ADVERTISEMENT

ಚಿಂತಾಮಣಿ: 6 ಗ್ರಾಮಕ್ಕೆ ಖಾಸಗಿ ಕೊಳವೆಬಾವಿ ನೀರು

32 ಗ್ರಾಮದಲ್ಲಿ ಬಾಡಿಗೆ ಪಡೆಯಲು ಖಾಸಗಿ ಕೊಳವೆ ಬಾವಿ ಗುರುತು

ಎಂ.ರಾಮಕೃಷ್ಣಪ್ಪ
Published 7 ಏಪ್ರಿಲ್ 2025, 7:05 IST
Last Updated 7 ಏಪ್ರಿಲ್ 2025, 7:05 IST
ಚಿಂತಾಮಣಿ ತಾಲ್ಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ವಿನ್ಯಾಸದ ಶುದ್ಧ ನೀರಿನ ಘಟಕ
ಚಿಂತಾಮಣಿ ತಾಲ್ಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ವಿನ್ಯಾಸದ ಶುದ್ಧ ನೀರಿನ ಘಟಕ   

ಚಿಂತಾಮಣಿ: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಗರಿಷ್ಠ ಉಷ್ಣಾಂಶ 35 ಡಿಗ್ರಿ ತಲುಪಿದೆ. ಜನ, ಜಾನುವಾರು ಬಿಸಿಲಿನ ಝಳದಿಂದ ತತ್ತರಿಸುತ್ತಿದ್ದಾರೆ. ಸುಡು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ತಾಲ್ಲೂಕು ಆಡಳಿತ ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ.

6 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಸದ್ಯಕ್ಕೆ ಸಮಸ್ಯೆ ತಲೆದೋರಬಹುದಾದ 32 ಸಂಭಾವ್ಯ ಗ್ರಾಮಗಳನ್ನು ಗುರುತಿಸಲಾಗಿದೆ.

ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ತಾಲ್ಲೂಕು ಪಂಚಾಯಿತಿ ಸಿದ್ಧತೆ ಮಾಡಿಕೊಂಡಿದೆ. ಕಳೆದ ವರ್ಷ ಮಳೆಯ ಕೊರತೆಯಾಗಿದ್ದು ನೀರಿನ ಸಮಸ್ಯೆ ಉಲ್ಬಣವಾಗಬಹುದೆಂದು ಜನವರಿಯಲ್ಲೇ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಮುಂದೆ ಬರಬಹುದಾದ ನೀರಿನ ಸಮಸ್ಯೆ ಪರಿಹರಿಸಲು ಚರ್ಚೆ ಮಾಡಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಹೇಳುತ್ತಾರೆ.

ADVERTISEMENT

ತಾಲ್ಲೂಕಿನಲ್ಲಿ 384 ಗ್ರಾಮಗಳಿವೆ. ಉಪ್ಪರಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡಹಳ್ಳಿ, ಬಿಂಗ್ಯಾನಹಳ್ಳಿ, ಆನೂರು ಗ್ರಾಮ ಪಂಚಾಯಿತಿಯ ಕೃಷ್ಣಮ್ಮನ ಹೊಸಹಳ್ಳಿ, ಕೋಟಗಲ್ ಗ್ರಾಮ ಪಂಚಾಯಿತಿಯ ಗೋಪಾಲಪುರ, ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇತನಾಯಕನಹಳ್ಳಿ, ಕೋರ್ಲಪರ್ತಿ ಗ್ರಾಮ ಪಂಚಾಯಿತಿಯ ಚೆಂಗವಾರಹಳ್ಳಿ ಗ್ರಾಮಗಳಲ್ಲಿ ಮಾತ್ರ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ.

ಉಳಿದ ಎಲ್ಲ ಗ್ರಾಮಗಳಿಗೆ ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ. ಸದ್ಯಕ್ಕೆ ನೀರಿನ ಸಮಸ್ಯೆ ಉಲ್ಬಣವಾಗಿಲ್ಲ. ಮುಂಬರುವ ದಿನಗಳಲ್ಲಿ ಕ್ರಮೇಣ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಗೋಚರಿಸುತ್ತಿದೆ. ತಾಲ್ಲೂಕಿನ 32 ಗ್ರಾಮಗಳ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿರುವುದನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ಆ ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಖಾಸಗಿ ಕೊಳವೆ ಬಾವಿಗಳ ಮಾಲೀಕರೊಂದಿಗೆ ಒಪ್ಪಂದದ ಕರಾರು ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಕೊಳವೆ ಬಾವಿಗಳಲ್ಲಿ ನೀರು ಸ್ಥಗಿತಗೊಂಡ ಕೂಡಲೇ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಬೇಕು. ಪರಿಸ್ಥಿತಿಗೆ ಅನುಗುಣವಾಗಿ ಬಾಡಿಗೆ ಕರಾರು ಮಾಡಿಕೊಳ್ಳಬೇಕು. ಮಾಸಿಕ ಗರಿಷ್ಠ ₹18 ಸಾವಿರ ನಿಗದಿಪಡಿಸುವಂತೆ ಸೂಚಿಸಲಾಗಿದೆ. ಏಪ್ರಿಲ್ ಮೊದಲ ವಾರದಲ್ಲೆ ಮಳೆಯಾಗುವ ವಾತಾವರಣ ಕಂಡುಬಂದಿದೆ. ಇದರಿಂದಾಗಿ ನೀರಿನ ಸಮಸ್ಯೆ ಉಲ್ಬಣಿಸುವ ಪ್ರಮಾಣ ಕಡಿಮೆ ಎಂದು ಅಂದಾಜಿಸಲಾಗಿದೆ.

ನೀರಿನ ಸಮಸ್ಯೆ ಕುರಿತು ನಿರಂತರ ನಿಗಾವಹಿಸಬೇಕು. ನೀರಿನ ಸಮಸ್ಯೆ ಉಂಟಾಗಬಹುದಾದ ಹಳ್ಳಿಗಳ ಪಟ್ಟಿ ಮಾಡಿಕೊಂಡಿರಬೇಕು. ಪಟ್ಟಿಯನ್ನು ಆಗಾಗ್ಗೆ ಮರು ಪರಿಶೀಲನೆ ನಡೆಸಿ ಪರಿಷ್ಕರಿಸುತ್ತಿರಬೇಕು. ನೀರು ಸರಬರಾಜಿಗೆ ಪ್ರಥಮ ಆದ್ಯತೆ ನೀಡಬೇಕು. ತುರ್ತು ಪರಿಸ್ಥಿತಿ ಎದುರಾದರೆ ಯಾವುದೇ ಅನುದಾನವನ್ನಾದರೂ ಬಳಸಿ ನೀರು ಪೂರೈಕೆ ಮಾಡಬೇಕು ಎಂದು ಗ್ರಾಮ ಪಂಚಾಯಿತಿಗಳಿಗೆ ಸೂಚಿಸಿದೆ.

ಈ ಬಾರಿ ಸಾಧ್ಯವಾದಷ್ಟು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡದಿರಲು ನಿರ್ಧರಿಸಲಾಗಿದೆ. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವುದು ಕೊನೆಯ ಆಯ್ಕೆ. ನೀರು ಬರದಿದ್ದರೆ ಹೊಸ ಕೊಳವೆಬಾವಿ ಕೊರೆಸಲು ಅಗತ್ಯಕ್ರಮ ಕೈಗೊಳ್ಳಬೇಕು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದು ಅವ್ಯವಹಾರಗಳಿಗೆ ದಾರಿಯಾಗುತ್ತದೆ. ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸಬೇಕು.

ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಜಾನುವಾರುಗಳ ನೀರಿನ ತೊಟ್ಟಿ, ಕುಡಿಯುವ ನೀರಿನ ಸಿಸ್ಟನ್‌ಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ನೀರಿನ ಪೈಪ್‌ಲೈನ್ ಪರೀಕ್ಷಿಸಬೇಕು. ಚರಂಡಿಗಳಲ್ಲಿ ಪೈಪ್‌ಲೈನ್ ಹಾದುಹೋಗಿದ್ದರೆ ಗುರುತಿಸಿ ಸ್ಥಳಾಂತರಗೊಳಿಸಬೇಕು. ಆಯಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಉಂಟಾಗಬಹುದಾದ ನೀರಿನ ಸಮಸ್ಯೆ ಕುರಿತು ಹಿರಿಯ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಗ್ರಾಮ ಪಂಚಾಯಿತಿಗೆ ಸೂಚಿಸಲಾಗಿದೆ.

ಆಧುನಿಕ ಶೈಲಿಯ ನೀರಿನ ಘಟಕ: ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಘಟಕ ಸ್ಥಾಪನೆ ಮಾಡಲಾಗಿದೆ. ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 124 ಶುದ್ಧ ನೀರಿನ ಘಟಕಗಳಿವೆ. ಅದರಲ್ಲಿ 90 ಘಟಕ ಕಾರ್ಯನಿರ್ವಹಿಸುತ್ತಿವೆ. 29 ಘಟಕ ದುರಸ್ತಿಯಲ್ಲಿವೆ. ಉಳಿದ 9 ಘಟಕಗಳಲ್ಲಿ ಪರಿಕರಗಳ ಕೊರತೆ ಇದೆ.

ಕ್ಷೇತ್ರದ ಶಾಸಕ ಹಾಗೂ ಉನ್ನತ ಶಿಕ್ಷಣ ಸಚಿವ ವಿವಿಧ ಮೂಲಗಳಿಂದ ಶುದ್ಧ ನೀರಿನ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ. ಕ್ಷೇತ್ರದ ಎಲ್ಲ ಘಟಕಗಳು ಒಂದೇ ರೀತಿಯಲ್ಲಿರಬೇಕು ಎಂದು ಆಧುನಿಕ ‘ಪೆಂಟಗಾನ್’ ರೀತಿಯ ವಿನ್ಯಾಸ ರೂಪಿಸಿದ್ದಾರೆ. 2023-24 ಮತ್ತು 2024-25 ಸಾಲಿನಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ 32 ಘಟಕ ಹೊಸದಾಗಿ ಸ್ಥಾಪಿಸಲಾಗಿದೆ. ದಾನಿಗಳು ಮತ್ತು ಸಿಎಸ್‌ಆರ್‌ ನಿಧಿಯಿಂದ 25 ಘಟಕಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೊಳವೆಬಾವಿಗಳ ಕಲುಷಿತ ನೀರು ಮತ್ತು ಅತ್ಯಧಿಕ ಪ್ರಮಾಣದಲ್ಲಿನ ಪ್ಲೋರೈಡ್, ನೈಟ್ರೇಟ್, ಗಡಸುತನ ಮತ್ತು ಕರಗಿದ ಘನ ಅಂಶಗಳು ಜನರ ಹೊಟ್ಟೆಗೆ ಸೇರದಿರಲಿ ಎಂದು ಶುದ್ಧ ನೀರಿನ ಘಟಕಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಸರ್ಕಾರದಿಂದಲೇ ಎಲ್ಲವನ್ನು ಮಾಡಲು ಅನುದಾನದ ಕೊರತೆ ಎದುರಾಗುತ್ತದೆ. ಘಟಕಗಳ ನಿರ್ಮಾಣಕ್ಕೆ ದಾನಿಗಳು ಮತ್ತು ಸಿಎಸ್‌ಆರ್‌ ನಿಧಿ ಮತ್ತಿತರ ಮೂಲಗಳಿಂದಲೂ ಪ್ರಯತ್ನ ಮಾಡಲಾಗುತ್ತಿದೆ. ಕ್ಷೇತ್ರದ ಎಲ್ಲ ಗ್ರಾಮಗಳಲ್ಲೂ ಶುದ್ಧ ನೀರಿನ ಘಟಕಗಳ ಸ್ಥಾಪನೆಯ ಗುರಿ ಹೊಂದಲಾಗಿದೆ ಎನ್ನುತ್ತಾರೆ ಕ್ಷೇತ್ರದ ಶಾಸಕ ಡಾ.ಎಂ.ಸಿ.ಸುಧಾಕರ್.

ದಾನಿಗಳ ನೆರವಿನಿಂದ ಸ್ಥಾಪಿಸಿರುವ ಘಟಕಗಳ ನಿರ್ವಹಣೆಯನ್ನು 5 ವರ್ಷ ಅವರೇ ಮಾಡುತ್ತಾರೆ. ನಂತರ ಗ್ರಾಮ ಪಂಚಾಯಿತಿಗೆ ವಹಿಸುತ್ತಾರೆ. ಘಟಕಗಳ ನಿರ್ವಹಣೆಯನ್ನು ಆಯಾ ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ. ಕೆಲವು ಕಡೆ ನಿರ್ವಹಣೆಯ ಕೊರತೆ, ಜನರು ನೀರು ಬಳಸದಿರುವುದು, ಕಾಯಿನ್ ಬೂತ್ ಇಲ್ಲದಿರುವುದು, ಪೈಪ್‌ಲೈನ್ ಕೊರತೆ ಮತ್ತಿತರ ಸಮಸ್ಯೆಗಳಿಂದ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ದಾನಿಗಳಿಂದ ಸ್ಥಾಪಿಸ್ಪಟ್ಟಿರುವ ನೀರಿನ ಘಟಕ
ನೀರು ಲಭ್ಯವಿದ್ದರೂ ಗ್ರಾಮಗಳ ಮಟ್ಟದಲ್ಲಿ ಸರಬರಾಜಿನಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ವಿದ್ಯುತ್ ಕಡಿತ ಸಮಸ್ಯೆ ಎದುರಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ನೀರಿನ ಸಮಸ್ಯೆ ಹೆಚ್ಚಾಗಬಹುದು
ಸುರೇಶ್ ಹಿರಿಯ ನಾಗರಿಕ
ಬೇಸಿಗೆಯಲ್ಲಿ ನೀರು ಒದಗಿಸಲು ಅಧಿಕಾರಿಗಳು ಚುನಾವಣೆಯ ಸಮಯದಲ್ಲಿ ಕೆಲಸ ಮಾಡಿದಂತೆ ಕೆಲಸ ಮಾಡಬೇಕು. ಕೊಳವೆಬಾವಿ ಪಂಪ್ ಹಾಗೂ ಮೋಟಾರುಗಳ ದುರಸ್ತಿಗೆ ತಯಾರಾಗಿರಬೇಕು. ದೂರು ಬಂದ ಕೂಡಲೇ ದುರಸ್ತಿಗೊಳಿಸಬೇಕು
ಮಂಜುನಾಥರೆಡ್ಡಿ ಗ್ರಾಮ ಪಂಚಾಯಿತಿ ಸದಸ್ಯ
ಬೇಸಿಗೆ ಆರಂಭದಲ್ಲೇ ನೀರಿನ ಸಮಸ್ಯೆ
ಕಳೆದ ವರ್ಷ ಮಳೆ ಕೊರತೆಯಾಗಿತ್ತು. ಹಾಗಾಗಿ ಈ ವರ್ಷ ನೀರಿನ ಸಮಸ್ಯೆ ಬಿಗಡಾಯಿಸುವ ಸಂಭವವಿದೆ. ಬೇಸಿಗೆ ಆರಂಭದಲ್ಲೇ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಕೊಳವೆ ಬಾವಿಗಳಿಂದ ಬರುತ್ತಿದ್ದ ನೀರು ಕಡಿಮೆಯಾಗಿದೆ. ಮುಂಗಾರು ಮಳೆ ತಡವಾದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ವಿ.ನರಸಿಂಹಪ್ಪ ಡಿಎಸ್‌ಎಸ್ ಮುಖಂಡ ನಿಖರ ಮಾಹಿತಿ ನೀಡಬೇಕು ಬೇಸಿಗೆಯಲ್ಲಿ ಜನರಿಗೆ ನೀರಿನ ಸಮಸ್ಯೆ ತಲೆದೋರದಂತೆ ವ್ಯವಸ್ಥೆ ಮಾಡಲು ಗ್ರಾಮೀಣ ಕುಡಿಯುವ ನೀರಿನ ವಿಭಾಗದ ಎಂಜಿನಿಯರ್ ಮತ್ತು ಪಿಡಿಒಗಳ ಸಭೆನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಪ್ರತಿ ಗ್ರಾಮದಲ್ಲೂ ಪರಿಶೀಲನೆ ನಡೆಸಿ ನಿಖರವಾದ ಮಾಹಿತಿ ನೀಡಬೇಕು. ಜತೆಗೆ ನೀರು ಕಲುಷಿತವಾಗದಂತೆ ಮುನ್ನೆಚ್ಚರಿಕೆ ಸಲಹೆ ನೀಡಿದ್ದೇನೆ. ಎಸ್.ಆನಂದ್ ಇ.ಒ ಚಿಂತಾಮಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.