
ಬಾಗೇಪಲ್ಲಿ: ವಿಶ್ವಕ್ಕೆ ಶಾಂತಿ ಸಾರಿದ ಯೇಸು ಕ್ರಿಸ್ತನ ಜನ್ಮದಿನದ ಸ್ಮರಣೆಗಾಗಿ ಆಚರಿಸಲಾಗುವ ಕ್ರಿಸ್ಮಸ್ ಹಬ್ಬದ ಸಂಭ್ರಮಕ್ಕೆ ತಾಲ್ಲೂಕಿನಾದ್ಯಂತ ಭರದ ಸಿದ್ಧತೆ ನಡೆಯುತ್ತಿದೆ. ಇಲ್ಲಿನ ಹೊಸ ಜೀವನ ನಿಲಯ ಚರ್ಚ್, ಇವ್ವಾಂಜೆಲಿಕಲ್ ಚರ್ಚ್ ಸೇರಿದಂತೆ ವಿವಿಧ ಗ್ರಾಮಗಳ ಚರ್ಚ್‌ಗಳಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿದೆ.
‘ನಿನ್ನಂತೆಯೇ ನಿನ್ನ ನೆರೆಹೊರೆಯವರನ್ನು ಪ್ರೀತಿಸು’ ಎಂದು ಜಗತ್ತಿಗೆ ಸಾರಿದ ಯೇಸುಕ್ರಿಸ್ತರ ಜನ್ಮದಿನ ಆಚರಿಸಲು ಪಟ್ಟಣ ಹಾಗೂ ಗ್ರಾಮಗಳ ಚರ್ಚ್‍ಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ. ಚರ್ಚ್ ಒಳಗೆ ಮತ್ತು ಹೊರಭಾಗದಲ್ಲಿ ನಕ್ಷತ್ರ ಮಾದರಿಯ ಆಕಾಶ ಬುಟ್ಟಿಗಳನ್ನು ಕಟ್ಟಲಾಗಿದೆ. ಗೋದಲಿ, ಕ್ರಿಸ್ಮಸ್ ಗಿಡಕ್ಕೆ ಬಣ್ಣ ಬಣ್ಣದ ಹಾಳೆಗಳಿಂದ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಚರ್ಚ್‍ಗಳ ಮುಂದೆ ಕ್ರೈಸ್ತ ಸಮುದಾಯದವರು ಹುಲ್ಲಿನ ಮನೆ ಮಾಡಿ, ಕ್ರಿಸ್ತರ ಚಿತ್ರಗಳನ್ನು, ಕ್ರಿಸ್ಮಸ್ ಗಿಡ, ಯೇಸುವಿನ ಶಿಲುಬೆಯ ಬೊಂಬೆಗಳನ್ನು ಇಡಲು ಸಿದ್ಧತೆಗಳನ್ನು ಮಾಡಿದರು.
ಕ್ರೈಸ್ತ ಸಮುದಾಯದ ಮನೆಗಳಲ್ಲಿ ಕ್ರಿಸ್ಮಸ್ ದಿನದ ಸಂಭ್ರಮ ಮನೆ ಮಾಡಿದೆ. ಮನೆ ಮುಂದೆ ವಿದ್ಯುತ್ ದೀಪ ಇರಿಸಿದ ನಕ್ಷತ್ರ ಮಾದರಿ ಆಕಾಶ ಬುಟ್ಟಿಯನ್ನು ನೇತು ಹಾಕಲಾಗಿದೆ. ಪಟ್ಟಣದ ಡಿವಿಜಿ ಮುಖ್ಯರಸ್ತೆಯ ಬೇಕರಿ ಮತ್ತು ಅಲಂಕಾರಿಕ, ಗಾರ್ಮೆಂಟ್ಸ್‌ಗಳಲ್ಲಿ ಕೇಕ್, ಚಾಕೊಲೆಟ್, ಹೊಸ ಬಟ್ಟೆಗಳು, ಬಲೂನ್‍ಗಳ ಖರೀದಿಗಾಗಿ ಜನರು ಮುಗಿಬಿದ್ದಿದ್ದರು. ದೀಪಗಳು, ಕ್ರಿಸ್ಮಸ್ ಗಿಡ ಸೇರಿದಂತೆ ಆಕರ್ಷಕ ಅಲಂಕಾರಿಕ ವಸ್ತುಗಳನ್ನು ಇಡುವ ಕೆಲಸ ಭರದಿಂದ ನಡೆದಿದೆ. ಬೇಕರಿ, ಅಂಗಡಿಗಳಲ್ಲಿ ವಿವಿಧ ಮಾದರಿಯ ಆಕರ್ಷಕ ಕೇಕ್‍ಗಳ ಪ್ರದರ್ಶನ ಮಾಡಲಾಗಿದೆ.
ಡಿ.25ರ ಗುರುವಾರ ಕ್ರಿಸ್ಮಸ್ ದಿನ ಪ್ರಯುಕ್ತ ಕ್ರೈಸ್ತ ಸಮುದಾಯದವರು ವಿಶೇಷ ಸಾಮೂಹಿಕ ಪ್ರಾರ್ಥನೆ ಮಾಡಲು ಸಜ್ಜಾಗಿದ್ದಾರೆ. ಚರ್ಚ್‍ಗಳಲ್ಲಿ ಮೇಣದಬತ್ತಿ ಬೆಳಗಿಸಿ, ಪರಸ್ಪರ ಹಸ್ತಲಾಘವದ ಮೂಲಕ ಕ್ರಿಸ್ಮಸ್ ದಿನದ ಶುಭಾಶಯ ವಿನಿಮಯ ಮಾಡಕೊಳ್ಳಲಿದ್ದಾರೆ.
‘ಪ್ರತಿ ವರ್ಷದಂತೆ ಈ ವರ್ಷವು ಕ್ರಿಸ್ಮಸ್ ದಿನದಂದು ಶಾಂತಿ ಸಂದೇಶ ಸಾರಿದ ಯೇಸುಕ್ರಿಸ್ತರಿಗೆ ಮೇಣದ ಬತ್ತಿ ಬೆಳಗಿಸಲಾಗುವುದು. ಕ್ರೈಸ್ತ ಸಮುದಾಯದವರು ಒಂದೆಡೆ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಸರ್ವಧರ್ಮ ಪ್ರಾರ್ಥನೆ ಹಮ್ಮಿಕೊಳ್ಳಲಾಗಿದೆ. ಯೇಸುವಿನ ಸಂದೇಶದ ಬೈಬಲ್‍ನ ಸಂದೇಶ ತಿಳಿಸಲಾಗುವುದು’ ಎಂದು ಹೊಸಜೀವನ ನಿಲಯ ಚರ್ಚ್ ಪಾಸ್ಟರ್ ಎಚ್.ಎಚ್.ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.