಗೆ ಹೋಗುತ್ತೇನೆ’ ಎನ್ನುತ್ತಾರೆ ಮಂಜುನಾಥ ಆಚಾರಿ ಅವರು.

ADVERTISEMENT

ವ್ಯವಸಾಯಕ್ಕೆ ಬೇಕಾದ ಕುಡುಗೋಲು, ಮಚ್ಚು, ಕೊಡಲಿ, ಅಗೆಯೊ ಗುದ್ದಲಿ, ಪಿಕಾಸಿ, ಗಡಾರಿ, ಸಲಿಕೆ, ಬಾಚಿ, ಉಳಿಗಳು, ನೇಗಿಲು ಚಿಪ್ಪುಗಳು, ಕಳೆ ತೆಗೆಯೊ ಬರವಾರೆಗಳನ್ನು ಮಾಡಿ ಕೊಡ್ತೇನೆ ಎಂದರು.

ಮೊದಲು ರೈತರು ವ್ಯವಸಾಯಕ್ಕೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಅದಕ್ಕೆ ಪ್ರತಿಯಾಗಿ ಧಾನ್ಯ ಕೊಡುತ್ತಿದ್ದರು. ರೈತರ ಮನೆಗಳಿಗೆ ಹೋದರೆ ಪ್ರೀತಿಯಿಂದ ಬರಮಾಡಿಕೊಂಡು ಊಟ ಬಡಿಸಿ ಅಕ್ಕರೆ ತೋರುತ್ತಿದ್ದರು. ಉಳುಮೆ ಯಂತ್ರಗಳು ಬಂದ ಮೇಲೆ ಕೃಷಿ ಪದ್ಧತಿ ಬದಲಾಗಿದೆ ಎಂದು ವಿವರಿಸಿದರು.

ಮೂರು ವರ್ಷಗಳ ಹಿಂದೆ ಒಂದು ದಿನಕ್ಕೆ ₹ 3 ಸಾವಿರದ ಆಸುಪಾಸು ಸಂಪಾದನೆ ಆಗುತ್ತಿತ್ತು. ಬೆಳಗಿನ ಜಾವವೇ ಕೃಷಿಕರು ನಮ್ಮ ಕುಲುಮೆ ಬಳಿ ಸಲಕರಣೆಗಳನ್ನು ಹದ ಮಾಡಿಸಿಕೊಳ್ಳಲು ಕಾಯುತ್ತಿದ್ದರು. ಈಗ ದಿನವೀಡಿ ಕುಲುಮೆ ಬಳಿ ಕೂತರೂ ₹ 300 ಹಣ ಸಂಪಾದನೆ ಆಗುತ್ತಿಲ್ಲ. ಇದನ್ನು ನಂಬಿಯೇ ಐದು ದಶಕಗಳಿಂದ ಜೀವನ ಸಾಗಿಸಿದ್ದೇನೆ ಎಂದು ತಿಳಿಸಿದರು.

ಇದೀಗ ಕೂಲಿ ಕಾರ್ಮಿಕರ ಕೊರತೆಯಿಂದ ಟ್ರಾಕ್ಟರ್, ಟಿಲ್ಲರ್, ಜೆಸಿಬಿಗಳ ಮೂಲಕ ಜಮೀನು ಹದ ಮಾಡಿ ಬೆಳೆ ತೆಗೆಯುತ್ತಿದ್ದಾರೆ. ಹಾಗಾಗಿ ಹಳೇ ಕೃಷಿ ಪರಿಕರಗಳನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕುಲುಮೆ ಕೆಲಸ ಕಡಿಮೆಯಾಗಿದೆ ಎಂದು ಅಳಲು ತೋಡಿಕೊಂಡರು.

ಮೂಟೆ ಇದ್ದಿಲಿಗೆ ಸಾವಿರ!

ಕುಲುಮೆದಾರರು ಕಬ್ಬಿಣ ಕಾಯಿಸಲು ಇದ್ದಿಲು ಅವಶ್ಯ. ಕೆಲವೊಮ್ಮೆ ಬೇಡಿಕೆಗೆ ತಕ್ಕಂತೆ ಮೂಟೆಗೆ ಸಾವಿರ ಕೊಟ್ಟರೂ ಇದ್ದಿಲು ಸಿಗುತ್ತಿಲ್ಲ. ಹಳ್ಳಿ, ನಗರಗಳಲ್ಲಿ ಅಡುಗೆ ತಯಾರಿಸಲು ಸಿಲಿಂಡರ್ ಗ್ಯಾಸ್ ಬಳಕೆ ಮಾಡುತ್ತಿರುವುದರಿಂದ ಇದ್ದಿಲು ಸಿಗುವುದು ಅಪರೂಪವಾಗಿದೆ. ಕಸಬು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಮಂಜುನಾಥ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.