ಚಿಕ್ಕಬಳ್ಳಾಪುರದ ವಾಪಸಂದ್ರ ಪವಿತ್ರ ಅವರ ಮನೆಯಲ್ಲಿ ಕ್ರಿಸ್‌ಮಸ್ ತಯಾರಿ
ಚಿಕ್ಕಬಳ್ಳಾಪುರ: ಸಂತ ಯೇಸು ಕ್ರಿಸ್ತರ ಜನ್ಮದಿನವಾದ ‘ಕ್ರಿಸ್‌ಮಸ್’ ಹಬ್ಬ ಆಚರಣೆಗೆ ನಗರದಲ್ಲಿ ಕ್ರೈಸ್ತ ಸಮುದಾಯದವರು ಭರದಿಂದ ಸಿದ್ಧತೆ ನಡೆಸಿದ್ದಾರೆ. ಡಿ.25ರ ಗುರುವಾರ ಕ್ರಿಸ್‌ಮಸ್ ಹಬ್ಬವಿರುವ ಪ್ರಯುಕ್ತ ಈಗಾಗಲೇ ಮನೆಗಳಲ್ಲಿಯೂ ಸಂಭ್ರಮ ಮನೆ ಮಾಡಿದೆ.
ಹಬ್ಬದ ಸಡಗರಕ್ಕೆ ಗೋದಲಿ ನಿರ್ಮಾಣ, ಸಿಹಿ ತಿನಿಸುಗಳ ತಯಾರಿ, ಕೇಕ್ ಸಿದ್ಧತೆ ಸೇರಿದಂತೆ ಹಬ್ಬವನ್ನು ಕಳೆಗಟ್ಟಿಸಲು ಸಜ್ಜಾಗಿದ್ದಾರೆ.
ಬಿ.ಬಿ.ರಸ್ತೆಯಲ್ಲಿರುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಅನ್ನು ಕ್ಯಾಥೋಲಿಕ್ ಪಂಥದವರು ಮತ್ತು ಸಿಎಸ್‌ಐ (ಚರ್ಚ್ ಆಫ್ ಸೌತ್ ಇಂಡಿಯಾ) ಚರ್ಚ್ ಅನ್ನು ಪ್ರಾಟೆಸ್ಟೆಂಟ್ ಪಂಥದವರು ಶೃಂಗರಿಸುವಲ್ಲಿ ನಿರತರಾಗಿದ್ದಾರೆ.
ಈ ಚರ್ಚ್‌ಗಳಲ್ಲಿ ಗೋದಲಿ, ವಿದ್ಯುತ್ ದೀಪಾಲಂಕಾರ ಪ್ರತಿ ವರ್ಷ ಗಮನ ಸೆಳೆಯುತ್ತವೆ. ವೈವಿಧ್ಯಮಯವಾದ ನಿರ್ಮಾಣಗಳು ನಡೆಯುತ್ತವೆ. ಈ ಬಾರಿಯೂ ಸಿಎಸ್‌ಐ ಚರ್ಚಿನಲ್ಲಿ ಹಡಗಿನ ಮಾದರಿಯಲ್ಲಿ ಚರ್ಚ್ ನಿರ್ಮಾಣವಾಗುತ್ತಿವೆ. ಚರ್ಚ್‌ಗಳ ಒಳಭಾಗಗಳಲ್ಲಿ ಅಲಂಕಾರಗಳು ನಡೆದಿವೆ.
ಮನೆ ಸೇರಿದಂತೆ ಪ್ರಾರ್ಥನಾ ಮಂದಿರಗಳನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳು, ಗಂಟೆಗಳು, ನಕ್ಷತ್ರ, ಕ್ರಿಸ್‌ಮಸ್ ವೃಕ್ಷದಿಂದ ಅಲಂಕರಿಸುವ ಕಾರ್ಯ ಭರದಿಂದ ನಡೆದಿದೆ. ಚರ್ಚ್‌ಗಳಲ್ಲಿ, ಮನೆಗಳಲ್ಲಿ ಬಾಲ ಯೇಸುವಿನ ಜನ್ಮಸ್ಥಳವಾದ ಗೋದಲಿ ನಿರ್ಮಾಣದ ಕಾರ್ಯದ ಅಂತಿಮ ಹಂತದ ಸಿದ್ಧತೆ ನೋಡುಗರ ಮನ ಸೆಳೆಯುತ್ತಿತ್ತು. ಕೆಲವರು ಈಗಾಗಲೇ ಗೋದಲಿಯನ್ನು ನಿರ್ಮಿಸಿದ್ದರೆ ಮತ್ತಷ್ಟು ಮಂದಿಯ ಮನೆಗಳಲ್ಲಿ ನಿರ್ಮಾಣ ಹಂತದಲ್ಲಿದೆ.
ಕ್ರಿಸ್ಮಸ್ ಮರದ ಅಲಂಕಾರ ಸ್ವರ್ಧೆ, ಕ್ಯಾಂಡಲ್ ದೀಪರಾಧನೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ಹಬ್ಬದ ದಿನ ಜರುಗಲಿದೆ. ಕ್ರೈಸ್ತ ಸಮುದಾಯದವರು ಮನೆಗಳು ಹಬ್ಬದ ಸಂಭ್ರಮದಲ್ಲಿ ಮೀಯ್ಯುತ್ತಿವೆ.
ಮನೆಗಳಲ್ಲಿ ಕ್ರಿಸ್‌ಮಸ್ ಟ್ರೀ ಮತ್ತು ಗೋದಲಿ ನಿರ್ಮಾಣಗೊಳ್ಳುತ್ತಿವೆ. ಏಸುಸ್ವಾಮಿ, ಮರಿಯ ಮಾತೆ, ಜೋಸೆಫ್ ಮತ್ತು ಅವರ ಹಿಂದೆ ದೇವದೂತರು, ಮೂವರು ಜೋಯಿಸರು ಏಸುಸ್ವಾಮಿಯನ್ನು ನೋಡಲು ಬಂದ ರೀತಿ, ಕುರುಬರು ಹೀಗೆ ವೈವಿಧ್ಯವಾಗಿ ಗೋದಲಿ ನಿರ್ಮಾಣಗಳು ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.