ADVERTISEMENT

ಚಿಕ್ಕಬಳ್ಳಾಪುರ | ‘ಪ್ರತಿಜ್ಞಾ ದಿನ’ದ ನೇರ ಪ್ರಸಾರ: 120 ಕಡೆಗಳಲ್ಲಿ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 14:09 IST
Last Updated 2 ಜುಲೈ 2020, 14:09 IST
ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಜ್ಞೆ ಸ್ವೀಕರಿಸಿದರು.
ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಜ್ಞೆ ಸ್ವೀಕರಿಸಿದರು.   

ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ಗುರುವಾರ ನಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮೂವರು ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭ ‘ಪ್ರತಿಜ್ಞಾ ದಿನ’ದ ನೇರ ಪ್ರಸಾರದ ವೀಕ್ಷಣೆಗೆ ಕಾಂಗ್ರೆಸ್‌ ವತಿಯಿಂದ ಜಿಲ್ಲೆಯಾದ್ಯಂತ ಸುಮಾರು 120 ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಕೋವಿಡ್–19 ಕಾರಣಕ್ಕೆ ಪದಗ್ರಹಣ ವೀಕ್ಷಣೆಗಾಗಿ ವರ್ಚುವಲ್, ಜೂಮ್, ಅಂತರ್ಜಾಲ, ಸುದ್ದಿ ಮಾಧ್ಯಮಗಳ ಮೂಲಕ ಜಿಲ್ಲೆಯ ವಿವಿಧೆಡೆ ವ್ಯವಸ್ಥೆ ಮಾಡಲಾಗಿತ್ತು. ಹಲವು ನಾಯಕರು ತಮ್ಮ ತಮ್ಮ ಮನೆ ಹಾಗೂ ಕಚೇರಿಗಳಲ್ಲಿ ಕುಳಿತು ವೀಕ್ಷಿಸಿದರು. ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಪ್ರತಿಜ್ಞೆ ಮಾಡಿದರು.

ನಗರದ ಎಂ.ಜಿ.ರಸ್ತೆಯಲ್ಲಿರುವ ಕೆ.ವಿ ಫಾರ್ಮಸಿ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ‘ಕಾಂಗ್ರೆಸ್‌ಗೆ ರಾಜ್ಯದಲ್ಲಿ ಭದ್ರ ಬುನಾದಿ ಹಾಕಬೇಕೆಂಬ ತವಕದಲ್ಲಿದ್ದ ಡಿ.ಕೆ. ಶಿವಕುಮಾರ್ ಅವರು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

ADVERTISEMENT

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸರ್ಕಾರವನ್ನು, ಆ ಸರ್ಕಾರದ ಶಾಸಕರುಗಳನ್ನು ಹಣ ಮತ್ತು ಅಧಿಕಾರದ ಆಸೆ ತೋರಿಸಿ ಸರ್ಕಾರವನ್ನು ಬೀಳಿಸುವುದು ಬಿಜೆಪಿ ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ. ಮುಂಬರುವ ದಿನಗಳಲ್ಲಿ ಬಿಜೆಪಿ ತಕ್ಕ ಪಾಠ ಕಲಿಯಲಿದೆ’ ಎಂದು ತಿಳಿಸಿದರು.

‘ಶಿವಕುಮಾರ್ ಅವರ ಸಾರಥ್ಯದಿಂದಾಗಿ ಕಾಂಗ್ರೆಸ್‌ನಲ್ಲಿ ಹೊಸ ಚೈತನ್ಯ ಮೂಡಿದೆ. ಪಕ್ಷದ ಕಾರ್ಯಕರ್ತರು ಸಂಘಟನೆಗೆ ಹಿಂದಿಗಿಂತಲೂ ಹೆಚ್ಚಿನ ಒತ್ತು ನೀಡಬೇಕು. ಆಡಳಿತ ಪಕ್ಷದ ವೈಫಲ್ಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು’ ಎಂದರು. ಮುಖಂಡರಾದ ಕೆ.ವಿ.ನವೀನ್‌ ಕಿರಣ್, ಮಮತಾಮೂರ್ತಿ, ರಾಮಕೃಷ್ಣಪ್ಪ ಹಾಜರಿದ್ದರು.

ನಗರದ ಬಿ.ಬಿ.ರಸ್ತೆಯಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎಸ್‌.ರಫೀವುಲ್ಲಾ ಅವರು ಪ್ರತಿಜ್ಞಾ ದಿನದ ಕಾರ್ಯಕ್ರಮ ವೀಕ್ಷಣೆಗಾಗಿ ಬೃಹತ್‌ ಎಲ್ಇಡಿ ಪರದೆ ವ್ಯವಸ್ಥೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಮುಖಂಡ ನಂದಿ ಎಂ.ಆಂಜಿನಪ್ಪ, ನಗರಸಭಾ ಸದಸ್ಯ ಅಫ್ಜಲ್, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಆಜಂ ಪಾಷ, ಮುಖಂಡರಾದ ಕೆ.ರಾಜೇಂದ್ರರೆಡ್ಡಿ, ಇಬ್ರಾಹೀಂ ಖಲೀಲ್, ಮೌಲಾ, ಸಾದಿಕ್ ಅಲಿ, ಶಂಕರ, ಮಂಜುನಾಥ, ಜಮೀಲ್ ಪಾಷಾ ಹಾಜರಿದ್ದರು.

ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೆರೇಸಂದ್ರ ಕ್ರಾಸ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ‘ವಿದ್ಯಾರ್ಥಿ ಜೀವನದಿಂದ ಈವರೆಗೆ ಹಲವು ಹುದ್ದೆಗಳನ್ನು ನಿಭಾಯಿಸಿಕೊಂಡು ಬಂದಿರುವ ಶಿವಕುಮಾರ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ತಮ್ಮ ಇಡೀ ಜೀವನವನ್ನೇ ಪಕ್ಷಕ್ಕೆ ಧಾರೆ ಎರೆದಿದ್ದಾರೆ’ ಎಂದು ಹೇಳಿದರು.

‘ಶಿವಕುಮಾರ್ ಅವರನ್ನು ರಾಜಕೀಯವಾಗಿ ಹಣಿದು ಕಿರುಕುಳ ನೀಡುವ ಉದ್ದೇಶದಿಂದ ಬಿಜೆಪಿಯವರು ಇ.ಡಿ ಮತ್ತು ಐ.ಟಿ ದಾಳಿ ನಡೆಸಿದರೂ ಅದನ್ನೆಲ್ಲ ಅವರು ಧೈರ್ಯ, ದಿಟ್ಟತನದಿಂದ ಎದುರಿಸಿದರು. ದೇಶದಲ್ಲಿ ಪಕ್ಷ ಹಲವಾರು ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದಾಗ ಮುಂದೆ ನಿಂತು ಸಹಕಾರ ನೀಡುತ್ತ ಬಂದಿದ್ದಾರೆ’ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಆಂಜನೇಯ ರೆಡ್ಡಿ, ಡಿ.ವಿ.ರಾಮಕೃಷ್ಣ, ಗ್ರಾಮ ಪಂಚಾಯಿತಿ ಸದಸ್ಯ ಬಾಬು, ನವೀನ್, ವೆಂಕಟೇಶ್, ವೆಂಕಟರೆಡ್ಡಿ, ಡಿ.ವಿ.ಆರ್.ರಾಜೇಶ್, ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.