
ಚಿಂತಾಮಣಿ: ತಾಲ್ಲೂಕಿನಲ್ಲಿ ಪಿಯುಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಇಲಾಖೆ, ಪ್ರಾಂಶುಪಾಲರು, ಉಪನ್ಯಾಸಕರು ವಿಭಿನ್ನ ಹಾಗೂ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಕಳೆದ ವರ್ಷ ಶೇ 75.87ಅಂಕಗಳಿಸಿ ಜಿಲ್ಲೆ ರಾಜ್ಯದ 11ನೇ ಸ್ಥಾನದಲ್ಲಿತ್ತು. ಸರ್ಕಾರಿ ಕಾಲೇಜುಗಳಲ್ಲಿ ಶೇ 47ರಷ್ಟು ಮಾತ್ರ ಫಲಿತಾಂಶವಿತ್ತು. ಈ ಬಾರಿ ಫಲಿತಾಂಶ ಸುಧಾರಣೆಗೆ ನಿರ್ದಿಷ್ಟ ಗುರಿ ಆಧಾರಿತ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಮಕ್ಕಳು ಮತ್ತು ಪೋಷಕರಲ್ಲಿ ಉತ್ಸಾಹ, ಹುಮ್ಮಸ್ಸು ಮೂಡಿಸಿದೆ.
ಪಿಯು ಪರೀಕ್ಷೆ ಫೆಬ್ರುವರಿ 28 ರಿಂದ ಆರಂಭವಾಗಿ ಮಾರ್ಚ್ 17ಕ್ಕೆ ಮುಕ್ತಾಯವಾಗುತ್ತದೆ. ಪಿಯು ಇಲಾಖೆ ಅಧಿಕಾರಿಗಳು, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಅಂತಿಮ ತರಬೇತಿ ನೀಡುವಲ್ಲಿ ನಿರತರಾಗಿದ್ದಾರೆ. ಸರ್ಕಾರಿ ಕಾಲೇಜುಗಳ ಫಲಿತಾಂಶ ಸುಧಾರಣೆಗೆ ಸಾಕಷ್ಟು ಕ್ರಮಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಲಾಗಿದೆ ಎಂದು ಪಿಯು ಉಪನಿರ್ದೇಶಕ ಆದಿಕೇಶವರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಲ್ಲೂಕಿನಲ್ಲಿ 6 ಸರ್ಕಾರಿ ಕಾಲೇಜು ಸೇರಿ ಒಟ್ಟು 27 ಪಿಯು ಕಾಲೇಜುಗಳಿವೆ. ಕಾಲೇಜುಗಳಲ್ಲಿ ಉಪನ್ಯಾಸಕರ ಮತ್ತು ಮತ್ತು ವಿದ್ಯಾರ್ಥಿಗಳ ಹಾಜರಾತಿಗೆ ಹೆಚ್ಚಿನ ಗಮನವಹಿಸಲಾಗಿದೆ. ಉಪನ್ಯಾಸಕರು ಕಡ್ಡಾಯವಾಗಿ ನಿಗದಿತ ಸಮಯದಲ್ಲಿ ಕಾಲೇಜುಗಳಲ್ಲಿ ಹಾಜರಿರಲು ಕಾಮ್ಸ್ (ಕರ್ನಾಟಕ ಹಾಜರಾತಿ ಮಾನಿಟರ್ ಸಿಸ್ಟಮ್) ಜಾರಿಗೊಳಿಸಲಾಗಿದೆ.
ಇಲಾಖೆಯ ಪ್ರಧಾನ ಕಾರ್ಯದರ್ಶಿ, ನಿರ್ದೇಶಕರ ಕಚೇರಿಯಿಂದಲೇ ಪ್ರತಿಯೊಬ್ಬ ಉಪನ್ಯಾಸಕರ ಹಾಜರಾತಿ ಗಮನಿಸಬಹುದು. ವಿದ್ಯಾರ್ಥಿಗಳು ಗೈರು ಹಾಜರಾದರೆ, ಅವರ ಮನೆಗೆ ತೆರಳಿ ಪರಿಶೀಲನೆ ನಡೆಸಿ ಜಾಗೃತಿ ಮೂಡಿಸಲಾಗಿದೆ. ಪ್ರತಿ 2 ತಿಂಗಳಿಗೊಮ್ಮೆ ಕಡ್ಡಾಯವಾಗಿ ಪೋಷಕರ ಸಭೆ ಕರೆದು ಅವರ ಮಕ್ಕಳ ಪ್ರಗತಿ, ಹಾಜರಾತಿ ಕುರಿತು ಚರ್ಚೆ ನಡೆಸಲಾಗುತ್ತಿದೆ.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಉಪನ್ಯಾಸಕರಿಗೆ ದತ್ತು ನೀಡಲಾಗಿದೆ. ಕಾಲೇಜು ಸಮಯವನ್ನು ಹೊರತುಪಡಿಸಿ ಬೆಳಿಗ್ಗೆ ಮತ್ತು ಸಂಜೆ ವಿಶೇಷ ತರಗತಿ ತೆಗೆದುಕೊಳ್ಳಲಾಗುತ್ತಿದೆ. ಕೆಲವು ಕಡೆ ರಾತ್ರಿ ತರಗತಿ ನಡೆಯುತ್ತಿವೆ.
ಡಿಸೆಂಬರ್ 31ಕ್ಕೆ ಪಠ್ಯಕ್ರಮ ಮುಗಿಸಲಾಗಿದೆ. 2 ಪೂರ್ವಸಿದ್ಧತಾ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆ ಮುಕ್ತಾಯವಾಗಿದೆ. 2ನೇ ಪೂರ್ವಸಿದ್ಧತಾ ಪರೀಕ್ಷೆ ಜನವರಿ 19ರಿಂದ ಆರಂಭವಾಗಲಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ಉಪನಿರ್ದೇಶಕರು, ಪ್ರಾಂಶುಪಾಲರು, ಉಪನ್ಯಾಸಕರ ಸಭೆಗಳನ್ನು ನಡೆಸುವ ಮೂಲಕ ಪದೇ ಪದೇ ಜಾಗೃತಿಗೊಳಿಸುತ್ತಿದ್ದಾರೆ ಎಂದು ಉಪನ್ಯಾಸಕರೊಬ್ಬರು ತಿಳಿಸಿದರು.
ಪ್ರತಿ ವಿಷಯದ ಪ್ರತಿಯೊಂದು ಅಧ್ಯಾಯದಲ್ಲೂ ಬರಬಹುದಾದ ಪ್ರಶ್ನೆಗಳ ಬ್ಲೂ ಪ್ರಿಂಟ್ ಸಿದ್ಧಪಡಿಸಿ, ಉಪನ್ಯಾಸಕರಿಗೆ 2 ದಿನ ತರಬೇತಿ ನೀಡಲಾಗಿದೆ. ರಾಜ್ಯ ಪರೀಕ್ಷಾ ಮಂಡಳಿಯ ಪೋರ್ಟಲ್ ವಿದ್ಯಾರ್ಥಿ ಕಾರ್ನರ್ ನಲ್ಲಿ 3 ಮಾದರಿಯ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೂ ನೀಡಲಾಗಿದೆ.
ಜಿಲ್ಲಾಧಿಕಾರಿ ಮತ್ತು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೊಂದಿಗೆ ಸಭೆ ನಡೆಸಿ ಪ್ರತಿಯೊಂದು ಸರ್ಕಾರಿ ಕಾಲೇಜಿಗೂ ಭೇಟಿ ನೀಡಿ ಉಪನ್ಯಾಸಕರಿಗೆ ಅಗತ್ಯ ಸಲಹೆ, ಸೂಚನೆ ನೀಡಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಉಪನ್ಯಾಸಕರಿಗೆ ದತ್ತು ನೀಡಲಾಗಿದೆ. ಕಳೆದ ವರ್ಷ ಜಿಲ್ಲೆ ರಾಜ್ಯದ ಫಲಿತಾಂಶದ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿತ್ತು. ಈ ವರ್ಷ 5ನೇ ಸ್ಥಾನದ ಒಳಗೆ ತರಲು ಎಲ್ಲರೂ ಒಟ್ಟಾಗಿ ಶ್ರಮಿಸುತ್ತಿದ್ದೇವೆ ಎಂದು ಪಿ.ಯು ಉಪನಿರ್ದೇಶಕ ಆದಿಕೇಶವರಾವ್ ಹೇಳಿದರು.
ಪಿಯು ಶಿಕ್ಷಣದ ಪ್ರಧಾನ ಕಾರ್ಯದರ್ಶಿ ರಶ್ಮಿ ಅವರು ಹಿಂದೆ ಪಿಯು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿರುವುದರಿಂದ ಎಲ್ಲ ವಿಷಯಗಳು ಅವರಿಗೆ ಗೊತ್ತಿದೆ. ಪ್ರಧಾನ ಕಾರ್ಯದರ್ಶಿ ಮತ್ತು ನಿರ್ದೇಶಕ ಭರತ್ ಅವರು ಸಾಕಷ್ಟು ಬದಲಾವಣೆ ತಂದಿದ್ದು ಉತ್ತಮ ಫಲಿತಾಂಶದ ನಿರೀಕ್ಷೆ ಮಾಡಬಹುದು ಎಂದು ಪ್ರಾಂಶುಪಾಲ ಮುನಿರೆಡ್ಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.