ಚಿಕ್ಕಬಳ್ಳಾಪುರ: ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, ಬಿಜೆಪಿ ಚಿಕ್ಕಬಳ್ಳಾಪುರ ಮರಳುಗಾಡು ಎನ್ನುವ ಸ್ಥಿತಿ ಇತ್ತು. ಅಂತಹ ಕಡೆಯಲ್ಲಿ ಪಕ್ಷವನ್ನು ಕಟ್ಟಿದ್ದೇನೆ ಎಂದರು.
ಪಕ್ಷ ಎಂದರೆ ನಾಲ್ಕಾರು ಜನರು ಸೇರಿ ಕಟ್ಟಬೇಕು. ವಿಜಯೇಂದ್ರ ಅವರಿಗೆ ‘ಎಸ್ ಬಾಸ್’ ಎನ್ನುವವರಿಗೆ ಪಕ್ಷದಲ್ಲಿ ಹುದ್ದೆಗಳನ್ನು ನೀಡಲಾಗುತ್ತಿದೆ. ಈ ವಿಚಾರವನ್ನು ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ತಿಳಿಸಿದ್ದೇನೆ ಎಂದರು.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ನನ್ನ ರಾಜಕೀಯವನ್ನೇ ಪಣಕ್ಕೊಡ್ಡಿ ಬಿಜೆಪಿಗೆ ಬಂದೆ. ಆದರೆ ವಿಜಯೇಂದ್ರ ನನ್ನ ರಾಜಕೀಯ ಸಮಾಧಿ ಮಾಡಲು ಮುಂದಾಗಿದ್ದಾರೆ. ಇವರ ಧೋರಣೆ ಬಹಳಷ್ಟು ಮುಖಂಡರಿಗೆ ನೋವು ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರನ್ನೂ ವಿಶ್ವಾಸಕ್ಕೆ ಪಡೆಯುವ ಗುಣ ಇವರಿಗೆ ಇಲ್ಲ. ವಿಜಯೇಂದ್ರ ಅವರು ಈಗಾಗಲೇ ಮುಖ್ಯಮಂತ್ರಿ ಆಗಿದ್ದೇನೆ ಎನ್ನುವ ಭಾವನೆ ಅವರಲ್ಲಿ ಇದೆ. ದರ್ಪ, ಅಹಂಕಾರ ಹೆಚ್ಚಿದೆ. ನನ್ನ ಸೋಲಿಸಬೇಕು ಎಂದು ವಿಜಯೇಂದ್ರ ಹಿಂಬಾಲಕರು ಪ್ರಯತ್ನಿಸಿದರು ಎಂದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ‘ನಿಮ್ಮನ್ನು ಭೇಟಿ ಆಗಬೇಕು’ ಎಂದು ಒಂದು ಸಂದೇಶ ಕಳುಹಿಸಿದರೆ ಅವರು ಪ್ರತಿಕ್ರಿಯಿಸುವರು. ಆದರೆ ಇವರು ಕರೆ ಸ್ವೀಕರಿಸುವುದಿಲ್ಲ. ಸಂದೇಶಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಕಿಡಿಕಾರಿದರು.
ಚುನಾವಣೆಯಲ್ಲಿ ಯಾರು ನನ್ನ ವಿರುದ್ಧ ಕೆಲಸ ಮಾಡಿದರೊ ಅಂತಹವರನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ಮಾಡುತ್ತಿರಿ. ಯಾವ ಹಿರಿಯ ನಾಯಕರೂ ನಿಮಗೆ ಬೇಕಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ಭಿನ್ನಾಭಿಪ್ರಾಯ ಇದ್ದರೂ ನಾನು ಮಾಧ್ಯಮಗಳ ಎದುರು ಹೋಗಿರಲಿಲ್ಲ. ಆದರೆ ಈಗ ಆ ಅನಿವಾರ್ಯ ಎದುರಾಗಿದೆ. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ತಾಕತ್ತಿದ್ದರೆ ಬಂದು ಪಕ್ಷ ಕಟ್ಟಲಿ ಎಂದು ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.