ಚಿಂತಾಮಣಿ: ತಾಲ್ಲೂಕಿನಲ್ಲಿ ದೀಪಾವಳಿ, ಲಕ್ಷ್ಮಿಪೂಜೆಯನ್ನು ಸಂಭ್ರಮದಿಂದ ಆಚರಿಸಲು ನಗರ ಹಾಗೂ ತಾಲ್ಲೂಕಿನ ಜನತೆ ಭರದಿಂದ ಸಿದ್ಧತೆ ನಡೆಸಿದ್ದಾರೆ.
ಸೋಮವಾರ ನರಕಚತುರ್ದಶಿ, ಮಂಗಳವಾರ ಕೇದಾರೇಶ್ವರ ವ್ರತ, ದೀಪಾವಳಿ, ಬುಧವಾರ ಬಲಿಪಾಡ್ಯಮಿಯನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆದಿವೆ.
ಅಭಿವೃದ್ಧಿ ಹಾಗೂ ಸಮೃದ್ಧಿಯ ಸಂಕೇತವಾಗಿ ದೀಪಾವಳಿಯಂದು ಮಹಿಳೆಯರು ದೀಪ ಬೆಳಗಿಸಿ ಸಂಭ್ರಮಿಸುತ್ತಾರೆ. ಬಹುತೇಕ ಸಮುದಾಯದವರು ಮಧ್ಯದ ಕೇದಾರೇಶ್ವರ ವ್ರತದ ದಿನವಾದ ಮಂಗಳವಾರವೇ ದೀಪಾವಳಿ ಆಚರಿಸುವುದು ರೂಡಿಯಾಗಿದೆ.
ಬಟ್ಟೆ ಅಂಗಡಿ, ಹಣತೆ, ಪಟಾಕಿ, ನೋಮುದಾರ, ಹೂ ಹಣ್ಣು, ದಿನಸಿ ಅಂಗಡಿಗಳಲ್ಲಿ ಭರಪೂರ ವ್ಯಾಪಾರ ನಡೆಯುತ್ತಿದೆ. ಮಳೆ, ಬೆಳೆ ಉತ್ತವಾಗಿರುವುದರಿಂದ ಚೆನ್ನಾಗಿ ವ್ಯಾಪಾರ ನಡೆಯುತ್ತಿದೆ. ಮಕ್ಕಳು ಅತ್ತು ಕರೆದು ಪೋಷಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.
ಭಾನುವಾರ ನಗರದ ಸಂತೆಯಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿತ್ತು. ನೋಮುದಾರ, ಹೂವು-ಹಣ್ಣು, ಬಾಳೆಕಂಬ, ಮಾವಿನಸೊಪ್ಪು, ತೆಂಗಿನಕಾಯಿ, ಪಟಾಕಿ ಮತ್ತಿತರ ವಸ್ತುಗಳ ಮಾರುಕಟ್ಟೆಗಳಲ್ಲಿ ಜನಜಂಗುಳಿ. ಕೆಲವು ಕಡೆ ರಸ್ತೆ ಬದಿಗಳಲ್ಲಿ ಹೂವು, ಬಾಳೆಕಂಬ, ಮಾವಿನಸೊಪ್ಪಿನ ರಾಶಿ ರಾಶಿಗಳು ಖರೀದಿದಾರರನ್ನು ಕೈಬೀಸಿ ಕರೆಯುತ್ತಿದ್ದವು.
ಹೂವು ಹಣ್ಣುಗಳ ಮತ್ತು ಪಟಾಕಿಗಳ ಬೆಲೆ ಗಗನಕ್ಕೇರಿದ್ದರೂ ಗ್ರಾಹಕರು ಸಂಭ್ರಮದಿಂದಲೇ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಒಂದೆಡೆ ಹೂವು ಹಣ್ಣುಗಳ ಮಾರುಕಟ್ಟೆಯಾದರೆ ಮತ್ತೊಂದೆಡೆ ಬಣ್ಣ ಬಣ್ಣದ ನೋಮುದಾರಗಳು ಕಣ್ಣುಕೋರೈಸುತ್ತಿದ್ದವು. ನಗರದ ಐಡಿಎಸ್‌ಎಂಟಿ ಮಾರುಕಟ್ಟೆ ಸಂಕೀರ್ಣ, ಜೋಡಿ ರಸ್ತೆ, ಪ್ರವಾಸಿ ಮಂದಿರದ ಮುಂಭಾಗ, ಅಜಾದ್‌ಚೌಕ, ತಾಲ್ಲೂಕು ಕಚೇರಿ ಮುಂಭಾಗದ ವೃತ್ತದಲ್ಲಿ ವ್ಯಾಪಾರ ಜೋರಾಗಿತ್ತು. ನಗರದ ಸರ್ಕಾರಿ ಪಾಲಿಟೆಕ್ನಿಕ್ ಮೈದಾನದಲ್ಲಿ ಪಟಾಕಿಗಳ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ.
3 ದಿನ ಒಂದೊಂದು ಸಮುದಾಯದವರು ಒಂದೊಂದು ದಿನ ಹಬ್ಬ ಆಚರಿಸುವುದು ರೂಡಿಯಲ್ಲಿದೆ. ಕಜ್ಜಾಯ ಸಿದ್ಧಮಾಡಿಕೊಂಡು ಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಲಾಗುವ ಸಿರಿಗೌರಿಯ ಮುಂದೆ ಬಾಗಿನ ಅರ್ಪಿಸುವುದು ದೀಪಾವಳಿಯ ವಿಶೇಷವಾಗಿದೆ.
ಬಿದಿರಿನ ಮೊರದಲ್ಲಿ ಬಾಳೆಎಲೆ ಹಾಕಿ ಅದರ ಮೇಲೆ ಕುಟುಂಬದ ಪದ್ಧತಿಯಂತೆ ಕೆಲವರು 21, 48 ಜೋಡಿ ಮತ್ತೆ ಕೆಲವರು ರಾಶಿ ಮೂಲಕ ಕಜ್ಜಾಯ ತುಂಬಿಸುತ್ತೇವೆ. ಅದರೊಂದಿಗೆ ಬಟ್ಟಲಡಿಕೆ, ಜೋಡಿ ಎಲೆ, ಬಾಳೆಹಣ್ಣು, ಅರಿಶಿನದ ಕೊಂಬು, ನೋಮುದಾರ ತೆಗೆದುಕೊಂಡು ಹೋಗಿ ಸಿರಿಗೌರಿ ಮುಂದೆ ಇಟ್ಟು ಪೂಜೆ ಸಲ್ಲಿಸುತ್ತೇವೆ. ಕೇದಾರೇಶ್ವರ ಕಥೆಯನ್ನು ಕೇಳುತ್ತೇವೆ ಎಂದು ಗೃಹಿಣಿ ಪೂಜಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.