ADVERTISEMENT

ಚಿಂತಾಮಣಿ: ಅಂಬೇಡ್ಕರ್ ಹೋರಾಟ ತೆರೆದಿಡುವ ‘ನಮ್ಮ ಹಟ್ಟಿ’

ಅವಳಿ ಜಿಲ್ಲೆಗಳ ದಲಿತ ಚಳವಳಿ ಪುನಃಶ್ಚೇತನ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 7:40 IST
Last Updated 20 ಫೆಬ್ರುವರಿ 2026, 7:40 IST
ಚಿಂತಾಮಣಿಯಲ್ಲಿ ದಲಿತ ಸಂಘರ್ಷ ಸಮಿತಿ ಗುರುವಾರ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ದಲಿತ ಚಳುವಳಿಯ ಪುನಃಶ್ಚೇತನ ಕಾರ್ಯಕ್ರಮದಲ್ಲಿ ‘ನಮ್ಮ ಹಟ್ಟಿ’ ಪುಸ್ತಕ ಬಿಡುಗಡೆ
ಚಿಂತಾಮಣಿಯಲ್ಲಿ ದಲಿತ ಸಂಘರ್ಷ ಸಮಿತಿ ಗುರುವಾರ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ದಲಿತ ಚಳುವಳಿಯ ಪುನಃಶ್ಚೇತನ ಕಾರ್ಯಕ್ರಮದಲ್ಲಿ ‘ನಮ್ಮ ಹಟ್ಟಿ’ ಪುಸ್ತಕ ಬಿಡುಗಡೆ   

ಚಿಂತಾಮಣಿ: ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ದಲಿತ ಸಂಘರ್ಷ ಸಮಿತಿ ನಗರ ಶಾಖೆ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ದಲಿತ ಚಳವಳಿಯ ಪುನಃಶ್ಚೇತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

ಕಾರ್ಯಕ್ರಮದಲ್ಲಿ ‘ನಮ್ಮ ಹಟ್ಟಿ’ ಪುಸ್ತಕ ಬಿಡುಗಡೆ ಮಾಡಲಾಯಿತು. 

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ‘ದಲಿತ ಸಮುದಾಯದ ಕುಟುಂಬದ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಕೊಂಚ ಯಶಸ್ಸು ಕಂಡಿದ್ದೇವೆ. ಆದರೆ, ಕುಟುಂಬದಿಂದ ಬೆಳೆಸುವ ಮತ್ತು ಅಂಥ ಬಳ್ಳಿ ವ್ಯಾಪಿಸುವಂತೆ ಮಾಡುವ ಪ್ರಯತ್ನಗಳು ಇಂದಿಗೂ ಸಾಧ್ಯವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ADVERTISEMENT

ಸಮಾಜದಲ್ಲಿ ಸಹೋದರತೆ, ಸ್ವಾತಂತ್ರ್ಯ, ಭ್ರಾತೃತ್ವ ಮುಖ್ಯ. ಸ್ವಾತಂತ್ರ್ಯ ಮತ್ತು ಭ್ರಾತೃತ್ವವು ಸಹೋದರತೆ ಆಧಾರದ ಮೇಲೆ ನೆಲೆ ನಿಂತಿವೆ. ಆದರೆ ನಿಜವಾದ ಸಹೋದರತೆ ಎಂಬುದು ನಮ್ಮ ನಡುವೆ ಇಲ್ಲ. ಸಹೋದರತೆ, ಭ್ರಾತೃತ್ವದ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ, ಕಣ್ಣಲ್ಲಿ ನೋಡುವಷ್ಟು ಸೌಜನ್ಯವನ್ನು ನಾವು ಇಂದಿಗೂ ಬೆಳೆಸಿಕೊಂಡಿಲ್ಲ ಎಂದು ಹೇಳಿದರು. 

ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಹಾಗೂ ಹಿರಿಯ ಹೋರಾಟಗಾರ ಗಡ್ಡಂ ಎನ್. ವೆಂಕಟೇಶ್ ಮಾತನಾಡಿ, ಸಂವಿಧಾನದಿಂದಾಗಿ ಜಾಗೃತಿ, ಒಗ್ಗಟ್ಟು, ಹೋರಾಟ, ಸಮಾನತೆ ಸ್ವಾತಂತ್ರ್ಯ, ಸ್ವಾಭಿಮಾನವು ನಮಗೆ ಇಂದು ಸಿಕ್ಕಿದೆ. ದಲಿತರ ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ದಲಿತ ಸಮುದಾಯವು ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಮುನ್ನೆಲೆಗೆ ಬರಲು ಡಿಎಸ್ಎಸ್ 80ರ ದಶಕದಲ್ಲಿ ನಡೆಸಿದ ಹೋರಾಟಗಳು ಇಂದಿನ ಹೋರಾಟಗಳು ಮತ್ತು ರೂಪುರೇಷೆಗಳಿಗೆ ಮಾದರಿಯಾಗಿವೆ ಎಂದರು. 

ನಮ್ಮ ಹಟ್ಟಿ ಪುಸ್ತಕದಲ್ಲಿ ಅಂಬೇಡ್ಕರ್ ಅವರ ಅಧ್ಯಯನ, ನಡೆದುಬಂದ ದಾರಿ, ಸಮಾಜದ ಪ್ರತಿಯೊಬ್ಬರಿಗೂ ಸಮಾನತೆಯನ್ನು ನೀಡಲು ಅವರು ಮಾಡಿದ ಹೋರಾಟಗಳನ್ನು ಕಾಣಬಹುದಾಗಿದೆ. ಹಿರಿಯರ ಆಶಯದಂತೆ ಸಮುದಾಯದ ಯುವಕರು, ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದು ಹೇಳಿದರು. 

ಡಿ.ಎಸ್‌.ಎಸ್‌ ಸಂಸ್ಥಾಪಕ ಮುಖಂಡ ಎನ್. ಮುನಿಸ್ವಾಮಿ, ಕೆ.ಸಿ.ರಾಜಾಕಾಂತ್, ವೆಂಕಟನಾರಾಯಣಮ್ಮ, ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ, ಕೋಲಾರ ಜಿಲ್ಲಾ ಸಂಚಾಲಕ ಮುನಿವೆಂಕಟಪ್ಪ, ತಾಲ್ಲೂಕು ಸಂಚಾಲಕ ಶ್ರೀರಂಗಪ್ಪ, ಚಿಕ್ಕಬಳ್ಳಾಪುರ ಜಿಲ್ಲಾ ಸಂಘಟನಾ ಸಂಚಾಲಕ ಬಿ.ವಿ.ವೆಂಕಟರಮಣ, ಎನ್ ಪರಮೇಶ್, ಚಿಕ್ಕಬಳ್ಳಾಪುರ ತಾಲ್ಲೂಕು ಸಂಚಾಲಕ ಪೈಪಾಳ್ಯ ರವಿ, ಬಾಗೇಪಲ್ಲಿ ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್, ನಾರಾಮಾಕಲಹಳ್ಳಿ ಕೃಷ್ಣ, ಕಲಾವಿದ ಮುನಿರೆಡ್ಡಿ, ದಲಿತ ಸಂಘರ್ಷ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.