ದಾಖಲೆಗಳ ಪರಿಶೀಲಿಸುತ್ತಿರುವ ಶಶಿಧರ್ ಕೋಸಂಬಿ
ಚಿಕ್ಕಬಳ್ಳಾಪುರ: ನಗರದ ಅರ್ವಿನ್ ಡಯಾಗ್ನೋಸ್ಟಿಕ್ ಮತ್ತು ಜೈನ್ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಅಧ್ಯಕ್ಷ ಶಶಿಧರ್ ಕೋಸಂಬಿ, ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.
ಪಿಸಿ ಮತ್ತು ಪಿಎನ್‌ಡಿಪಿ ಕಾಯ್ದೆಯನ್ನು ವ್ಯವಸ್ಥಿತ ನಿರ್ಲಕ್ಷಿಸಲಾಗಿದೆ ಎಂದು ಡಯಾಗ್ನೋಸ್ಟಿಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಕಾಯ್ದೆಯಡಿ ದಾಖಲೆಗಳನ್ನು ಸೂಕ್ತವಾಗಿ ನಿರ್ವಹಿಸದೆ ನಿರ್ಲಕ್ಷ್ಯ ತೋರಿರುವುದು ಕಂಡು ಬಂದಿದೆ. ಲೋಪದೋಷಗಳ ಕುರಿತು ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬುದರ ವಿವರ ಕೇಳಿ ಪತ್ರ ಬರೆಯಲಾಗುವುದು. ಈ ಪತ್ರಕ್ಕೆ ಮೂರು ದಿನಗಳ ಒಳಗೆ ಲಿಖಿತ ಸಮಜಾಯಿಷಿ ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸೂಚಿಸಿದರು.
ರೋಗಿಗಳಿಗೆ ಸಂಬಂಧಿಸಿದ ದರಪಟ್ಟಿಯನ್ನು ಆಸ್ಪತ್ರೆಯಲ್ಲಿ ಅಳವಡಿಸಿಲ್ಲ. ಸ್ಕ್ಯಾನಿಂಗ್ ಕೊಠಡಿ ಪಕ್ಕದಲ್ಲಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲ. ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ. ತಾಯಿ ಕಾರ್ಡ್ ಇಲ್ಲದೆ ಆಧಾರ್ ಕಾರ್ಡ್ ಆಧಾರದ ಮೇಲೆ ಸ್ಕ್ಯಾನಿಂಗ್ ಮಾಡಲಾಗುತ್ತಿದೆ ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೆ ಕೆಲವು ಗರ್ಭಿಣಿಯರ ಹೆಸರು ಉಲ್ಲೇಖಿಸಿ ಅವರ ಸ್ಕ್ಯಾನಿಂಗ್ ವೇಳೆ ಆಗಿರುವ ಲೋಪಗಳ ಬಗ್ಗೆ ಉಲ್ಲೇಖಿಸಲಾಗಿದೆ.
ಜೈನ್ ಆಸ್ಪತ್ರೆಗೂ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಭೇಟಿ ನೀಡಿದ್ದರು. ಅಲ್ಲಿ ಕಂಡ ಅವ್ಯವಸ್ಥೆಗೆ ಸಂಬಂಧಿಸಿದಂತೆ ಕಾರಣ ಕೇಳಿ ಆಸ್ಪತ್ರೆಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.