ADVERTISEMENT

ಎಂಜಿನಿಯರಿಂಗ್ ಕಾಲೇಜು ಕಂಡು ಮಾಜಿ ಶಾಸಕಗೆ ಹೊಟ್ಟೆ ಉರಿ: ಡಾ.ಎಂ ಸಿ ಸುಧಾಕರ್

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 7:12 IST
Last Updated 5 ನವೆಂಬರ್ 2025, 7:12 IST
ಚಿಂತಾಮಣಿಯಲ್ಲಿ ಮಂಗಳವಾರ ನಡೆದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್‌ ಭಾಗವಹಿಸಿದ್ದರು
ಚಿಂತಾಮಣಿಯಲ್ಲಿ ಮಂಗಳವಾರ ನಡೆದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್‌ ಭಾಗವಹಿಸಿದ್ದರು   

ಚಿಂತಾಮಣಿ: ‘ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಕಿರಿಕಿರಿ ಮಾಡುವುದು, ಅಡ್ಡಿಪಡಿಸುವುದು, ಪರ್ಸೆಂಟೇಜ್‌ಗಾಗಿ ಅಭಿವೃದ್ಧಿ ಕೆಲಸ ನಡೆಯುತ್ತಿವೆ ಎಂದು ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ ಅಪಪ್ರಚಾರದಲ್ಲಿ ತೊಡಗಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ ಸಿ ಸುಧಾಕರ್ ಆರೋಪಿಸಿದರು.

ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕ್ಷೇತ್ರದಲ್ಲಿ 10 ಹತ್ತುವರ್ಷ ಆಡಳಿತ ನಡೆಸಿ ಪರ್ಸೆಂಟೇಜ್‌ ಪಡೆಯುವ ಅನುಭವ ಅವರಿಗೆ ಇರಬಹುದು. ನಮ್ಮ ಕುಟುಂಬ 1950ರಿಂದ ಶಾಸಕ ಸ್ಥಾನವನ್ನು ನೋಡಿಕೊಂಡು ಬರುತ್ತಿದೆ. ಅಧಿಕಾರಕ್ಕಾಗಿ ಹಣವನ್ನು ನೀಡಿ ಬಂದವರು ನೀವು, ಯಾವ ರೀತಿ ಆಡಳಿತ ಮಾಡಬೇಕು, ಯಾವ ರೀತಿ ಅಭಿವೃದ್ಧಿ ಕೆಲಸ ಮಾಡಬೇಕು ಎಂದು ನಿಮ್ಮಿಂದ ಕಲಿಯುವ ಅವಶ್ಯಕತೆ ನನಗಿಲ್ಲ’ ಎಂದು ಮಾಜಿ ಶಾಸಕರ ವಿರುದ್ಧ ಗುಡುಗಿದರು.

ADVERTISEMENT

‘ಮಾಜಿ ಶಾಸಕ ಬೆಂಗಳೂರು ಕಡೆಯಿಂದ ಚಿಂತಾಮಣಿಗೆ ಬರುವಾಗ ಎಂಜಿನಿಯರಿಂಗ್ ಕಾಲೇಜು ಕಟ್ಟಡ ಕಾಮಗಾರಿ ಅವರ ಕಣ್ಣಿಗೆ ರಾಚುತ್ತದೆ. ಅದನ್ನು ನೋಡಿದಾಗ ಅವರ ಹೊಟ್ಟೆ ಉರಿದು ಅಪಪ್ರಚಾರದ ಆರೋಪ ಮಾಡುತ್ತಾರೆ. ನಾನು ಮಾಡುತ್ತಿರುವ ಕೆಲಸಗಳು ನೀವು ಮಾಡಿದ್ದರೆ ಯಾರು ಬೇಡ ಎಂದು ಹೇಳುತ್ತಿದ್ದರು’ ಎಂದು ಪ್ರಶ್ನಿಸಿದರು.

‘ಮಸ್ತೇನಹಳ್ಳಿ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಒಂದು ಎಕರೆಯಲ್ಲಿ 250 ಮಾವಿನ ಗಿಡ ಬೆಳೆಸಿದಂತೆ ತೋರಿಸಿ, ಒಂದು ಮಾವಿನ ಗಿಡಕ್ಕೆ ₹25 ಸಾವಿರವನ್ನು ಕೆಐಡಿಬಿಐಯಿಂದ ಪಡೆದವರು ಅವರ ಸಹಚರರೇ ಹೊರತು ನಾವಲ್ಲ. ಕೈಗಾರಿಕಾ ಪ್ರದೇಶದ ಅಧಿಸೂಚನೆಯಾದ ಮೇಲೆ ಕೆಲ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಡೆದಿರುವ ಅವ್ಯವಹಾರಗಳ ಕುರಿತು ಅವರು ಚಕಾರ ಎತ್ತುತ್ತಿಲ್ಲ’ ಎಂದು ಟೀಕಿಸಿದರು.

‘ದೊಡ್ಡ ಸಾಮರ್ಥ್ಯದಲ್ಲಿ ಶಾಶ್ವತವಾಗಿ ನೀರು ಹರಿಯುವಂತೆ ಮಾಡುವ ಸಲುವಾಗಿ ಎಚ್.ಎನ್ ವ್ಯಾಲಿ ಯೋಜನೆಯಲ್ಲಿ 119 ಕೆರೆ, ಕೆ.ಸಿ. ವ್ಯಾಲಿ ಯೋಜನೆಯಲ್ಲಿ 50ಕ್ಕೂ ಹೆಚ್ಚು ಕೆರೆಗಳಿಗೆ ನೀರು ಒದಗಿಸುವ ಶಾಶ್ವತ ಪ್ರಯತ್ನವನ್ನು ಕೈಗೊಳ್ಳಲಾಗಿದೆ’ ಎಂದರು.

‘ಪ್ರತಿಯೊಂದು ಗ್ರಾಮಕ್ಕೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ವಿವಿಧ ಯೋಜನೆಗಳ ಮೂಲಕ ಒದಗಿಸಲಾಗುತ್ತಿದೆ. ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ನನ್ನ ಧ್ಯೇಯ’ ಎಂದು ತಿಳಿಸಿದರು.

ಕಂದಾಯ ಇಲಾಖೆ 94ಸಿ, ಅಕ್ರಮ–ಸಕ್ರಮ ಯೋಜನೆಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ತಹಶೀಲ್ದಾರ್‌ ಸುದರ್ಶನ್ ಯಾದವ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್‌, ಕಂದಾಯ ಇಲಾಖೆಯ ಅಧಿಕಾರಿಗಳು, ಕಾಂಗ್ರೆಸ್‌ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.