ಚಿಕ್ಕಬಳ್ಳಾಪುರ: ಎಲೆಕ್ಟ್ರಿಕ್ ವಾಹನಗಳ (ಇ.ವಿ) ಬಳಕೆಯಿಂದ ಪರಿಸರ ಮಾಲಿನ್ಯ ಸಂಪೂರ್ಣವಾಗಿ ತಗ್ಗುವುದಿಲ್ಲ. ಎಲೆಕ್ಟ್ರಿಕ್ ವಾಹನಗಳು ನಗರ ಪ್ರದೇಶಗಳಿಗೆ ಮಾತ್ರ ಅನುಕೂಲ ತರಬಹುದು ಎಂದು ಈಶಾ ಯೋಗ ಕೇಂದ್ರದ ಸದ್ಗುರು ಜಗ್ಗಿ ವಾಸುದೇವ್ ತಿಳಿಸಿದರು.
ತಾಲ್ಲೂಕಿನ ಆವಲಗುರ್ಕಿಯ ಈಶಾ ಯೋಗ ಕೇಂದ್ರದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು ಇ.ವಿ ವಾಹನಗಳನ್ನು ಓಡಿಸುತ್ತಿದ್ದೇವೆ. ಪರಿಸರ ಕಾಪಾಡುತ್ತಿದ್ದೇವೆ ಎಂದು ನಗರವಾಸಿಗಳು ಹೇಳುತ್ತಾರೆ. ಹೊಗೆ ಇಲ್ಲದ ಕಾರಣ ಇದು ನಗರಕ್ಕೆ ಒಳ್ಳೆಯದಷ್ಟೇ. ಆದರೆ ಒಟ್ಟಾರೆ ಭೂಮಿಯ ಪರಿಸರಕ್ಕೆ ಎಷ್ಟು ಅನುಕೂಲ ಎಂದು ನೋಡಿದರೆ ಆಶಾದಾಯವಾಗಿಲ್ಲ’ ಎಂದು ಹೇಳಿದರು.
ಒಂದು ಕೆ.ಜಿ ಕಲ್ಲಿದ್ದಲು ಅಥವಾ ಒಂದು ಲೀಟರ್ ಡಿಸೇಲ್ ಬಳಸಿ ಪಡೆಯುವ ಶಕ್ತಿಗೂ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಬಳಕೆ ಆಗುವ ವಿದ್ಯುತ್ ಶಕ್ತಿಯನ್ನು ಲೆಕ್ಕಾಚಾರ ಮಾಡಿದರೆ ಇದು ತಿಳಿಯುತ್ತದೆ ಎಂದರು.
ಮನಸ್ಸಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಈಶಾ ಸಂಸ್ಥೆಯು ‘ಮಿರ‍್ಯಾಕಲ್ ಆಫ್ ಮೈಂಡ್’ ಎಂಬ ಆ್ಯಪ್ ಅಭಿವೃದ್ಧಿಗೊಳಿಸುತ್ತಿದೆ. 2025ರ ಫೆಬ್ರುವರಿ ಅಥವಾ ಮಾರ್ಚ್‌ನಲ್ಲಿ ಆ್ಯಪ್ ಲೋಕಾರ್ಪಣೆಗೊಳ್ಳಲಿದ್ದು ವಿಶ್ವದಾದ್ಯಂತ 300 ಕೋಟಿ ಜನರನ್ನು ತಲುಪುವ ಗುರಿ ಇದೆ ಎಂದರು.
ವೈಜ್ಞಾನಿಕ ಸಂಶೋಧನೆ ಮತ್ತು ವಿಚಾರಗಳನ್ನು ಆಧರಿಸಿ ಒಂದೂವರೆ ವರ್ಷದಿಂದ ಆ್ಯಪ್ ಅಭಿವೃದ್ಧಿಗೊಳಿಸಲಾಗುತ್ತಿದೆ. ನಿತ್ಯ 12ರಿಂದ 15 ನಿಮಿಷ ಇಲ್ಲಿನ ವಿಚಾರಗಳನ್ನು ಕೇಳಲು ಕಣ್ಣು ಮುಚ್ಚಿ ಕೂರಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಈಶಾ ಸಂಸ್ಥೆಯು ಮೂರು ಜಿಲ್ಲೆಗಳಲ್ಲಿ 6 ರೈತ ಉತ್ಪಾದಕರ ಸಂಸ್ಥೆಗಳನ್ನು (ಎಫ್‌ಪಿಒ) ನಡೆಸುತ್ತಿದೆ. 200 ಗ್ರಾಮಗಳನ್ನು ಒಳಗೊಳ್ಳಲಾಗಿದೆ. ಇದರಲ್ಲಿ 2,500 ಕುಟುಂಬಗಳಿವೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲಗಳಾಗಿವೆ ಎಂದು ತಿಳಿಸಿದರು.
ಜಾತಿ ನಿರ್ಮೂಲನೆಗೆ ಕ್ರೀಡೆಯೂ ದಾರಿ
ಜಾತಿ ನಿರ್ಮೂಲನೆಗೆ ಕ್ರೀಡೆಯೂ ದಾರಿ ಆಗುತ್ತದೆ. ಎಲ್ಲವೂ ಒಂದೇ ದಿನದಲ್ಲಿ ಸಾಧ್ಯ ಎಂದು ಹೇಳುವುದಿಲ್ಲ. ಆದರೆ ಹಂತ ಹಂತವಾಗಿ ಬದಲಾವಣೆ ಆಗುತ್ತದೆ ಎಂದು ಜಗ್ಗಿ ವಾಸುದೇವ್ ತಿಳಿಸಿದರು.
1994ರಲ್ಲಿ ನಾವು ತಮಿಳುನಾಡಿನ ಒಂದು ಗ್ರಾಮದಲ್ಲಿ ಕಾರ್ಯಕ್ರಮ ನಡೆಸಿದೆವು. ಎಲ್ಲರೂ ಜೊತೆಯಲ್ಲಿ ಕುಳಿತು ಊಟ ಮಾಡಿದೆವು. ಮೊದಲ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದರು. ಎರಡನೇ ದಿನ ಅರ್ಧ ಜನ ಬರಲಿಲ್ಲ. ಆಗ ಕೇಳಿದಾಗ, ಆ ಜಾತಿ ಜನರ ಜೊತೆ ನಾವು ಊಟ ಮಾಡುವುದಿಲ್ಲ ಎಂದರು. ಸಾವಿರಾರು ವರ್ಷದ ಈ ಜಾತಿ ಸಮಸ್ಯೆ ಒಂದು ದಿನದಲ್ಲಿ ಪರಿಹಾರ ಆಗುವುದಿಲ್ಲ. ಆದ್ದರಿಂದ ನಾನು ಆಲೋಚಿಸಿ ಕ್ರೀಡಾ ಚಟುವಟಿಕೆ ನಡೆಸಿದೆ. ಆಗ ಆಟಕ್ಕೆ ಎಲ್ಲರೂ ಬಂದರು ಎಂದು ಸ್ಮರಿಸಿದರು.
ಜಾತಿ ಕಾರಣಕ್ಕೆ ಊಟ ಮಾಡಬಾರದು ಎಂದು ಹೇಳಿದ್ದಾರೆ. ಆದರೆ ಆಟವಾಡಬಾರದು ಎಂದು ಎಲ್ಲಿಯೂ ಹೇಳಿಲ್ಲ. ಆಟಕ್ಕೆ ಆ ಶಕ್ತಿ ಇದೆ.
ಈಶಾ ಸಂಸ್ಥೆಯು ಈ ವರ್ಷ ದೇಶದ ಐದು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಸಿದ ಗ್ರಾಮೋತ್ಸವ ಕ್ರೀಡಾಕೂಟದಲ್ಲಿ 43 ಸಾವಿರ ಜನರು ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಕ್ರೀಡೋತ್ಸವವನ್ನು ದೇಶದಾದ್ಯಂತ ನಡೆಸಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.