ADVERTISEMENT

ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಶೀಘ್ರ ಬಿಡುಗಡೆ: ಡಾ.ಎಂ.ಸಿ. ಸುಧಾಕರ್

ತಾಂತ್ರಿಕ ಕಾರಣದಿಂದ ಹಣ ಬಿಡುಗಡೆ ವಿಳಂಬ: ಡಾ.ಎಂ.ಸಿ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 13:02 IST
Last Updated 18 ಫೆಬ್ರುವರಿ 2025, 13:02 IST
ಚಿಂತಾಮಣಿ ತಾಲ್ಲೂಕಿನ ಕಾಗತಿ ಗ್ರಾಮದಲ್ಲಿ ಗ್ರಂಥಾಲಯ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್
ಚಿಂತಾಮಣಿ ತಾಲ್ಲೂಕಿನ ಕಾಗತಿ ಗ್ರಾಮದಲ್ಲಿ ಗ್ರಂಥಾಲಯ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್   

ಚಿಂತಾಮಣಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಹಣವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ತಾಂತ್ರಿಕ ಕಾರಣದಿಂದ ಹಣ ಬಿಡುಗಡೆಯು ಒಂದು ತಿಂಗಳು ವಿಳಂಬವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು. 

ನಗರದ ಹೊರವಲಯದ ಕರಿಯಪ್ಪಲ್ಲಿಯಲ್ಲಿ ಮಂಗಳವಾರ ₹13 ಲಕ್ಷ ವೆಚ್ಚದ ಅಂಗನವಾಡಿ ಕಟ್ಟಡದ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು. 

ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಐದು ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ವಿರೋಧ ಪಕ್ಷಗಳ ಸುಳ್ಳು ಅಪಪ್ರಚಾರಗಳಿಗೆ ಜನರು ಕಿವಿಗೊಡಬಾರದು. ಬಾಕಿ ಹಣವನ್ನು ಶೀಘ್ರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು ಎಂದರು.

ADVERTISEMENT

ಕರಿಯಪ್ಪಲ್ಲಿ ಪ್ರದೇಶವು ನಗರಕ್ಕೆ ಹೊಂದಿಕೊಂಡಿದ್ದರೂ ಕಾಗತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. ಈ ಸ್ಥಳವು ಭವಿಷ್ಯದಲ್ಲಿ ನಗರಕ್ಕೆ ಸೇರುತ್ತದೆ ಎಂಬುದನ್ನು ಗಮನಿಸಿ ಒಳಚರಂಡಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ, ಕಳೆದ 10 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಂಡಿಲ್ಲ ಎಂಬ ಆರೋಪವಿದೆ. ಹೀಗಾಗಿ, ಒಳಚರಂಡಿ ವ್ಯವಸ್ಥೆ ಸರಿಪಡಿಸಲು ₹40 ಲಕ್ಷ ವೆಚ್ಚದಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ನಿರ್ಮಾಣಕ್ಕೆ ₹30 ಲಕ್ಷ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಯೋಜನೆಗಳ ಮಂಜೂರಾತಿ, ಅನುಮೋದನೆ, ಟೆಂಡರ್ ಪ್ರಕ್ರಿಯೆ ಹಂತಗಳನ್ನು ದಾಟಿ ಬರಬೇಕಾದರೆ ಸಮಯ ಬೇಕಾಗುತ್ತದೆ ಎಂದರು.

ಕರಿಯಪ್ಪಲ್ಲಿ ಖಂಡಿತ ನಗರ ಭಾಗಕ್ಕೆ ಸೇರುತ್ತದೆ. ಜೋಡಿ ರಸ್ತೆಯೂ ಆಗುತ್ತದೆ. ಅಕ್ಕಪಕ್ಕದ ಕೆಲವರ 3–4 ಅಡಿ ಜಮೀನು ರಸ್ತೆಗೆ ಹೋಗಬಹುದು. ಸಾರ್ವಜನಿಕ ಹಿತದೃಷ್ಟಿಯಿಂದ ಸಹಕಾರ ನೀಡಬೇಕು. 3–4 ಅಡಿ ಹೋದರೂ ತಮ್ಮ ಜಮೀನುಗಳ ಬೆಲೆ 5–6 ಪಟ್ಟು ಹೆಚ್ಚಾಗುತ್ತದೆ ಎಂದು ತಿಳಿಸಿದರು.

ತಾಲ್ಲೂಕಿನ ಜನರಿಗೆ ಉದ್ಯೋಗ ಒದಗಿಸಲು 10 ವರ್ಷಗಳ ಹಿಂದೆ 792 ಎಕರೆ ಜಾಗ ಗುರುತಿಸಿದ್ದೆ. ನಾನು ಸೋತ ನಂತರ ಯಾರೂ ಆ ಕುರಿತು ಗಮನ ಹರಿಸಲಿಲ್ಲ. ಕೈಗಾರಿಕಾ ಪ್ರಾಂಗಣಕ್ಕಾಗಿ ಗುರುತಿಸಲಾಗಿದ್ದ ಸೋಮಯಾಜಲಹಳ್ಳಿ ಸರ್ವೆ ನಂ 88ರಲ್ಲಿ 288 ಎಕರೆ ಡೀಮ್ಡ್‌ಗೆ ಸೇರಿಸಲಾಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ಅದನ್ನು ತೆಗೆಸಲು ಸಾಧ್ಯವಾಗಲಿಲ್ಲ. ಮ್ಯಾಕಲಸೊಣ್ಣೇನಹಳ್ಳಿ ಮತ್ತು ಕೊಂಗತಿಮ್ಮನಹಳ್ಳಿಯಲ್ಲಿ 400 ಎಕರೆ ಸರ್ಕಾರಿ ಜಾಗ ಸೇರಿ 550 ಎಕರೆ ಗುರುತಿಸಿದ್ದೇವೆ. ರೈತರ 150 ಎಕರೆಗೆ ಉತ್ತಮ ಬೆಲೆ ಕೊಡಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಕೈಗಾರಿಕಾ ಪ್ರಾಂಗಣ ಸ್ಥಾಪನೆಗೊಂಡರೆ ಕರಯಪ್ಪಲ್ಲಿ ಚಿತ್ರಣವೇ ಬದಲಾಗುತ್ತದೆ. ಇಲ್ಲಿಂದಲೇ ರಸ್ತೆ ಆರಂಭವಾಗಿ ಉತ್ತಮ ಜೋಡಿ ರಸ್ತೆಗಳು ಅಭಿವೃದ್ಧಿಯಾಗಲಿವೆ. ಜನರಿಗೆ ಉದ್ಯೋಗ ಒದಗಿಸಲು ಸಿದ್ದೇಪಲ್ಲಿ ಕ್ರಾಸ್ ಮತ್ತು ಮಸ್ತೇನಹಳ್ಳಿಯಲ್ಲಿ ಕೈಗಾರಿಕಾ ಪ್ರಾಂಗಣಗಳು ಆರಂಭಗೊಳ್ಳುತ್ತವೆ ಎಂದು ಹೇಳಿದರು.

ತಹಶೀಲ್ದಾರ್ ಸುದರ್ಶನ ಯಾದವ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು. 

ಸಚಿವ ಡಾ.ಎಂ.ಸಿ. ಸುಧಾಕರ್ ಅವರು ಕಾಗತಿ ಗ್ರಾಮದಲ್ಲಿ ಗ್ರಂಥಾಲಯ ಕಟ್ಟಡಕ್ಕೆ ಭೂಮಿಪೂಜೆ, ದೊಡ್ಡಗಂಜೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ತರಗತಿ ಕೊಠಡಿಗಳ ಉದ್ಘಾಟನೆ, ಸಿದ್ದಿಮಠ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ, ಗೊಲ್ಲಹಳ್ಳಿ ಗ್ರಾಮದಲ್ಲಿ ನೀರಿನ ಘಟಕ ಉದ್ಘಾಟನೆ ಮತ್ತಿತರ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉದ್ಘಾಟನೆ ಮತ್ತು ಭೂಮಿಪೂಜೆ ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.