
ಚಿಂತಾಮಣಿ: ನಗರದ ಹೊರವಲಯದ ಬೆಂಗಳೂರು ರಸ್ತೆಯ ಕಟ್ಟಮಾಚನಹಳ್ಳಿ ಗೇಟ್ ಮತ್ತು ನಗರದ ಕೋಲಾರ ಕ್ರಾಸ್‌ನಲ್ಲಿ ಪ್ರಾದೇಶಿಕ ಸಹಾಯಕ ಸಾರಿಗೆ ಆಧಿಕಾರಿ ಬೈರಾರೆಡ್ಡಿ ಮತ್ತು ಪೋಲೀಸ್ ಇಲಾಖೆಯ ಡಿವೈಎಸ್‌ಪಿ ಮುರಳೀಧರ್ ಅವರ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ವಾಹನಗಳ ತಪಾಸಣೆ ನಡೆಸಲಾಯಿತು.
ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಶಿವರಾಜ್ ಮತ್ತು ನಗರ ಠಾಣೆ ಇನ್‌ಸ್ಪೆಕ್ಟರ್ ವಿಜಿಕುಮಾರ್, ಸಿಬ್ಬಂದಿ ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳು ಒಟ್ಟಿಗೆ ರಸ್ತೆಗೆ ಇಳಿದು ಎಲ್ಲ ವಾಹನಗಳ ತಪಾಸಣೆ ನಡೆಸಿದರು. ವಾಹನಕ್ಕೆ ಸಂಬಂಧಿಸಿದ ದಾಖಲೆಗಳು ಇಲ್ಲದ ಹಾಗೂ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಲಾಯಿತು.
ಡಿವೈಎಸ್‌ಪಿ ಮುರಳೀಧರ್ ಮಾತನಾಡಿ, ಚಿಂತಾಮಣಿ ತಾಲ್ಲೂಕಿನಲ್ಲಿ ಅಪಘಾತಗಳಿಂದಲೇ ಹೆಚ್ಚಿನ ಸಾವು–ನೋವುಗಳು ಸಂಭವಿಸುತ್ತಿವೆ. ರಸ್ತೆ ನಿಯಮಗಳನ್ನು ಪಾಲನೆ ಮಾಡದಿರುವುದು, ಬೇಜವಾಬ್ದಾರಿಯಿಂದ ವಾಹನಗಳ ಚಾಲನೆಯೇ ಬಹುತೇಕ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.
ಸಾರ್ವಜನಿಕರು ತಮ್ಮ ಜೀವ ರಕ್ಷಣೆ ಮತ್ತು ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಬೇಕು. ಕಾರು ಚಾಲನೆ ಮಾಡುವಾಗ ಚಾಲಕರು ಸೀಟು ಬೆಲ್ಟ್ ಹಾಕಬೇಕು. ವಿಮೆ ಮತ್ತು ಎಫ್.ಸಿ ಇಲ್ಲದೆ ವಾಹನಗಳು ಸಂಚರಿಸುತ್ತಿವೆ ಎಂಬ ದೂರುಗಳು ಬರುತ್ತಿದ್ದು, ಕ್ರಮಕೈಗೊಳ್ಳಲಾಗುವುದು ಎಂದರು.
ಪ್ರಾದೇಶಿಕ ಸಹಾಯಕ ಸಾರಿಗೆ ಅಧಿಕಾರಿ ಬೈರಾರೆಡ್ಡಿ ಮಾತನಾಡಿ, ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ ಪಡೆದಿರಬೇಕು. ವಾಹನಗಳ ಮಾಲೀಕರು ಎಲ್ಲ ದಾಖಲೆಗಳನ್ನು ಹೊಂದಿರಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಿದರೆ ಅಪಘಾತಗಳನ್ನು ನಿಯಂತ್ರಿಸಬಹುದು. ಕೆಲವು ಶಾಲೆಗಳ ವಾಹನಗಳು ಸಮರ್ಪಕ ವಾಹನಗಳ ದಾಖಲೆ ಹೊಂದಿಲ್ಲ ಎಂಬ ದೂರುಗಳಿವೆ. ನಿರಂತರ ಕಾರ್ಯಾಚರಣೆ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪ್ರಾದೇಶಿಕ ಸಹಾಯಕ ಸಾರಿಗೆ ಇನ್‌ಸ್ಪೆಕ್ಟರ್ ನರಸೇಗೌಡ, ಗ್ರಾಮಾಂತರ ಠಾಣೆ ಸಬ್ ಇನ್‌ಸ್ಪೆಕ್ಟರ್ ನಾರಾಯಣಸ್ವಾಮಿ ಹಾಗೂ ಪೋಲೀಸ್ ಸಿಬ್ಬಂದಿ ವಾಹನಗಳ ತಪಾಸಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.