ಚಿಂತಾಮಣಿ: ಚಿಂತಾಮಣಿಯಲ್ಲಿ ಪ್ರಸಕ್ತ ಸಾಲಿನಿಂದ ಆರಂಭವಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಂಯೋಜಿತ ಎಂಜಿನಿಯರಿಂಗ್ ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕಾಗಿ ₹149.75 ಕೋಟಿ ಯೋಜನೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಂಯೋಜಿತ ಎಂಜಿನಿಯರಿಂಗ್ ಕಾಲೇಜು ಅವಿಭಜಿತ ಕೋಲಾರ ಜಿಲ್ಲೆಯ ಪ್ರಥಮ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು. ಚಿಂತಾಮಣಿಯ ಪ್ರಥಮಗಳ ಸಾಲಿಗೆ ಮತ್ತೊಂದು ಗರಿ ಮೂಡಿದೆ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಬೇಕು ಎಂಬ ದಶಕಗಳ ಕನಸು ನನಸಾಗಿದ್ದು, ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಪ್ರಸಕ್ತ ಸಾಲಿನಿಂದಲೇ ಕಾಲೇಜು ಕಾರ್ಯಾರಂಭ ಮಾಡಿದೆ.
ನಗರದ ಬೆಂಗಳೂರು ರಸ್ತೆಯಲ್ಲಿರುವ ಕನಂಪಲ್ಲಿ ಕೆರೆಯ ಪಕ್ಕದಲ್ಲಿ ಕೈಲಾಸಗಿರಿಗೆ ಹೋಗುವ ರಸ್ತೆಯಲ್ಲಿರುವ ಗುಡ್ಡದ ಮೇಲೆ 12.5 ಎಕರೆ ಜಮೀನು ಮಂಜೂರಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಸ್ವಂತ ಸಂಪನ್ಮೂಲದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ₹149.75 ಕೋಟಿ ವೆಚ್ಚದ ಯೋಜನೆಯನ್ನು ಕಾರ್ಯಕಾರಿ ಮಂಡಳಿಯಲ್ಲಿ ಒಪ್ಪಿಗೆ ನೀಡಿ ಆಡಳಿತಾತ್ಮಕ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಿತ್ತು.
ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ಕಟ್ಟಡ ಕಾಮಗಾರಿ ಆರಂಭವಾಗಲಿದೆ. ಕಟ್ಟಡ ಕಾಮಗಾರಿಗೆ ಪೂರಕವಾಗಿ ಈಗಾಗಲೇ ₹12 ಕೋಟಿ ವೆಚ್ಚದಲ್ಲಿ ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ.
ಕಟ್ಟಡ ಎತ್ತರದ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವುದರಿಂದ ಉತ್ತಮ ರಸ್ತೆಯ ಅಗತ್ಯವಿತ್ತು. ನೂತನ ಕಾಲೇಜಿನ ಸುಸಜ್ಜಿತ ಕ್ಯಾಂಪಸ್ ನಿರ್ಮಿಸಲಾಗುವುದು. ವಿವಿಧ ವಿಭಾಗ, ಆಡಳಿತ ಕಚೇರಿ, ಸ್ಮಾರ್ಟ್ ತರಗತಿ ಕೊಠಡಿ, ಆಡಿಟೋರಿಯಂ, ವಿದ್ಯಾರ್ಥಿನಿಯರ ಮತ್ತು ವಿದ್ಯಾರ್ಥಿಗಳ ಪ್ರತ್ಯೇಕ ವಿದ್ಯಾರ್ಥಿನಿಲಯ, ಸಿಬ್ಬಂದಿಯ ವಸತಿಗೃಹಗಳುಳ್ಳ ಕಟ್ಟಡಗಳನ್ನು ಆಧುನಿಕ ಶೈಲಿಯಲ್ಲಿ ನಿರ್ಮಿಸಲು ನೀಲನಕ್ಷೆ ತಯಾರಿಸಲಾಗಿದೆ.
ಸಾಮಾನ್ಯವಾಗಿ ಶಾಲಾ ಕಾಲೇಜು ಆರಂಭವಾಗಿ ಎಷ್ಟೋ ವರ್ಷಗಳಾದರೂ ಸ್ವಂತ ಕಟ್ಟಡ ಇರುವುದಿಲ್ಲ. ಎರಡು ವರ್ಷದಲ್ಲಿ ಕಟ್ಟಡ ಕಾಮಗಾರಿ ಮುಕ್ತಾಯಗೊಳಿಸುವ ಗುರಿ ಇದೆ. ಕಾಲೇಜು ಕ್ಯಾಂಪಸ್ ಅಕ್ಕಪಕ್ಕದಲ್ಲಿ ಇತರೆ ಸರ್ಕಾರಿ ಕಚೇರಿಗಳಿಗೂ ಸ್ಥಳಾವಕಾಶ ಒದಗಿಸಲಾಗುವುದು. ಈಗಾಗಲೇ ಪ್ರವಾಸಿ ಮಂದಿರಕ್ಕೆ ಎರಡು ಎಕರೆ ಜಾಗ ಮಂಜೂರು ಮಾಡಿಸಿದ್ದು, ನಗರದಲ್ಲಿರುವ ಪ್ರವಾಸಿ ಮಂದಿರ ಇಲ್ಲಿಗೆ ಸ್ಥಳಾಂತರವಾಗುತ್ತದೆ ಎನ್ನುತ್ತಾರೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಾಲ್ಕು ಕೋರ್ಸ್‌ಗಳಿಗೆ ಮಂಜೂರಾತಿ ಸಿಕ್ಕಿದೆ. ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಸೈನ್ಸ್ (ಎಐಎಂಎಲ್), ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಕೋರ್ಸ್ ಪ್ರಾರಂಭವಾಗಿವೆ. ಮುಂದಿನ ವರ್ಷಗಳಲ್ಲಿ ಹಂತ ಹಂತವಾಗಿ ಇನ್ನೂ ಹೆಚ್ಚಿನ ಕೋರ್ಸ್ ಆರಂಭವಾಗುತ್ತವೆ ಎಂದು ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಚಿಂತಾಮಣಿ-ಬೆಂಗಳೂರು ರಸ್ತೆಯ ಎತ್ತರ ಪ್ರದೇಶದಲ್ಲಿ ಕಾಲೇಜು ಆರಂಭವಾಗುತ್ತಿರುವುದು ಸಂತಸ ತಂದಿದೆ. ನಗರ ಸೌಂದರ್ಯಕ್ಕೆ ಮತ್ತೊಂದು ಕಟ್ಟಡ ಸೇರ್ಪಡೆಯಾಗಲಿದೆ. ರಾಜ್ಯದಲ್ಲೇ ಉತ್ತಮ ಕಟ್ಟಡವಾಗಿ ಮೂಡಿಬರಲಿಕೆ.ವಿ.ಚೌಡಪ್ಪ ನಿವೃತ್ತ ಶಿಕ್ಷಕ
ನೂತನ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಎರಡು ವರ್ಷಗಳಲ್ಲಿ ಸುಸಜ್ಜಿತ ಕಾಲೇಜು ಕ್ಯಾಂಪಸ್ ನಿರ್ಮಾಣ ಮಾಡಲಾಗುವುದುಡಾ.ಎಂ.ಸಿ.ಸುಧಾಕರ್ ಉನ್ನತ ಶಿಕ್ಷಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.