
ಚಿಂತಾಮಣಿ: ಮಕ್ಕಳಲ್ಲಿನ ರಕ್ತಹೀನತೆ, ಬಹು ಪೋಷಕಾಂಶಗಳ ನ್ಯೂನತೆ ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರಿ ಮತ್ತು ಅನುದಾನ ಶಾಲೆಗಳ 1ರಿಂದ 10ನೇ ತರಗತಿವರೆಗಿನ ಎಲ್ಲ ಮಕ್ಕಳಿಗೆ ಪ್ರಧಾನಮಂತ್ರಿ ಪೋಷಣ ಅಭಿಯಾನ ಯೋಜನೆಯಡಿ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ.
ಚಳಿಗಾಲ ಮತ್ತು ಹವಾಮಾನ ವೈಪರಿತ್ಯದ ಕಾರಣದಿಂದಾಗಿ ಮೊಟ್ಟೆ ಉತ್ಪಾದನೆಯಲ್ಲಿ ಕುಸಿತವಾಗಿದ್ದು, ಮೊಟ್ಟೆ ದರ ಏರಿಕೆಯಾಗಿದೆ. ಇದರಿಂದಾಗಿ ಶಿಕ್ಷಕರ ಜೇಬಿಗೆ ಮೊಟ್ಟೆ ದರವು ಹೊರೆಯಾಗಿದೆ.
ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ದಾಖಲಾತಿ ಜೊತೆಗೆ ಮಕ್ಕಳ ಕಲಿಕಾ ಹಿತಾಸಕ್ತಿ ಹೆಚ್ಚಿಸಲು ಮಕ್ಕಳಿಗೆ ಮೊದಲಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ಮತ್ತು ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ವಿತರಿಸಲಾಗುತ್ತಿತ್ತು. ಬಡ ಮಕ್ಕಳು ಪೌಷ್ಟಿಕ ಆಹಾರದಿಂದ ವಂಚಿತರಾಗಿ ಅಪೌಷ್ಠಿಕತೆಯಿಂದ ಬಳಲಬಾರದು ಎಂಬ ಕಾರಣಕ್ಕೆ 2024ರ ಸಪ್ಟೆಂಬರ್‌ನಿಂದ ಅಜೀಂ ಪ್ರೇಮ್‌ಜೀ ಫೌಂಡೇಶನ್ ಸಹಯೋಗದಲ್ಲಿ ವಾರದ ಆರು ದಿನವೂ ಮಕ್ಕಳಿಗೆ ಮೊಟ್ಟೆ ವಿತರಿಸುವ ಕೆಲಸವನ್ನು ಮಾಡಲಾಗಿದೆ.
ಮಕ್ಕಳಿಗೆ ಪೌಷ್ಟಿಕಾಂಶ ಲಭ್ಯವಾಗುವಂತೆ ಮಾಡುವ ಸರ್ಕಾರದ ಉದ್ದೇಶ ಒಳ್ಳೆಯದೇ. ಆದರೆ ಅದನ್ನು ಜಾರಿಗೆ ಮಾಡುವ ವಿಧಾನ ಸಮರ್ಪಕವಾಗಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಶಿಕ್ಷಕರು ಹೇಳುತ್ತಾರೆ.
ಸರ್ಕಾರವು ಒಂದು ಮೊಟ್ಟೆಗೆ ₹6 ನೀಡುತ್ತದೆ. ಇದರಲ್ಲಿ ಮೊಟ್ಟೆಗೆ ₹5.20, ಬೇಯಿಸಲು 30 ಪೈಸೆ, 30 ಪೈಸೆ ಸುಲಿಯುವರಿಗೆ ನೀಡಬೇಕು ಎಂದು ತಿಳಿಸಿದೆ. ಆದರೆ, ಮಾರುಕಟ್ಟೆಯಲ್ಲಿ 30 ಮೊಟ್ಟೆ ಇರುವ ಒಂದು ಕ್ರೇಟ್‌ಗೆ ₹210ಕ್ಕೆ ಮಾರಾಟವಾಗುತ್ತಿದೆ. ಈ ಪ್ರಕಾರ ಒಂದು ಮೊಟ್ಟೆ ದರವು ₹7 ಆಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮೊಟ್ಟೆಯು ₹7.50 ಮಾರಾಟವಾಗುತ್ತಿದೆ. ಆದರೆ, ಸರ್ಕಾರವು ಮೊಟ್ಟೆಗೆ ಬೇಯಿಸಲು ಮತ್ತು ಸುಲಿಯಲು ಸೇರಿದಂತೆ ಒಟ್ಟಾರೆ ₹6 ಮಾತ್ರವೇ ನೀಡುತ್ತದೆ. ಮೊಟ್ಟೆಗೆ ತಗುಲುವ ಹೆಚ್ಚುವರಿ ಹಣವನ್ನು ಶಿಕ್ಷಕರು ತಮ್ಮ ಸ್ವಂತದ ಹಣವನ್ನು ವಿನಿಯೋಗಿಸುವಂತಾಗಿದೆ.
ಒಂದು ವೇಳೆ ಮೊಟ್ಟೆ ಕೊಡದಿದ್ದರೆ, ಪೋಷಕರು ಮತ್ತು ವಿವಿಧ ಸಂಘಟನೆಗಳ ವಿರೋಧವನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಇಲಾಖೆಯಿಂದ ನೋಟಿಸ್ ನೀಡಲಾಗುತ್ತದೆ. ಅಲ್ಲದೆ, ಅಮಾನತಿನಂಥ ಶಿಕ್ಷೆಗೂ ಗುರಿಯಾಗಬೇಕಾಗುತ್ತದೆ ಎಂದು ಶಿಕ್ಷಕರು ಅಲವತ್ತುಕೊಳ್ಳುತ್ತಾರೆ.
ಮೊಟ್ಟೆಗಳ ದಾಸ್ತಾನು ಮತ್ತು ಸಾಗಾಟದ ವೇಳೆ ಕೆಲವು ಮೊಟ್ಟೆಗಳು ಒಡೆಯುವ ಸಾಧ್ಯತೆ ಇರುತ್ತದೆ. ಇಂಥ ಒಡೆದ ಮೊಟ್ಟೆಯ ವೆಚ್ಚವನ್ನು ಶಿಕ್ಷಕರೇ ಭರಿಸಬೇಕಿದೆ. ಮೊಟ್ಟೆ ಮತ್ತು ಬಾಳೆಹಣ್ಣು ದಾಸ್ತಾನು ಮಾಡಲು ಗ್ರಾಮೀಣ ಪ್ರದೇಶಗಳಲ್ಲಿ ಸೂಕ್ತ ವ್ಯವಸ್ಥೆ ಇರುವುದಿಲ್ಲ. ಪ್ರತಿದಿನ ಖರೀದಿಸಲು ಹಳ್ಳಿಗಳಲ್ಲಿ ಸಾಧ್ಯವಾಗುವುದಿಲ್ಲ. ಇದು ಶಿಕ್ಷಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಮಾರುಕಟ್ಟೆಯಲ್ಲಿ ಮೊಟ್ಟೆದರ ಏರಿಳಿತವಾಗುತ್ತದೆ. ದರ ಹೆಚ್ಚಳದಿಂದ ಶಿಕ್ಷಕರಿಗೆ ಆಗುವ ಸಮಸ್ಯೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ದರ ಹೆಚ್ಚಳವಾದರೂ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆಯಲ್ಲಿ ವ್ಯತ್ಯಯ ಆಗದಂತೆ ಶಿಕ್ಷಕರು ಸಮರ್ಪಕವಾಗಿ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುಬ್ಬಾರೆಡ್ಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.