ಚಿಕ್ಕಬಳ್ಳಾಪುರ: ಕ್ರಿಸ್‌ಮಸ್ ರಜೆಯ ಕಾರಣ ನಂದಿಗಿರಿಧಾಮಕ್ಕೆ ಬುಧವಾರ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದರು. ಇದರಿಂದ ಗಿರಿಧಾಮದ ಹಾದಿಯಲ್ಲಿ ದೊಟ್ಟ ಮಟ್ಟದಲ್ಲಿ ಸಂಚಾರ ದಟ್ಟಣೆ ಉಂಟಾಯಿತು.
ಬೆಳಿಗ್ಗೆ ಐದು ಗಂಟೆಯ ವೇಳೆಗೆ ‘ನಂದಿಕ್ರಾಸ್’ನಲ್ಲಿ ಕಾರು, ಬೈಕುಗಳು ಸಾಲುಗಟ್ಟಿದ್ದವು. ದಾರಿ ಬಿಡಲಿಲ್ಲ ಎಂದು ಕಾರಿನಲ್ಲಿ ಸಾಗುತ್ತಿದ್ದ ಕೆಲ ಯುವಕರು ಆಟೊ ಚಾಲಕರ ಜೊತೆ ವಾಗ್ವಾದ ನಡೆಸಿದರು. ಕೈ ಕೈ ಮಿಲಾಯಿಸುವ ಹಂತಕ್ಕೂ ಪರಿಸ್ಥಿತಿ ಬಂದಿತು.
ಬೆಳಿಗ್ಗೆ 5.30ರ ಸುಮಾರಿನಲ್ಲಿಯೇ 200ಕ್ಕೂ ಹೆಚ್ಚು ವಾಹನಗಳು ಗಿರಿಧಾಮದ ವಾಹನ ನಿಲುಗಡೆ ಸ್ಥಳದಲ್ಲಿ ಇದ್ದವು. ಇವುಗಳ ಜೊತೆಗೆ ವಾಹನ ನಿಲುಗಡೆಗೆ ತಿರುವು ಪಡೆಯುವ ಮಿರ್ಜಾ ಕ್ರಾಸ್‌ನಲ್ಲಿಯೂ ಅಧಿಕಾರ ಸಂಖ್ಯೆಯಲ್ಲಿ ಕಾರುಗಳು ಸ್ಥಳ ನಿರೀಕ್ಷೆಯಲ್ಲಿ ಕಾದಿದ್ದವು.
ಮತ್ತೊಂದು ಕಡೆ ಪ್ರವೇಶ ದ್ವಾರ ಮತ್ತು ಗಿರಿಧಾಮದ ರಸ್ತೆಯಲ್ಲಿಯೂ ಮತ್ತಷ್ಟು ಕಾರುಗಳು ಸಾಲುಗಟ್ಟಿದ್ದವು. ವಾಹನ ನಿಲುಗಡೆ ಸ್ಥಳದಲ್ಲಿ ಒಮ್ಮೆ 300 ಕಾರುಗಳ ನಿಲುಗಡೆಗೆ ಅವಕಾಶವಿದೆ. ಇವು ಇಲ್ಲಿಂದ ತೆರವಾದ ನಂತರವೇ ಬೇರೆ ಕಾರುಗಳ ಪ್ರವೇಶ ಸಾಧ್ಯ.
ಆದ್ದರಿಂದ ನಿಲುಗಡೆ ಸ್ಥಳದಲ್ಲಿದ್ದ ಕಾರುಗಳು ಹೊರ ಹೋಗುವವರೆಗೂ ಪೊಲೀಸರು ಪ್ರವೇಶ ದ್ವಾರ ಮತ್ತು ಗಿರಿಧಾಮದ ನಡುರಸ್ತೆಯಲ್ಲಿ ವಾಹನಗಳನ್ನು ತಡೆದಿದ್ದರು. 5.30ಕ್ಕೆ ಗಿರಿಧಾಮ ಪ್ರವೇಶದ್ವಾರಕ್ಕೆ ಬಂದವರು. 7.30ಕ್ಕೆ ಗಿರಿಧಾಮ ತಲುಪುವ ಸ್ಥಿತಿ ಇತ್ತು. ಬಹಳಷ್ಟು ಮಂದಿ ವಾಹನಗಳಿಂದ ಇಳಿದು ಕಾಲ್ನಡಿಗೆ ಮೂಲಕ ಗಿರಿಧಾಮ ದತ್ತ ಹೊರಟಿದ್ದಾರೆ. ಬೆಳಿಗ್ಗೆ 10.30 ಆದರೂ ಇದೇ ಸ್ಥಿತಿ ಇತ್ತು.
ಗಿರಿಧಾಮದ ಎಲ್ಲಿ ನೋಡಿದರೂ ಜನವೊ ಜನ. ಸಂಚಾರ ದಟ್ಟಣೆಯನ್ನು ಮರೆಸುವಂತೆ ಹಾದಿಯುದ್ದಕ್ಕೂ ಮಂಜು ಮುಸುಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.