
ಚಿಂತಾಮಣಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಚಿಂತಾಮಣಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎರಡು ಮತ್ತು ಜೆಡಿಎಸ್ ಒಂದು ನಿರ್ದೇಶಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಚಿಂತಾಮಣಿ ಕಸಬಾ ಕ್ಷೇತ್ರದಲ್ಲಿ ವೈ.ಬಿ.ಅಶ್ವತ್ಥನಾರಾಯಣಬಾಬು ಭರ್ಜರಿ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಅಶ್ವತ್ಥನಾರಾಯಣಬಾಬು 70 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಬಿ.ಶ್ರೀನಿವಾಸಪ್ಪ ಅವರನ್ನು 65 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಾಂಗ್ರೆಸ್ ಬಹುಮತ ಪಡೆದರೆ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಆಗಲಿದ್ದಾರೆ.
‘ಸಚಿವರ ಸಹಕಾರದಿಂದ ಹೈನೋದ್ಯಮದ ಬೆಳವಣಿಗೆಗಾಗಿ ‘ನಂದಿನಿ ಸಹಕಾರ ಬ್ಯಾಂಕ್’ ಸ್ಥಾಪಿಸಿ, ಡಿಸಿಸಿ ಬ್ಯಾಂಕಿಗಿಂತಲೂ ಕಡಿಮೆ ಬಡ್ಡಿಯಲ್ಲಿ ರೈತರಿಗೆ ಸಾಲ ನೀಡಲಾಗುವುದು. ಹಾಲಿನ ಉತ್ಪಾದನೆಯನ್ನು 4.5 ಲಕ್ಷದಿಂದ ಲೀಟರ್‌ಗಳಿಂದ 10 ಲಕ್ಷ ಲೀಟರ್‌ಗೆ ಹೆಚ್ಚಿಸುವ ಮಹತ್ವಾಕಾಂಕ್ಷೆ ಇದೆ’ ಎಂದು ಎಂದು ವೈ.ಬಿ.ಅಶ್ವತ್ಥನಾರಾಯಣಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.
ಸಚಿವರು 50 ಎಕರೆ ಪ್ರದೇಶದಲ್ಲಿ ಸೋಲಾರ್ ಪ್ಲಾಂಟ್ ಸ್ಥಾಪಿಸುವ ಯೋಜನೆ ಹೊಂದಿದ್ದಾರೆ. ವಿದ್ಯುತ್ ವ್ಯಯಿಸುತ್ತಿದ್ದ ಹಣವನ್ನು ಉತ್ಪಾದಕರಿಗೆ ವಾಪಸ್ ನೀಡುವ ಗುರಿಯೂ ಇದೆ ಎಂದು ಹೇಳಿದರು.
ಕೈವಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್.ಚಿನ್ನಪ್ಪ ಸೋಲು ಅನುಭವಿಸಿದ್ದಾರೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೆ.ಎನ್.ಆವಲಪ್ಪ 37 ಮತ ಪಡೆದು ಚಿನ್ನಪ್ಪ ಅವರನ್ನು 4 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕೈವಾರ ಹೋಬಳಿಯಲ್ಲಿ ಜೆಡಿಎಸ್ ಪ್ರಬಲವಾಗಿದೆ ಎಂಬುದನ್ನು ಇದು ಸಾಬೀತುಪಡಿಸಿದೆ. ಪ್ರಥಮ ಬಾರಿಗೆ ಚುನಾವಣೆಯನ್ನು ಎದುರಿಸಿ ಜಯಗಳಿಸಿರುವುದು ಅವರ ಹೆಗ್ಗಳಿಕೆ.
ಮಹಿಳಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಎಂ.ಸುಮಾ 36 ಮತ್ತು ಜೆಡಿಎಸ್ ಬೆಂಬಲಿತ ರೂಪಾ 24 ಮತ ಪಡೆದಿದ್ದಾರೆ. ಬಾಗೇಪಲ್ಲಿ ತಾಲ್ಲೂಕಿನ ಮುದ್ದಲಪಲ್ಲಿಯ ಎಂ.ಸುಮಾ ರಾಜಕೀಯ ಕುಟುಂಬದ ಹಿನ್ನಲೆ ಇದೆ. ಮಹಿಳಾ ಕ್ಷೇತ್ರ ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ, ಚೇಳೂರು ತಾಲ್ಲೂಕುಗಳ ವ್ಯಾಪ್ತಿ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.