ಚಿಂತಾಮಣಿ: ತಾಲ್ಲೂಕಿನ ಕೆಲವು ಕಡೆಗಳಲ್ಲಿ ಗಣೇಶ ಹಬ್ಬದ ಸಂಭ್ರಮ ಗುರುವಾರವೂ ಮುಂದುವರೆಯಿತು. ಮತ್ತೆ ಕೆಲವು ಕಡೆ ಬುಧವಾರ ಗಣೇಶಹಬ್ಬದ ಕಡುಬು ಸವಿದಿದ್ದ ಜನರು ಗುರುವಾರ ಮಾಂಸದೂಟ ಸವಿದರು.
ಶ್ರಾವಣ ಮಾಸ ಆರಂಭದಿಂದ ಗಣೇಶ ಹಬ್ಬದವರೆಗೆ ಬಹುತೇಕ ಜನ ಮಾಂಸಾಹಾರ ಸೇವಿಸುವುದಿಲ್ಲ. ಹೀಗಾಗಿ ಒಂದು ತಿಂಗಳಿನಿಂದ ಮಾಂಸಾಹಾರದಿಂದ ದೂರವಿದ್ದ್ ಜನರು, ಗುರುವಾರ ನಸುಕಿನ ಜಾವದಿಂದಲೇ ಮಾಂಸದ ಊಟದ ಸಿದ್ಧತೆ ಮಾಡಿಕೊಂಡರು.
ಮಾಂಸದ ಅಂಗಡಿಗಳ ಮುಂದೆ ಮಾಂಸ ಖರೀದಿಗಾಗಿ ಜನಜಂಗುಳಿ ನೆರೆದಿತ್ತು. ಈ ದೃಶ್ಯ ನೋಡಿದವರಿಗೆ, ಗಣೇಶ ಹಬ್ಬ ಮುಗಿಯುವುದಕ್ಕಾಗಿ ಜನರು ಇಷ್ಟು ದಿನ ಕಾಯುತ್ತಿದ್ದಾರೆ ಎಂಬಂತಿತ್ತು. ಕೈಯಲ್ಲಿ ಚೀಲ ಹಿಡಿದಿದ್ದ ಮಾಂಸಪ್ರಿಯರು ಮಾಸ ಖರೀದಿಗೆ ಮುಗಿಬಿದ್ದಿದ್ದ ದೃಶ್ಯ ನಗರದ ಬಹುತೇಕ ಕಡೆಗಳಲ್ಲಿ ಕಂಡುಬಂದಿತು.
ವಿಶೇಷವಾಗಿ ನಗರದ ಬಂಬೂಬಜಾರ್, ಎಂ.ಜಿ.ರಸ್ತೆಯ ನಗರಸಭೆ ಮಾಂಸದ ಅಂಗಡಿಗಳ ಸಂಕೀರ್ಣ, ಊರಮುಂದೆ, ವೆಂಕಟಗಿರಿಕೋಟೆ ಕೋಳಿ ಮತ್ತು ಮಾಂಸ ಮಾರಾಟದ ಅಂಗಡಿಗಳ ಬಳಿ ಹೆಚ್ಚು ಜನರಿದ್ದರು. ಬೇರೆ ಬೇರೆ ಕಡೆಯಿಂದ ತಂದಿದ್ದ ಮೀನು, ನಾಟಿ ಕೋಳಿಗಳ ವ್ಯಾಪಾರಕ್ಕೆ ಭಾರಿ ಬೇಡಿಕೆ ಕಂಡುಬಂದಿತು.
ನಗರ ಮತ್ತು ಸುತ್ತಮುತ್ತಲ ಗ್ರಾಮಗಳಿಂದ ಮಾಂಸ ಖರೀದಿಗೆ ಬಂದಿದ್ದ ಗ್ರಾಹಕರು ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿದ್ದರಿಂದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಅಧಿಕವಾಗಿತ್ತು. ಕೆಲವು ಅಂಗಡಿಗಳಲ್ಲಿ ಸಾಲಾಗಿ ನಿಲ್ಲಿಸಿ ಮುಂಗಡ ಹಣ ಪಡೆದು ಮಾಂಸ ವಿತರಣೆ ಮಾಡಲಾಗುತ್ತಿತ್ತು. ಕುರಿ, ಮೇಕೆ ಮಾಂಸ ಕೆ.ಜಿಗೆ ₹700–₹800, ಕೋಳಿ ಮಾಂಸ ₹200–₹250ಗೆ ಬಿಕರಿಯಾಗುತ್ತಿತ್ತು. ಮಾಂಸದ ಅಡಿಗೆ ತಯಾರಿಕೆಗೆ ಅಗತ್ಯವಾದ ಕೊತ್ತುಂಬರಿ ಸೊಪ್ಪು, ಪುದೀನಾ ಸೊಪ್ಪನ್ನು ಮಾಂಸದ ಅಂಗಡಿಗಳ ಪಕ್ಕದಲ್ಲೇ ರಾಶಿ ಹಾಕಿಕೊಂಡು ಮಾರಾಟ ಮಾಡಲಾಗುತ್ತಿತ್ತು.
ಮಾಂಸದ ಊಟಕ್ಕೆ ಪೂರಕವಾದ ಸೌತೆಕಾಯಿ, ಬೆಳ್ಳುಳ್ಳಿ, ಈರುಳ್ಳಿ ಮಾರಾಟ ಜೋರಾಗಿತ್ತು. ಗ್ರಾಮೀಣ ಭಾಗಗಳಲ್ಲಿ ಸಾಮಾನ್ಯವಾಗಿ ಪ್ರತಿಯೊಂದು ಗ್ರಾಮದ ರಸ್ತೆಯ ಗೇಟ್ ಬಳಿ ಚಿಕನ್ ಮತ್ತು ಮಟನ್, ಹಂದಿ ಮಾಂಸದ ಅಂಗಡಿಗಳಿವೆ. ಆ ಅಂಗಡಿಗಳಲ್ಲೂ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಗ್ರಾಮಗಳಲ್ಲಿ ಬೆಳಗಿನ ಜಾವ 4 ಗಂಟೆಗೆ ಕುರಿ ಮತ್ತು ಹಂದಿಗಳ ಕಟಾವು ಮಾಡುವ ಕಾಯಕ ಆರಂಭವಾಗಿತ್ತು.
ಗಣೇಶ ಹಬ್ಬದ ವರ್ಷತೊಡಕು ಆಚರಿಸಲು ಮಾಂಸದ ಚೀಟಿ ನಡೆಸುವ ಪದ್ಧತಿ ಇದೆ. ಒಂದು ವರ್ಷ ಪ್ರತಿ ತಿಂಗಳು ಇಂತಿಷ್ಟು ಹಣ ಕಂತು ಕಟ್ಟುತ್ತಾರೆ. ಅದನ್ನು ಚೀಟಿಯ ಸದಸ್ಯರಿಗೆ ಬಡ್ಡಿಗೆ ಕೊಡುತ್ತಾರೆ. ಹೀಗಾಗಿ ಹಣ ಬೆಳೆಯುತ್ತದೆ. ಹಬ್ಬದಂದು ಕುರಿಗಳನ್ನು ಖರೀದಿಸಿ, ತಂದು ಕೊಯ್ದು ಮಾಂಸ ಹಂಚಿಕೊಳ್ಳುತ್ತಾರೆ. ಇದರಿಂದ ಒಮ್ಮೆ ಒಂದೇ ಬಾರಿ ಹೆಚ್ಚಿನ ಹಣ ನೀಡುವುದು ತಪ್ಪುತ್ತದೆ. ವರ್ಷತೊಡಕು ಪ್ರಯುಕ್ತ ಹಿಂದಿನ ಭಾನುವಾರ ಮತ್ತು ಸೋಮವಾರದ ಸಂತೆಗಳಲ್ಲಿ ಕುರಿ, ಮೇಕೆ, ಹಂದಿಗಳ ವ್ಯಾಪಾರವೂ ಅಧಿಕವಾಗಿತ್ತು. ಹಬ್ಬದ ಅಂಗವಾಗಿ ಸಂತೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕುರಿ, ಮೇಕೆಗಳ ಆವಕವಾಗಿತ್ತು.
ಗಣೇಶ ಹಬ್ಬದ ಮಾರನೇ ದಿನ ವರ್ಷತೊಡಕು ಹೆಸರಿನಲ್ಲಿ ಮಾಂಸದ ಊಟ ಮಾಡುವ ಸಂಪ್ರದಾಯವಿದೆ. ಹೀಗಾಗಿ ಹಬ್ಬದ ಹಿಂದಿನ ದಿನದ ಸಂತೆಗಳಲ್ಲಿ ಬೆಲೆ ಏರಿಕೆ ಕಾಣುತ್ತದೆ. ಹಬ್ಬದ ಹೆಸರಿನಲ್ಲಿ ನಾಲ್ಕು ಕಾಸು ಹೆಚ್ಚಿಗೆ ಸಂಪಾದನೆ ಆಗುತ್ತದೆರಾಮಪ್ಪ ಕುರಿಗ್ರಾಹಿ
ವ್ಯಾಪಾರ ಚೆನ್ನಾಗಿಯೇ ಆಯಿತು. ಅಂಗಡಿ ತೆರೆಯುವ ಮುನ್ನವೇ ಗ್ರಾಹಕರು ಬಂದು ಕಾಯುತ್ತಿದ್ದರು. ಬೆಲೆಯು ತುಸು ಏರಿಕೆ ಕಂಡಿತ್ತುಇಮ್ರಾನ್ ಮಾಂಸದ ಅಂಗಡಿ ಮಾಲೀಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.