ADVERTISEMENT

ಚಿಕ್ಕಬಳ್ಳಾಪುರದ ಚಿಮುಲ್ ಚುನಾವಣೆ ವೇಳಾಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 3:20 IST
Last Updated 17 ಜನವರಿ 2026, 3:20 IST
<div class="paragraphs"><p>ಚಿಂತಾಮಣಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಶಿಬಿರ ಕಚೇರಿ.</p></div>

ಚಿಂತಾಮಣಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಶಿಬಿರ ಕಚೇರಿ.

   

ಚಿಂತಾಮಣಿ: ಚಿಮುಲ್ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದ್ದು ಆಕಾಂಕ್ಷಿಗಳು ಮೈಕೊಡವಿ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಫೆಬ್ರುವರಿ 1 ರಂದು ಚುನಾವಣೆ ನಡೆಯಲಿದೆ. ಚುನಾವಣಾಧಿಕಾರಿಯಾಗಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ಭಾಸ್ಕರ್‌ ವೇಳಾಪಟ್ಟಿ ಪ್ರಕಟಿಸಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿರುವ ಮುಖಂಡರು ಒಂದೆಡೆ ಟಿಕೆಟ್‌ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಮತ್ತೊಂದೆಡೆ ಮತದಾರರನ್ನು ಪರೋಕ್ಷವಾಗಿ ಭೇಟಿಮಾಡಿ ಮತಯಾಚನೆ ಮಾಡುತ್ತಿದ್ದಾರೆ.

ADVERTISEMENT

ಚಿಂತಾಮಣಿ ಕ್ಷೇತ್ರದಲ್ಲಿ 71, ಕೈವಾರ ಕ್ಷೇತ್ರದಲ್ಲಿ 71, ಮಹಿಳಾ ಕ್ಷೇತ್ರದಲ್ಲಿ 60 ಅರ್ಹ ಮತದಾರರಿದ್ದಾರೆ. ಚಿಂತಾಮಣಿ ಕ್ಷೇತ್ರದಲ್ಲಿ ಗೋಪಸಂದ್ರ, ಕೈವಾರ ಕ್ಷೇತ್ರದಲ್ಲಿ ವೆಂಕಟಾಪುರ, ಅಟ್ಟೂರು, ಚೌಡದೇನಹಳ್ಳಿ, ಮಹಿಳಾ ಕ್ಷೇತ್ರದಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ, ಸೋಮಕಲಹಳ್ಳಿ ಅನರ್ಹ ಮತದಾರರ ಸಂಘಗಳಾಗಿವೆ.

ಕಸಬಾ ಮತ್ತು ಮುರುಗಮಲ್ಲ ಹೋಬಳಿ ಸೇರಿಸಿ ಚಿಂತಾಮಣಿ ಕ್ಷೇತ್ರ, ಕೈವಾರ, ಅಂಬಾಜಿದುರ್ಗ ಹೋಬಳಿ ಸೇರಿಸಿ ಕೈವಾರ ಕ್ಷೇತ್ರವಾಗಿದೆ. ಮುಂಗಾನಹಳ್ಳಿ, ಚಿಲಕಲನೇರ್ಪು ಹೋಬಳಿ, ಚೇಳೂರು ಕ್ಷೇತ್ರಕ್ಕೆ ಸೇರ್ಪಡೆಯಾಗಿವೆ. ಚಿಂತಾಮಣಿ, ಶಿಡ್ಲಘಟ್ಟ, ಚೇಳೂರು, ಬಾಗೇಪಲ್ಲಿ ತಾಲ್ಲೂಕುಗಳನ್ನು ಸೇರಿಸಿ ಚಿಂತಾಮಣಿ ಮಹಿಳಾ ಕ್ಷೇತ್ರವನ್ನು ರೂಪಿಸಲಾಗಿದೆ.

ಫೆಬ್ರುವರಿ 1 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೂ ಮತದಾನ ನಡೆಯಲಿದೆ. ಅದೇ ದಿನ ಚುನಾವಣೆ ನಂತರ ಮತ ಎಣಿಕೆಯಾಗಿ ಫಲಿತಾಂಶ ಪ್ರಕಟವಾಗುತ್ತದೆ. ಜನವರಿ 19ರಿಂದ ನಾಮಪತ್ರ ಸಲ್ಲಿಕೆ ಆರಂಭ. 22ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. 23ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 24 ರಂದು ನಾಮಪತ್ರ ವಾಪಸ್‌ ಪಡೆಯಬಹುದು. 24ರಂದೇ ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿ ಚುನಾವಣಾ ಚಿನ್ಹೆಗಳನ್ನು ಹಂಚಿಕೆ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.